ಜನರಲ್ಲಿ ಕಾನೂನು ಜಾಗೃತಿ ಮೂಡಿಸುವುದರಿಂದ ʼಡಾಕೆಟ್ ಎಕ್ಸ್‌ಕ್ಲೂಷನ್ʼ ಕಡಿಮೆ ಆಗುತ್ತದೆ: ನ್ಯಾ. ಅಬ್ದುಲ್ ನಜೀರ್
ಜನರಿಗೆ ಮನಮುಟ್ಟುವ ಹಾಗೆ ಕಾನೂನು ಅರಿವು ಮೂಡಿಸುವುದರಿಂದ ಡಾಕೆಟ್ ಎಕ್ಸ್‌ಕ್ಲೂಷನ್ ಕಡಿಮೆ ಆಗುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು.
ಕಳೆದ ಭಾನುವಾರದಿಂದ ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ನ್ಯಾಯಮೂರ್ತಿಗಳು ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಮೂಡುಬಿದರೆಯಲ್ಲಿ ಆಯೋಜಿಸಲಾಗಿದ್ದ ಕಾನೂನು ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
“ನ್ಯಾಯಾಂಗದ ಎರಡು ಅತಿದೊಡ್ಡ ಸವಾಲುಗಳು ಏನೆಂದರೆ ಡಾಕೆಟ್ ಎಕ್ಸ್‌ಪ್ಲೋಷನ್ ಮತ್ತು ಡಾಕೆಟ್ ಎಕ್ಸ್‌ಕ್ಲೂಷನ್. ಡಾಕೆಟ್ ಎಕ್ಸ್‌ಪ್ಲೋಷನ್ ಎಂದರೆ ಜನಸಂಖ್ಯೆ, ನ್ಯಾಯಾಂಗ ಮೂಲ ಸೌಕರ್ಯ ಕೊರತೆ ಇತ್ಯಾದಿಗಳಿಂದಾಗಿ ಪ್ರಕರಣಗಳು ತೀರ್ಮಾನವಾಗದೇ ಇರುವುದು. ನನ್ನ ಜನ್ಮ ಸ್ಥಾನವಾದ ಮೂಡುಬಿದಿರೆಯಲ್ಲೇ ಈಗ ಸುಮಾರು ನಾಲ್ಕೂವರೆ ಸಾವಿರದಷ್ಟು ಪ್ರಕರಣಗಳು ಬಾಕಿ ಇವೆ. ಒಂದು ಲೆಕ್ಕದಲ್ಲಿ ಇದು ಸಂತೋಷದ ವಿಷಯವೇ. ಏಕೆಂದರೆ ಜನರಿಗೆ ತಮ್ಮ ಹಕ್ಕನ್ನು ಕೇಳಬೇಕು ಎಂಬ ಅರಿವು ಮೂಡಿದೆ. ಸಿವಿಲ್ ಪ್ರಕರಣಗಳ ಸಂಖ್ಯೆ ಹೆಚ್ಚಾದುದರ ಅರ್ಥ ಏನೆಂದರೆ ಕ್ರಿಮನಲ್ ಪ್ರಕರಣಗಳು ಕಡಿಮೆ ಆಗುತ್ತವೆ ಎಂಬುದು. ಒಂದು ಸಮಾಜ ಸ್ವಸ್ಥ ಸಮಾಜ ಹೌದೋ ಅಲ್ಲವೋ ಎಂದು ತಿಳಿಯಲು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ತುಲನೆ ಮಾಡಬೇಕಾಗುತ್ತದೆ” ಎಂದರು.
ಮುಂದುವರೆದು “ಸಿವಿಲ್ ಪ್ರಕರಣಗಳು ಹೆಚ್ಚಿದ್ದರೆ ಅದರರ್ಥ ಜನ ತಾವಾಗಿಯೇ ಹೊಡೆದಾಡಿಕೊಳ್ಳದೇ ಸಿವಿಲ್ ಕೋರ್ಟ್‌ಗೆ ಬಂದು ಮೊಕದ್ದಮೆ ಹಾಕಿ ನ್ಯಾಯ ತೀರ್ಮಾನಕ್ಕೆ ತಲೆಬಾಗುತ್ತಾರೆ ಎಂಬುದು. ಕ್ರಿಮಿನಲ್ ಪ್ರಕರಣಗಳ ಸೂಚನೆ ಏನೆಂದರೆ ಅವರವರೇ ಜಗಳ ಮಾಡಿಕೊಳ್ಳುವುದು. ತಾವು ತಾವೇ ತೀರ್ಮಾನ ಮಾಡಿಕೊಳ್ಳಲು ಹೊರಡುವುದು…. ಅದು ಸಮಾಜದ ಸ್ವಾಸ್ಥ್ಯಕ್ಕೆ ಸರಿಯಾದ ಮಾನದಂಡ ಅಲ್ಲ. ಎಲ್ಲಿ ಕ್ರಿಮಿನಲ್ ಪ್ರಕರಣಗಳು ಹೆಚ್ಚಿವೆಯೋ ಆ ಸಮಾಜ ಆರೋಗ್ಯಕರ ಸಮಾಜ ಅಲ್ಲ ಎಂದು ಹೇಳಬೇಕಾಗುತ್ತದೆ… ಆದರೆ, ಹಾಗೆಂದು ಪ್ರಕರಣಗಳ ಸಂಖ್ಯೆ ಹೆಚ್ಚುವುದು ನಮಗೆ ಅಗತ್ಯವಿದೆಯೇ?” ಎಂದು ಪ್ರಶ್ನಿಸಿದರು.
