ಸಂತೋಷ್‌ ಪ್ರಕರಣ: ಎಸ್‌ಎಫ್‌ಎಸ್‌ಎಲ್‌ ದತ್ತಾಂಶ, ಮಹಜರು ಪ್ರಕ್ರಿಯೆ ವಿಡಿಯೊ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ

ಸಂತೋಷ್‌ ಪಾಟೀಲ್‌ ಸಹೋದರ ದೂರುದಾರ ಪ್ರಶಾಂತ್‌ ಜಿ. ಪಾಟೀಲ್ ಅವರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ವಿವಿಧ ದಾಖಲೆಗಳನ್ನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ (ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ) ಕೋರಿಕೆ ಸಲ್ಲಿಸಿದ್ದಾರೆ.
K S Eshwarappa
K S Eshwarappa

ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮಹಜರಿನ ಸಂದರ್ಭದಲ್ಲಿ ಸಂಗ್ರಹಿಸಿರುವ ಎಡಿಟ್‌ ಮಾಡದಿರುವ ಇಡೀ ಸಿಸಿಟಿವಿ ತುಣುಕು ಮತ್ತು ಎರಡು ಹಾರ್ಡ್‌ ಡ್ರೈವ್‌ಗಳನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲು ಆದೇಶಿಸಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದೆ. ಸಂತೋಷ್‌ ಪಾಟೀಲ್‌ ಸಹೋದರ ದೂರುದಾರ ಪ್ರಶಾಂತ್‌ ಜಿ. ಪಾಟೀಲ್ ಅವರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ವಿವಿಧ ಸಾಕ್ಷ್ಯ, ದಾಖಲೆಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪಡೆಯುವಂತೆ ಮನವಿ ಮಾಡಿದ್ದಾರೆ.

ಅಲ್ಲದೇ, ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯವು (ಎಸ್‌ಎಫ್‌ಎಸ್‌ಎಲ್‌) ಸಂಗ್ರಹಿಸಿರುವ ದತ್ತಾಂಶದ ಪ್ರತಿ ಮತ್ತು ಮಹಜರು ಪ್ರಕ್ರಿಯೆಯ ವಿಡಿಯೊ ತುಣಕುಗಳ ಸಲ್ಲಿಕೆಗೂ ಸಹ ಆದೇಶಿಸಬೇಕು ಎಂದೂ ಕೋರಲಾಗಿದೆ.

ಸಂತೋಷ್‌ ಪಾಟೀಲ್‌ ಆತ್ಯಹತ್ಯೆ ವಿಚಾರ ಗೊತ್ತಾಗುತ್ತಿದ್ದಂತೆ ಉಡುಪಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಸಂತೋಷ್‌ ಪಾಟೀಲ್‌ ಅವರ ಎರಡು ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ಎಸ್‌ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. 2022ರ ಏಪ್ರಿಲ್‌ 13ರಂದು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಮಹಜರು ನಡೆಸಲಾಗಿದ್ದು, ಎರಡು ಹ್ಯಾಂಡ್‌ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳ ಮಹಜರು ನಡೆಸುವ ಈ ಸಂದರ್ಭದಲ್ಲಿ ಇಡೀ ಪ್ರಕ್ರಿಯೆಯನ್ನು ವಿಡಿಯೊ ಮಾಡಲಾಗಿದೆ. ಸದರಿ ವಿಡಿಯೊವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

