ಅದಾನಿ ಸಮೂಹಕ್ಕೆ ಆಸ್ತಿ ಮಾರಾಟ, ತನಿಖೆಗೆ ತಡೆ: ಸುಪ್ರೀಂ ಕೋರ್ಟ್‌ಗೆ ಎರಡು ಅರ್ಜಿ ಸಲ್ಲಿಸಿದ ಸಹಾರಾ ಸಮೂಹ

ಅದಾನಿಗೆ ಆಸ್ತಿ ಮಾರಾಟದಿಂದ ಬರುವ ಹಣವನ್ನು ಹೂಡಿಕೆದಾರರ ಮರುಪಾವತಿ ಮಾಡಲಾಗುವುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
Supreme Court and Sahara
Supreme Court and Sahara
Published on

ದೇಶದ ವಿವಿಧೆಡೆ ಇರುವ ತನ್ನ ಆಸ್ತಿಗಳನ್ನು ಅದಾನಿ ಪ್ರಾಪರ್ಟೀಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಮಾರಾಟ ಮಾಡುವುದಕ್ಕಾಗಿ ಸಮ್ಮತಿ ನೀಡಬೇಕು ಹಾಗೂ ತನಿಖಾ ಪ್ರಕ್ರಿಯೆಗಳಿಂದ ರಕ್ಷಣೆ ನೀಡಬೇಕು ಎಂದು ಕೋರಿ ಸಹಾರಾ ಕಂಪೆನಿ ಸಮೂಹ ಸುಪ್ರೀಂ ಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಿದೆ.

ಮಹಾರಾಷ್ಟ್ರದ ಆಂಬಿ ವ್ಯಾಲಿ ಸಿಟಿ , ಮುಂಬೈನ ಹೋಟೆಲ್ ಸಹಾರಾ ಸ್ಟಾರ್, ಲಕ್ನೋದ ಸಹಾರಾ ಶಹೆರ್ ಮತ್ತು ಸಹಾರಾ ಗಂಜ್ ಹಾಗೂ ದೇಶದ ವಿವಿಧೆಡೆ ಇರುವ 88 ಆಸ್ತಿಗಳನ್ನು ಇಡಿಯಾಗಿ ಅದಾನಿ ಕಂಪೆನಿಗೆ ಮಾರಾಟ ಮಾಡಲು ಸಹಾರಾ ಇಂಡಿಯಾ ಕಮರ್ಷಿಯಲ್ ಕಾರ್ಪೊರೇಷನ್ ಲಿಮಿಟೆಡ್ ಸೆಪ್ಟೆಂಬರ್ 6, 2025 ರ ಟರ್ಮ್ ಶೀಟ್ ಅಡಿಯಲ್ಲಿ ಅನುಮತಿ ಕೇಳಿದೆ.

Also Read
ಸೆಬಿ-ಸಹಾರಾ ಖಾತೆಯಿಂದ ಠೇವಣಿದಾರರಿಗೆ ₹5,000 ಕೋಟಿ ಪಾವತಿ: ಕೇಂದ್ರದ ಮನವಿಗೆ ಸುಪ್ರೀಂ ಅಸ್ತು

ಅದಾನಿಗೆ ಆಸ್ತಿ ಮಾರಾಟದಿಂದ ಬರುವ ಹಣವನ್ನು ಹೂಡಿಕೆದಾರರಿಗೆ ಮರುಪಾವತಿ ಮಾಡಲೆಂದು ತೆರೆಯಲಾದ ಸೆಬಿ ಸಹರಾ ಮರುಪಾವತಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸಹರಾ ತಿಳಿಸಿದೆ. ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ನಿರ್ದೇಶನದಂತೆ ಖಾತೆ ಸೃಜಿಸಲಾಗಿತ್ತು. ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಆಸ್ತಿಗಳನ್ನು ದಿವಾಳಿ ಆಸ್ತಿ ಎಂದು ಘೋಷಿಸದೇ ಇದ್ದರೂ ಈಗಾಗಲೇ ತನ್ನ ಸಮೂಹ ₹16,000 ಕೋಟಿ ಜಮಾ ಮಾಡಿರುವುದಾಗಿ ಸಹರಾ ತಿಳಿಸಿದೆ.

ಸಹರಾ ಸಂಸ್ಥಾಪಕ ಸುಬ್ರತಾ ರಾಯ್ ನವೆಂಬರ್ 2023 ರಲ್ಲಿ ಮರಣ ಹೊಂದಿದ್ದು ಆ ಬಳಿಕ ನಿರ್ಧಾರ ತೆಗೆದುಕೊಳ್ಳುವುದು ಸಮೂಹ ಸಂಸ್ಥೆಗಳಿಗೆ ದುಸ್ತರವಾಗಿದೆ. ಜಾರಿ ನಿರ್ದೇಶನಾಲಯ, ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಪೊಲೀಸರು ಹಾಗೂ ಇನ್ನಿತರ ತನಿಖಾ ಸಂಸ್ಥೆಗಳು ಆಸ್ತಿ ಮುಟ್ಟುಗೋಲಿಗೆ ನೀಡುತ್ತಿರುವ ಆದೇಶಗಳು ಕೂಡ ನಿರ್ಧಾರ ತೆಗೆದುಕೊಳ್ಳಲು ಅಡ್ಡಿ ಉಂಟುಮಾಡುತ್ತಿವೆ ಎಂದು ಸಹರಾ ಅಳಲು ತೋಡಿಕೊಂಡಿದೆ.

