ಹಿರಿಯ ಸಂಶೋಧಕರಾಗಿದ್ದ ಧಾರವಾಡದ ಡಾ. ಎಂ ಎಂ ಕಲಬುರ್ಗಿ ಕೊಲೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಪ್ರವೀಣ್ ಅಲಿಯಾಸ್ ಮಸಾಲಾವಾಲಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಳಗಾವಿಯ ಪ್ರವೀಣ್ ಅಲಿಯಾಸ್ ಮಸಾಲಾವಾ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ನಡೆಸಿದ್ದು, ಆಕ್ಷೇಪಣೆ ಸಲ್ಲಿಸಲು ವಿಶೇಷ ತನಿಖಾ ತಂಡಕ್ಕೆ ನಿರ್ದೇಶಿಸಿದೆ.
ಮೊದಲನೇ ಆರೋಪಿ ಅಮೋಲ್ ಕಾಳೆಯು ಕಲಬುರ್ಗಿ ಅವರನ್ನು ಶೂಟ್ ಮಾಡಿ ಕೊಂದಿದ್ದ ಆರೋಪ ಎದುರಿಸುತ್ತಿದ್ದಾನೆ. ಕಲಬುರ್ಗಿ ಅವರ ಮನೆಗೆ ಕಾಳೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಬಂದು ಕೊಲೆಯಾದ ಬಳಿಕ ಕಾಳೆಯನ್ನು ಬೈಕ್‌ನಲ್ಲಿ ಕರೆದೊಯ್ದ ಆರೋಪ ಪ್ರವೀಣ್ ಮೇಲಿದೆ.
ಪ್ರವೀಣ್ ಈ ಹಿಂದೆ 01.04.2021 ಮತ್ತು 07.03.2024ರಂದು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕೋರಿಕೆಯಂತೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ವಿಚಾರವು ರಾಜ್ಯ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಹಿಂದಿನ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಹೇಳಿದ್ದನ್ನು ಪರಿಗಣಿಸಿ ನ್ಯಾಯಾಲಯವು ಪ್ರವೀಣ್ ಅರ್ಜಿ ತಿರಸ್ಕರಿಸಿತ್ತು.
ಈಗ ನಾಲ್ಕನೇ ಆರೋಪಿ ವಾಸುದೇವ್ ಭಗವಾನ್ ಸೂರ್ಯವಂಶಿ ಅಲಿಯಾಸ್ ವಾಸು ಅಲಿಯಾಸ್ ಮೆಕ್ಯಾನಿಕ್ ಹಾಗೂ ಆರನೇ ಆರೋಪಿ ಅಮಿತ್ ಬಡ್ಡಿ ಅಲಿಯಾಸ್ ಅಮಿತ್ ಅಲಿಯಾಸ್ ಗೋವಿಂದ್ ಅವರಿಗೆ ಕಳೆದ ಜುಲೈ 23 ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ಕಲಬುರ್ಗಿ ಅವರ ಹತ್ಯೆ ಪ್ರಕರಣದ ತುರ್ತು ವಿಚಾರಣೆಗೆ ವಿಶೇಷ ನ್ಯಾಯಾಲಯ ತೆರೆಯುವ ಸರ್ಕಾರದ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಪ್ರವೀಣ್ 31.05.2019ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. 138 ಸಾಕ್ಷಿಗಳ ಪೈಕಿ ಸದ್ಯ 28ನೇ ಸಾಕ್ಷಿಯ ವಿಚಾರಣೆ ನಡೆದಿರುವುದರಿಂದ ಪ್ರವೀಣ್ ಜಾಮೀನು ಪಡೆಯುವ ಆಶಾಭಾವ ಹೊಂದಿದ್ದಾರೆ.
ಪ್ರಕರಣದ ಹಿನ್ನೆಲೆ: 30.08.2015ರ ಬೆಳಿಗ್ಗೆ ದುಷ್ಕರ್ಮಿಗಳು ಮನೆಯಲ್ಲಿದ್ದ ಕಲಬುರ್ಗಿಯವರಿಗೆ ಗುಂಡಿಟ್ಟು ಕೊಂದಿದ್ದರು. ಈ ಸಂಬಂಧ ಅವರ ಪುತ್ರಿ ರೂಪದರ್ಶಿನಿ ಕಿಣಗಿ ಅವರು ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಇಬ್ಬರು ಅನಾಮಧೇಯರ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವು ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಪ್ರವೀಣ್ ಮಸಲಾವಾಲಾ, ವಾಸುದೇವ ಸೂರ್ಯವಂಶಿ, ಶರದ್ ಕಲಾಸ್ಕರ್ ಮತ್ತು ಅಮಿತ್ ಬಡ್ಡಿ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120(ಬಿ), 109, 449, 302, 201 ಮತ್ತು 35 ಜೊತೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 25( 1)(ಎ), 25( 1)( ಬಿ), 27( 1) ಅಡಿ ಆರೋಪಪಟ್ಟಿ ಸಲ್ಲಿಸಿದ್ದಾರೆ.