2022ರ ಮೇ 3ರಂದು ವಿಕಾಸ್‌ ಅವರ ಎರಡು ಫೋನ್‌ಗಳು ಹಾಗೂ ಮೇ 4ರಂದು ಶ್ರೀಕಾಂತ್‌ ಗಿಡ್ಡಬಸವಣ್ಣನವರ್‌ ಅವರ ಒಂದು ಫೋನ್‌ ಸೇರಿದಂತೆ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದು ಅವುಗಳನ್ನು ಎಸ್‌ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಜೂನ್‌ 16ರಂದು ಎಸ್‌ಎಫ್‌ಎಸ್‌ಎಲ್‌ ಮೊಬೈಲ್‌ ಫೋನ್‌ಗಳನ್ನು ತನಿಖಾಧಿಕಾರಿಗೆ ಹಿಂದಿರುಗಿಸಿದೆ. ಸಂತೋಷ್‌ ಪಾಟೀಲ್‌ ಫೋನ್‌ಗಳಿಂದ ಪಡೆಯಲಾದ ದತ್ತಾಂಶವನ್ನು ತನಿಖಾಧಿಕಾರಿಗೆ 1ಟಿಬಿ ಹಾರ್ಡ್‌ ಡಿಸ್ಕ್‌ಗೆ ಹಾಕಿಕೊಡಲಾಗಿದೆ (ಇದರಲ್ಲಿ ಸಾಫ್ಟ್‌ ಮತ್ತು ಹಾರ್ಡ್‌ ಕಾಪಿ ಎರಡೂ ಸೇರಿದೆ). ಜೂನ್‌ 18ರಂದು ವಿಕಾಸ್‌ ಮತ್ತು ಶ್ರೀಕಾಂತ್‌ ಅವರ ಮೊಬೈಲ್‌ಗಳನ್ನು ತನಿಖಾಧಿಕಾರಿಗೆ ಎಸ್‌ಎಫ್‌ಎಸ್‌ಎಲ್‌ ಸಲ್ಲಿಸಿದ್ದು, ಸದರಿ ಮೊಬೈಲ್‌ಗಳಿಂದ ಸಂಗ್ರಹಿಸಿರುವ ದತ್ತಾಂಶವನ್ನು ತೊಷಿಬಾ 1ಟಿಬಿ ಹಾರ್ಡ್‌ಡಿಸ್ಕ್‌ನಲ್ಲಿ ಹಾಕಿ ತನಿಖಾಧಿಕಾರಿಗೆ ನೀಡಲಾಗಿದೆ.

ತನಿಖಾಧಿಕಾರಿಯು ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಾಗ ಎಸ್‌ಎಫ್‌ಎಸ್‌ಎಲ್‌ ಸಲ್ಲಿಸಿರುವ ಹಾರ್ಡ್‌ ಡ್ರೈವ್‌ ಮತ್ತು ದತ್ತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಸತ್ಯವನ್ನು ಬಯಲಿಗೆಳೆಯಲು ಮೇಲೆ ಉಲ್ಲೇಖಿಸಿರುವ ಹ್ಯಾಂಡ್‌ಸೆಟ್‌ಗಳಿಂದ ತೆಗೆಯಲಾದ ದತ್ತಾಂಶ ಅತ್ಯಗತ್ಯ. ಎಸ್‌ಎಫ್‌ಎಸ್‌ಎಲ್‌ ನೀಡಿರುವ ದತ್ತಾಂಶವನ್ನು ನ್ಯಾಯಾಲಯದ ಗಮನಕ್ಕೆ ತರದ ಹೊರತು, ಸಂಗ್ರಹಿಸಿರುವ ದತ್ತಾಂಶವನ್ನು ದೂರುದಾರರಿಗೆ ನೀಡದ ಹೊರತು ಸತ್ಯ ಕಂಡುಕೊಳ್ಳಲಾಗದು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದಲ್ಲಿ ತನಿಖಾಧಿಕಾರಿ ಸಲ್ಲಿಸಿರುವ ʼಬಿʼ ವರದಿಗೆ ಪ್ರತಿಭಟನಾ ಅರ್ಜಿ ಸಲ್ಲಿಸಲು ಮತ್ತು ಎಲ್ಲಾ ಆಧಾರಗಳನ್ನು ಆಧರಿಸಲು ಎಸ್‌ಎಫ್‌ಎಸ್‌ಎಲ್‌ ಸಂಗ್ರಹಿಸಿ, ತನಿಖಾಧಿಕಾರಿಗೆ ನೀಡಿರುವ ದತ್ತಾಂಶವನ್ನು ದೂರುದಾರರ ಜೊತೆ ಹಂಚಿಕೊಳ್ಳಬೇಕು. ಸತ್ಯ ಬಯಲಿಗೆ ಎಳೆಯುವ ನಿಟ್ಟಿನಲ್ಲಿ ತನಿಖಾಧಿಕಾರಿಗೆ ಮೇಲೆ ಉಲ್ಲೇಖಿಸಿದ ಹಾರ್ಡ್‌ ಡಿಸ್ಕ್‌ಗಳನ್ನು ಸಲ್ಲಿಸಲು ನಿರ್ದೇಶಿಸುವುದು ನ್ಯಾಯಸಮ್ಮತ. ಎಸ್‌ಎಫ್‌ಎಸ್‌ಎಲ್‌ ಸಂಗ್ರಹಿಸಿರುವ ದತ್ತಾಂಶದ ಕಾಪಿಯನ್ನೂ ದೂರುದಾರರಿಗೆ ನೀಡಲು ಆದೇಶಿಸಬೇಕು ಎಂದು ಕೋರಲಾಗಿದೆ.