ಹೀಗಾಗಿ ಅದಾನಿ ಸಮೂಹ ಸಂಸ್ಥೆಗೆ ಆಸ್ತಿ ಮಾರಾಟ ಮಾಡಲು ಅನುಮತಿ ನೀಡಬೇಕು. ಎಲ್ಲಾ ಆಸ್ತಿ ಜಪ್ತಿ ಆದೇಶಗಳನ್ನು ತೆರವುಗೊಳಿಸಬೇಕು. ಮಾರಾಟ ಪ್ರಕ್ರಿಯೆ, ಆಕ್ಷೇಪಣೆ, ಸ್ಪರ್ಧಾತ್ಮಕ ಬೇಡಿಕೆ, ಹೂಡಿಕೆದಾರರು/ಸಾಲಗಾರರ ಹಕ್ಕುಗಳನ್ನು ನಿಭಾಯಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಹಾಗೂ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಅಧಿಕಾರಿಗಳು ತನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳದಂತೆ; ಜೊತೆಗೆ ಪ್ರಕರಣ ದಾಖಲಿಸದಂತೆ ತಡೆಯಾಜ್ಞೆ ನೀಡಬೇಕು ಎಂದು ಅದು ಕೋರಿದೆ.

Also Read
ಸಹಾರಾ ಕಂಪನಿಗಳ ವಿರುದ್ಧ ಎಸ್ಎಫ್ಐಒ ತನಿಖೆ: ದೆಹಲಿ ಹೈಕೋರ್ಟ್ ತಡೆಯಾಜ್ಞೆ ರದ್ದುಗೊಳಿಸಿದ ಸುಪ್ರೀಂ

ಇದೇ ವೇಳೆ ಇನ್ನೊಂದು ಅರ್ಜಿ ಸಲ್ಲಿಸಿರುವ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿಮಿಟೆಡ್ (ಎಸ್‌ಐಆರ್‌ಇಸಿಎಲ್‌) ಆಸ್ತಿ ಮಾರಾಟದಿಂದ ಬರುವ ಹಣವನ್ನು ಮೊದಲು ವೇತನ, ಪಿಂಚಣಿ, ತೆರಿಗೆ ಹಾಗೂ ಸಾಲಗಾರರ ಬಾಕಿ ಪಾವತಿಗೆ ಬಳಸಿಕೊಳ್ಳಬೇಕು ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ ಆತ್ಯಂತಿಕ ನ್ಯಾಯ ಒದಗಿಸಲು ಸಂವಿಧಾನದ 142 ನೇ ವಿಧಿಯಡಿ ವಿಶೇಷ ಪರಮಾಧಿಕಾರ ಚಲಾಯಿಸಬೇಕು ಎಂದು ಸಹರಾ ಸಮೂಹ ಕೋರಿದೆ.

ಸಹರಾ ₹24,030 ಕೋಟಿ ಮೊತ್ತದ ಷೇರುಗಳನ್ನು (ಒಎಫ್‌ಸಿಡಿಗಳು) ಸಂಗ್ರಹಿಸಿದ್ದು ಇದು ಅಕ್ರಮ ಎಂದು ಸೆಬಿ ದೂರಿತ್ತು. 2012 ರಲ್ಲಿ, ಸುಪ್ರೀಂ ಕೋರ್ಟ್ ಬಡ್ಡಿಯೊಂದಿಗೆ ಮೊತ್ತವನ್ನು ಮರುಪಾವತಿಸುವಂತೆ ಸಹಾರಾಗೆ ನಿರ್ದೇಶಿಸಿತ್ತು. ಸಹಾರಾ ಸುಮಾರು ₹16,000 ಕೋಟಿ ಠೇವಣಿ ಇಟ್ಟಿರುವುದಾಗಿ ಹೇಳಿತಾದರೂ ಹೂಡಿಕೆದಾರರಿಗೆ ಬಹಳ ಕಡಿಮೆ ಮೊತ್ತವನ್ನಷ್ಟೇ ಮರಳಿಸಲಾಗಿದೆ ಎಂದು ಸೆಬಿ ಆರೋಪಿಸಿತ್ತು.

ನಂತರ 2023 ಮಾರ್ಚ್ ಹಾಗೂ 2025 ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ₹10,000 ಕೋಟಿ ಸಹಾರಾ ಸಹಕಾರಿ ಸೊಸೈಟಿಗಳ ಹೂಡಿಕೆದಾರರಿಗೆ ಹಿಂತಿರುಗಿಸಲು ಆದೇಶಿಸಿತ್ತು.

Kannada Bar & Bench
kannada.barandbench.com