“ಎರಡನೇ ಸಮಸ್ಯೆ ಏನೆಂದರೆ ಡಾಕೆಟ್ ಎಕ್ಸ್‌ಕ್ಲೂಷನ್. ಅಂದರೆ ನೀವು (ಜನ) ಕೋರ್ಟ್‌ಗಳಿಗೂ ಬರುವುದಿಲ್ಲ. ಪೊಲೀಸ್ ಠಾಣೆಗಳಿಗೂ ಬರುವುದಿಲ್ಲ. ಎಲ್ಲೂ ಹೋಗದೆಯೇ ನೀವು ನೀವೇ ನಿಮ್ಮ ಮನೆ ಅಥವಾ ಹಳ್ಳಿಗಳಲ್ಲಿ ಇದ್ದುಕೊಂಡು ಅದನ್ನು ಎದುರಿಸದೇ ಮೌನವಾಗಿ ಅದಕ್ಕೆ (ಸಮಸ್ಯೆಗೆ) ತಲೆಬಾಗುವುದಾಗಿದೆ. ಇದು ಮಾತ್ರ ಖಂಡಿತಾ ಒಳ್ಳೆಯ ಲಕ್ಷಣ ಅಲ್ಲ.” ಎಂದು ಆತಂಕ ವ್ಯಕ್ತಪಡಿಸಿದರು.
ಕಾನೂನು ಸೇವೆಯ ಮಹತ್ವವನ್ನು ವಿವರಿಸುತ್ತಾ ನ್ಯಾಯಮೂರ್ತಿಗಳು “ಕಾನೂನು ಸೇವಾ ಪ್ರಾಧಿಕಾರ ಈ ಎರಡೂ ಸಮಸ್ಯೆಗಳಿಗೆ ಉತ್ತರವಾಗಿದೆ. ಹೆಚ್ಚು ಹೆಚ್ಚು ಪ್ರಕರಣಗಳು ಬಂದಾಗ ಪ್ರಾಧಿಕಾರ ತೀರ್ಮಾನಿಸುತ್ತದೆ. ಡಿ. 18ರಂದು (ಲೋಕ್ ಅದಾಲತ್ ಮೂಲಕ) ಪ್ರಾಧಿಕಾರ ಸುಮಾರು 3,36,000 ಪ್ರಕರಣಗಳನ್ನು ತೀರ್ಮಾನ ಮಾಡಿದೆ. ಪ್ರಾಧಿಕಾರದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಒಂದು ಅನುಕೂಲ ಏನೆಂದರೆ ಅದರ ವಿರುದ್ಧ ಮೇಲ್ಮನವಿಯಾಗಲೀ, ಮರುಪರಿಶೀಲನೆಯಾಗಲೀ ಇಲ್ಲ. ಅದು ಆತ್ಯಂತಿಕವಾದುದು” ಎಂದು ವಿವರಿಸಿದರು.
“ಇನ್ನೊಂದು ವಿಧಾನ ಎಂದರೆ ಜನರಿಗೆ ಮನಮುಟ್ಟುವ ಹಾಗೆ ಕಾನೂನು ಅರಿವು ಮೂಡಿಸುವುದು. ಇದರಿಂದ ಡಾಕೆಟ್ ಎಕ್ಸ್‌ಕ್ಲೂಷನ್ ಕಡಿಮೆ ಆಗುತ್ತದೆ. ನ್ಯಾಯಾಲಯಕ್ಕೆ ಬಂದು ಸಿವಿಲ್ ದಾವೆ ಹಾಕಿ ತೀರ್ಪು ಪಡೆಯುವುದರಲ್ಲಿ ನನಗೆ ಖಂಡಿತಾ ತಪ್ಪು ಕಾಣುವುದಿಲ್ಲ. ಇದನ್ನು ನೀವು ಮಾಡಲೇಬೇಕು. ಆದರೆ ಮೌನವಾಗಿ ಸಹಿಸುವುದು ಆಗಬಾರದು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್‍ನ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ, ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಮತ್ತಿತರರು ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ ಮುರಳೀಧರ ಪೈ, ಹೈಕೋರ್ಟ್ ಮಹಾ ವಿಲೇಖನಾಧಿಕಾರಿ ಟಿ ಜಿ ಶಿವಶಂಕರೇಗೌಡ, ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್ ಶಶಿಧರ ಶೆಟ್ಟಿ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ತಂತ್ರಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಅಪರ ಜಿಲ್ಲಾಧಿಕಾರಿ ಕೆ ಚನ್ನಬಸಪ್ಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್ ವರ್ಣೇಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.