
ಭಾರತದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿಲ್ಲವಾದರೂ ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಜನ ಕುಟುಂಬ ರೂಪಿಸಿಕೊಳ್ಳಬಾರದು ಎಂದರ್ಥವಲ್ಲ ಎಂಬುದಾಗಿ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ ಎಂಎ ಮತ್ತು ವೆಲ್ಲೂರು ಪೊಲೀಸ್ ಅಧೀಕ್ಷಕರ ನಡುವಣ ಪ್ರಕರಣ].
ಸುಪ್ರಿಯೋ @ ಸುಪ್ರಿಯಾ ಚಕ್ರವರ್ತಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ , ಎಲ್‌ಜಿಬಿಟಿಕ್ಯೂಐಎ+ ಜೋಡಿಗೆ ಮದುವೆಯಾಗುವ ಮೂಲಭೂತ ಹಕ್ಕನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಿಯಥನ್ ಮತ್ತು ವಿ ಲಕ್ಷ್ಮಿನಾರಾಯಣನ್ ಅವರಿದ್ದ ಪೀಠ ಒಪ್ಪಿಕೊಂಡರೂ ಕುಟುಂಬ ರೂಪಿಸಿಕೊಳ್ಳಲು ಮದುವೆಯೊಂದೇ ಮಾರ್ಗವಲ್ಲ. 'ಆಯ್ಕೆ ಮಾಡಿಕೊಳ್ಳುವ ಕುಟುಂಬ' ಎಂಬ ಪರಿಕಲ್ಪನೆ ಇದೀಗ ಎಲ್‌ಜಿಬಿಟಿಕ್ಯೂಐಎ+ ನ್ಯಾಯಶಾಸ್ತ್ರದಲ್ಲಿ ಉತ್ತಮ ರೀತಿಯಲ್ಲೇ ನೆಲೆಗೊಂಡಿದ್ದು ಅಂಗೀಕೃತವಾಗಿದೆ ಎಂದಿತು.
ಎಲ್‌ಜಿಬಿಟಿಕ್ಯೂಐಎ+ ಸಂಗಾತಿಗಳ ನಡುವಿನ ಸಿವಿಲ್ ಯೂನಿಯನ್ (ವಿವಾಹಕ್ಕೆ ಸರಿಸಮನಾದ ಕಾನೂನು ಮಾನ್ಯತೆ ಇರುವ ಸಂಬಂಧ) ಮಾನ್ಯತೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯ ಪೀಠ ಕರೆ ನೀಡಿರುವ ಬಗ್ಗೆ ನ್ಯಾಯಾಲಯ ಗಮನ ಸೆಳೆಯಿತು.
ಪ್ರಸಕ್ತ ಪ್ರಕರಣದಲ್ಲಿ ಮಹಿಳಾ ಸಲಿಂಗ ಜೋಡಿಯ ಸಂಗಾತಿಯಲ್ಲಿ ಒಬ್ಬರನ್ನು ಬಲವಂತವಾಗಿ ಬಂಧಿಸಿ ಇಬ್ಬರನ್ನೂ ಬೇರ್ಪಡಿಸಲಾಗಿತ್ತು. ಆ ಜೋಡಿಗೆ ರಕ್ಷಣೆ ನೀಡುವಂತೆ ಸೂಚಿಸುವ ವೇಳೆ ವಿಭಾಗೀಯ ಪೀಠ ಈ ಅವಲೋಕನ ಮಾಡಿದೆ.
ತನ್ನ ಮಗಳು ಮಾದಕ ವ್ಯಸನಿಯಾಗಿದ್ದು ಅರ್ಜಿದಾರೆ ಆಕೆಯನ್ನು ದಾರಿ ತಪ್ಪಿಸಿದ್ದಾಳೆ ಎಂದು ಬಂಧಿತೆಯ ತಾಯಿ ಹೇಳಿಕೊಂಡಿದ್ದರು. ಆದರೆ ಬಂಧಿತೆಯೊಂದಿಗೆ ಮಾತುಕತೆ ನಡೆಸಿದ ನ್ಯಾಯಾಲಯ ಆಕೆಯ ತಾಯಿ ಹೇಳಿದ್ದು ಸುಳ್ಳು ಎಂದು ತಳ್ಳಿಹಾಕಿತು.