Also Read
ಸಂತೋಷ್‌ ಪ್ರಕರಣ: ಈಶ್ವರಪ್ಪ, ಪುತ್ರ ಕಾಂತೇಶ್‌ ಕರೆ ದಾಖಲೆ, ಸಿಸಿಟಿವಿ ತುಣುಕು ಸಲ್ಲಿಸಲು ಪೊಲೀಸರಿಗೆ ನ್ಯಾಯಾಲಯ ಆದೇಶ

ಇಡೀ ಪ್ರಕರಣದ ಮಹಜರನ್ನು ತನಿಖಾಧಿಕಾರಿಯೂ ವಿಡಿಯೊ ಮಾಡಿಸಿದ್ದಾರೆ. ಮಹಜರು ಮತ್ತು ತನಿಖೆಯ ಎಲ್ಲಾ ಹಂತದಲ್ಲೂ ತನಿಖಾಧಿಕಾರಿಯು ವಿಡಿಯೊಗ್ರಾಫರ್‌ ನೆರವು ಪಡೆದಿದ್ದಾರೆ. ಇಡೀ ಪ್ರಕ್ರಿಯೆಯನ್ನು ವಿಡಿಯೊ ಮಾಡಿ ಅದನ್ನು ತನಿಖಾಧಿಕಾರಿ ತಮ್ಮ ಬಳಿ ಏತಕ್ಕಾಗಿ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಅಂತಿಮ ವರದಿ ಸಲ್ಲಿಸುವಾಗ ಎಡಿಟ್‌ ಮಾಡದಿರುವ ವಿಡಿಯೊವನ್ನು ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಮೇಲೆ ಉಲ್ಲೇಖಿಸಿರುವ ದಾಖಲೆಗಳನ್ನು ಒದಗಿಸದ ಹೊರತು ಪ್ರತಿಭಟನಾ ಅರ್ಜಿ ಸಲ್ಲಿಸಲು ದೂರುದಾರರಿಗೆ ಕಷ್ಟವಾಗಲಿದೆ ಎಂದು ವಿವರಿಸಲಾಗಿದೆ.

ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆ ಕೆಲಸದ ಹಣ ಬಿಡುಗಡೆಗೆ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದ ಸಂತೋಷ್‌ ಪಾಟೀಲ್‌ ಅವರು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಏಪ್ರಿಲ್‌ 11ರಂದು ಶವವಾಗಿ ಪತ್ತೆಯಾಗಿದ್ದರು. ಸಂತೋಷ್‌ ಸಹೋದರ ಪ್ರಶಾಂತ್‌ ಪಾಟೀಲ ದೂರು ಆಧರಿಸಿ ಉಡುಪಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಈಶ್ವರಪ್ಪ ಮೊದಲ ಆರೋಪಿಯಾಗಿದ್ದರು.

Related Stories

No stories found.
Kannada Bar & Bench
kannada.barandbench.com