
ಸಂಭಲ್‌ನ ಮಸೀದಿಯೊಂದರ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಮಾಜವಾದಿ ಪಕ್ಷದ ನಾಯಕ ಮತ್ತು ಸಂಸದ ಜಿಯಾ-ಉರ್-ರೆಹಮಾನ್ ಬರ್ಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಈಚೆಗೆ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ರಾಜೀವ್ ಗುಪ್ತಾ ಮತ್ತು ಮೊಹಮ್ಮದ್ ಅಜರ್ ಹುಸೇನ್ ಇದ್ರಿಸಿ ಅವರಿದ್ದ ಪೀಠ ಎಫ್‌ಐಆರ್ ರದ್ದುಗೊಳಿಸುವ ಬರ್ಕ್ ಅವರ ಮನವಿ ತಿರಸ್ಕರಿಸಿತು. ನಾವು ಎಫ್‌ಐಆರ್ ಓದಿದ್ದು, ಸಂಜ್ಞೇಯ ಅಪರಾಧವನ್ನು ಅದು ಒಳಗೊಂಡಿದೆ. ಹಾಗಾಗಿ ಸುಪ್ರೀಂ ಕೋರ್ಟ್‌ನ ಸ್ಥಾಪಿತ ಕಾನೂನಿನ ಅನ್ವಯ ಎಫ್‌ಐಆರ್ ರದ್ದುಪಡಿಸಲು ಆಗದು ಎಂದು ಪೀಠ ಹೇಳಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕ್ ಅವರನ್ನು ಬಂಧಿಸಿದರೆ ಪೊಲೀಸರು ವಾರಂಟ್ ಇಲ್ಲದೆ ಬಂಧಿಸುವುದಕ್ಕೆ ಸಂಬಂಧಿಸಿದ ಬಿಎನ್‌ಎಸ್‌ಎಸ್‌ನ ಸೆಕ್ಷನ್ 35ನ ನಿರ್ದಿಷ್ಟ ನಿಬಂಧನೆಗಳನ್ನು ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಸರ್ಕಾರ ಪಾಲಿಸಬೇಕು ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಹಿಂಸಾಚಾರದಲ್ಲಿ ಯಾವುದೇ ರೀತಿಯಲ್ಲೂ ತಾವು ತೊಡಗಿರಲಿಲ್ಲ. ಉತ್ತರಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರ ತನಗಹೆ ಕಿರುಕುಳ ನೀಡಲು ಮತ್ತು ಸುಳ್ಳು ಆರೋಪ ಮಾಡುವುದಕ್ಕಾಗಿ ತಮ್ಮನ್ನು ಗುರಿಯಾಗಿಸಿಕೊಂಡಿದೆ ಎಂದು ಬರ್ಕ್ ಆರೋಪಿಸಿದ್ದರು.
ನವೆಂಬರ್ 19 ರಂದು, ಸಂಭಲ್‌ನ ಸಿವಿಲ್ ನ್ಯಾಯಾಲಯ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುವಂತೆ ವಕೀಲ ಕಮಿಷನರ್‌ಗೆ ಸೂಚಿಸಿತ್ತು. ಆದೇಶದ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಐವರು ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿದ್ದರು.
ಮೊಘಲರ ಕಾಲದಲ್ಲಿ ಧ್ವಂಸ ಮಾಡಲಾದ ದೇವಾಲಯದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ವಕೀಲ ಹರಿಶಂಕರ್ ಜೈನ್ ಹಾಗೂ ಏಳು ಮಂದಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ವಿಚಾರಣಾ ನ್ಯಾಯಾಲಯ ಈ ನಿರ್ದೇಶನ ನೀಡಿತ್ತು.