ದ್ವಿಲಿಂಗಿಯಾಗಿದ್ದ (ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಪ್ರಣಯ ಆಕರ್ಷಣೆಗೆ ಒಳಗಾಗುವವರು) ತಮ್ಮ ಮಗ ಹಾಗೂ ಲೇಖಕ ವಿಕ್ರಮ್ ಸೇಠ್ ಅವರಿಗೆ ಬೆಂಬಲವಾಗಿ ನಿಂತಿದ್ದ ದೆಹಲಿ ಹೈಕೋರ್ಟ್ ಪ್ರಥಮ ಮಹಿಳಾ ನ್ಯಾಯಮೂರ್ತಿ ಲೀಲಾ ಸೇಠ್ ಅವರನ್ನು ಇದೇ ವೇಳೆ ಸ್ಮರಿಸಿದ ನ್ಯಾಯಾಲಯ ಪ್ರಸ್ತುತ ಪ್ರಕರಣದ ಬಂಧಿತೆಯ ತಾಯಿ ಲೀಲಾ ಸೇಠ್ ಅಲ್ಲ. ಆಕೆ ಈ ಸಂಬಂಧ ಬಹಿರಂಗವಾಗುವುದನ್ನು ಬಯಸದೆ ಇರುವುದು ಅರ್ಥವಾಗುವಂಥದ್ದೇ. ನಮ್ಮ ಸಮಾಜ ಇನ್ನೂ ಸಂಪ್ರದಾಯವಾದಿಯಾಗಿದೆ ಎಂದು ನುಡಿಯಿತು.
ಲೈಂಗಿಕ ದೃಷ್ಟಿಕೋನವು ಸ್ವಯಂ ನಿರ್ಣಯ, ಘನತೆ ಮತ್ತು ಸ್ವಾತಂತ್ರ್ಯದ ಮೂಲಭೂತ ಅಂಶಗಳಲ್ಲಿ ಒಂದಾಗಿದೆ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು. ಎಲ್ಜಿಬಿಟಿಕ್ಯೂ+ ವ್ಯಕ್ತಿಗಳನ್ನು ವಿವರಿಸಲು "ಕ್ವೀರ್" ಎಂಬ ಪದ ಬಳಸುತ್ತಿರುವುದನ್ನು ಅದು ಪ್ರಶ್ನಿಸಿತು. ಯಾವುದೇ ಶಬ್ದಕೋಶದಲ್ಲಿ ಗಮನಿಸಿದರೂ ಈ ಪದದ ಅರ್ಥ ವಿಲಕ್ಷಣತೆ ಎಂದಿದೆ. ಆದರೆ, ಸಲಿಂಗತೆ ವಿಲಕ್ಷಣ ಅಲ್ಲದಿರುವಾಗ ಅದನ್ನು ಹಾಗೆ ಏಕೆ ಕರೆಯಬೇಕು ಎಂದು ನ್ಯಾಯಾಲಯ ಕೇಳಿತು.
ಕಡೆಗೆ ನ್ಯಾಯಾಲಯ ಬಂಧಿತೆ ತನ್ನ ಸಲಿಂಗ ಸಂಗಾತಿಯೊಂದಿಗೆ ಬದುಕಲು ಅರ್ಹಳಾಗಿದ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಕುಟುಂಬ ಬಂಧಿಸಿ ಇರಿಸಿಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿತು. ಜೋಡಿಗೆ ರಕ್ಷಣೆ ನೀಡದೆ ಇರುವ ಪೊಲೀಸರನ್ನು ಟೀಕಿಸಿದ ನ್ಯಾಯಾಲಯ ಸೂಕ್ತ ರಕ್ಷಣೆ ಒದಗಿಸುವಂತೆ ತಾಕೀತು ಮಾಡಿತು.
[ತೀರ್ಪಿನ ಪ್ರತಿ]