ಶಬರಿಮಲೆಯಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಕೇರಳ ಹೈಕೋರ್ಟ್ ಆದೇಶ: ಪಂಪಾ ಮೂಲಕ ಪ್ರವೇಶ ನಿಯಂತ್ರಣಕ್ಕೆ ಕ್ರಮ

ವರ್ಚುವಲ್ ಸರದಿ ಸಾಲಿನ ಮೂಲಕ ದರ್ಶನದ ಬುಕಿಂಗ್‌ ಗರಿಷ್ಠ ಮಿತಿ ತಲುಪಿದಾಗ ಸ್ಥಳದಲ್ಲೇ ಬುಕಿಂಗ್ ಮಾಡುವ ಸಂಖ್ಯೆ ಸೀಮಿತಗೊಳಿಸುವಂತೆಯೂ ನ್ಯಾಯಾಲಯ ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿತು.
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ
Published on

ಮಂಡಲ ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜನದಟ್ಟಣೆ ನಿರ್ವಹಣೆಗೆ ಕೇರಳ ಹೈಕೋರ್ಟ್ ಬುಧವಾರ ನಿರ್ದೇಶನಗಳನ್ನು ನೀಡಿದೆ.

ಮಂಡಲ ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ದೇವಾಲಯ ಮತ್ತು ಯಾತ್ರಾ ಮಾರ್ಗದ ಇತರ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದಂತೆ ಶಬರಿಮಲೆ ವಿಶೇಷ ಆಯುಕ್ತರು ನೀಡಿದ್ದ ವರದಿಗಳನ್ನಾಧರಿಸಿ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಜಿ ಗಿರೀಶ್ ಅವರಿದ್ದ ಪೀಠ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪ್ರಾರಂಭಿಸಿತ್ತು.

ವರ್ಚುವಲ್ ಸರದಿ ಸಾಲು ಅಥವಾ ಸ್ಪಾಟ್‌ ಬುಕಿಂಗ್ ಮಾಡಿರುವವರಿಗೆ ಮಾತ್ರ ಪಂಪಾದಿಂದ ಪ್ರವೇಶಾವಕಾಶ ನೀಡುವಂತೆ ಮುಖ್ಯ ಪೊಲೀಸ್ ಸಂಯೋಜಕರಿಗೆ ಆದೇಶ ನೀಡಲಾಗಿದೆ.

"ವರ್ಚುವಲ್ ಸರದಿ ಮತ್ತು ಸ್ಥಳದಲ್ಲೇ ಬುಕಿಂಗ್‌ ಮಾಡುವವರಿಗೆ ಮಾತ್ರ ಪಂಪಾದಿಂದ ಪ್ರವೇಶಾವಾಶ ಕಲ್ಪಿಸುವಂತೆ ಮುಖ್ಯ ಪೊಲೀಸ್‌ ಸಂಯೋಜಕರು ಅಗತ್ಯ ಕ್ರಮ ಕೈಗೊಳ್ಳಬೇಕು.ಅಗತ್ಯ ಸಲಹೆಗಳನ್ನು ನೀಡಿ, ಇದಕ್ಕೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡತಕ್ಕದ್ದು" ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.

ವರ್ಚುವಲ್ ಸರದಿ ಸಾಲಿನ ಮೂಲಕ ದರ್ಶನದ ಬುಕಿಂಗ್‌ ಗರಿಷ್ಠ ಮಿತಿ ತಲುಪಿದಾಗ ಸ್ಪಾಟ್‌ ಬುಕಿಂಗ್ ಮಾಡುವ ಸಂಖ್ಯೆ ಸೀಮಿತಗೊಳಿಸುವಂತೆಯೂ ನ್ಯಾಯಾಲಯ ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿತು.

Also Read
ಶಬರಿಮಲೆ ಪ್ರಕರಣ ವಿಚಾರಣೆ ನಡೆಸುತ್ತಿರುವ 9 ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ದಾವೂದಿ ಬೊಹ್ರಾ ಬಹಿಷ್ಕಾರ ಪ್ರಕರಣ

ಕೆಲ ಉದಾಹರಣೆಗಳನ್ನು ವಿಚಾರಣೆ ವೇಳೆ ಉಲ್ಲೇಖಿಸಿದ ನ್ಯಾಯಮೂರ್ತಿ ನರೇಂದ್ರನ್‌ ಅವರು ಈ ಬಾರಿ ದೇಗುಲದ ಪರಿಸ್ಥಿತಿ ಅಂತಹ ಸ್ಥಳದಲ್ಲಿ ಸಾಮಾನ್ಯವಾಗಿ ನಿರೀಕ್ಷಿಸಲಾಗುವಂತೆ ಇಲ್ಲ ಎಂದು ಹೇಳಿದರು.

ಮಂಗಳವಾರ ನಡೆದಿದ್ದ ಹಿಂದಿನ ವಿಚಾರಣೆ ವೇಳೆ ಪೀಠ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮತ್ತು ಗರಿಷ್ಠ ಯಾತ್ರಾರ್ಥಿಗಳಿಗೆ ದರ್ಶನ ಪಡೆಯಲು ಅನುಕೂಲವಾಗುವಂತೆ ಪಥನೆಟ್ಟಂಪಾಡಿ (18 ಪವಿತ್ರ ಮೆಟ್ಟಿಲುಗಳು) ಮೂಲಕ ಯಾತ್ರಾರ್ಥಿಗಳ ಚಲನೆ ನಿಯಂತ್ರಿಸುವಂತೆ ದೇವಾಲಯದ ಮುಖ್ಯ ಪೊಲೀಸ್ ಸಂಯೋಜಕರಿಗೆ ನಿರ್ದೇಶನ ನೀಡಿತ್ತು. ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲರಿಗೆ ವಿಶೇಷ ಸರತಿ ಸಾಲುಗಳು ಇರಬೇಕು ಎಂದು ಅದು ಆದೇಶಿಸಿತ್ತು.

ಸ್ವಚ್ಛತೆಯ ನಿರ್ವಹಣೆ, ಹೆಚ್ಚುವರಿ ಕೆಲಸಗಾರರು ಮತ್ತು ಸ್ವಯಂಸೇವಕರ ನಿಯೋಜನೆ, ಉಪಹಾರದ ವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಬೇರೆ ನಿರ್ದೇಶನಗಳನ್ನು ನೀಡಲಾಗಿದೆ.

ಜನಸಂದಣಿ ನಿರ್ವಹಣಾ ಚಟುವಟಿಕೆಗಳ ಮೇಲೆ ನಿರಂತರ ಜಾಗರೂಕತೆ ವಹಿಸುವಂತೆ ಮತ್ತು ಮೊಬೈಲ್ ಸ್ಕ್ವಾಡ್‌ಗಳ ಸಂಖ್ಯೆಯನ್ನು 6 ರಿಂದ 12ಕ್ಕೆ ಹೆಚ್ಚಿಸುವಂತೆ ನ್ಯಾಯಾಲಯ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿತು.

ಕೆಲವು ಪ್ರದೇಶಗಳಲ್ಲಿ ಯಾತ್ರಾರ್ಥಿಗಳ ಚಲನವಲನದ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ನಿಯಮಿತವಾಗಿ ಸಾರ್ವಜನಿಕ ಪ್ರಕಟಣೆಗಳ ಮೂಲಕ ಸಿಕ್ಕಿಬಿದ್ದ ಯಾತ್ರಾರ್ಥಿಗಳ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ಇಂದು (ಗುರುವಾರ) ಮುಂದುವರೆಯಲಿದೆ.

Kannada Bar & Bench
kannada.barandbench.com