
ಸುಪ್ರೀಂ ಕೋರ್ಟ್ ಆದೇಶದ ಪರಿಣಾಮ ಕೆಲಸ ಕಳೆದುಕೊಂಡಿರುವ 2016ನೇ ಸಾಲಿನ ಬೋಧಕೇತರ ಸಿಬ್ಬಂದಿಗಾಗಿ ಪಶ್ಚಿಮ ಬಂಗಾಳ ಸರ್ಕಾರ ರೂಪಿಸಿದ್ದ ಸ್ಟೈಪೆಂಡ್ ಯೋಜನೆಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ [ಪ್ರಕಾಶ ಮಂಡಲ್ ಮತ್ತಿತರರು ಹಾಗೂ ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಸೇವೆಯಿಂದ ವಜಾಗೊಂಡಿದ್ದ ಸಾವಿರಾರು ಸಿ ಮತ್ತು ಡಿ ಗ್ರೂಪ್ ನೌಕರರಿಗೆ ರಾಜ್ಯ ಸರ್ಕಾರ ಸ್ಟೈಪೆಂಡ್ ನೀಡುತ್ತಿತ್ತು.
ಸರ್ಕಾರದ ಆದೇಶಕ್ಕೆ ತಡೆ ನೀಡಿದ ನ್ಯಾ. ಅಮೃತಾ ಸಿನ್ಹಾ ಅವರು ಸೆಪ್ಟೆಂಬರ್ 26 ರವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.
ವಂಚನೆಯ ಪರಿಣಾಮ ನೇಮಕಾತಿ ನಡೆದಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ವಂಚನೆಯ ಫಲಾನುಭವಿಗಳಿಗೆ ಸರ್ಕಾರದ ಬೊಕ್ಕಸದಿಂದ ನೆರವು ನೀಡಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ವಂಚನೆಯಲ್ಲಿ ತೊಡಗಿದ್ದರು ಎಂದು ಕಂಡುಬಂದ ಕೆಲ ವ್ಯಕ್ತಿಗಳಿಗೆ ಯಾವುದೇ ಕರ್ತವ್ಯ ವಹಿಸದೆ ಸರ್ಕಾರದ ಬೊಕ್ಕಸದಿಂದ ತಿಂಗಳಿಗೆ ಇಪ್ಪತ್ತೈದು ಸಾವಿರ ಅಥವಾ ಇಪ್ಪತ್ತು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳ ನೇಮಕಕ್ಕಾಗಿ 2016ರಲ್ಲಿ 24,000 ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಿತ್ತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯ ಮೌಲ್ಯಮಾಪನದಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಹೆಚ್ಚಿನ ಅಭ್ಯರ್ಥಿಗಳಿಗೆ ಒಎಂಆರ್ ಶೀಟ್‌ಗಳನ್ನು ಅಕ್ರಮವಾಗಿ ಮೌಲ್ಯಮಾಪನ ಮಾಡುವ ಮೂಲಕ ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
ಹಗರಣದ ಹಿನ್ನೆಲೆಯಲ್ಲಿ ಆಯೋಗ ನೇಮಕಾತಿ ಮಾಡಿದ್ದ 24,000 ಉದ್ಯೋಗಗಳನ್ನು ರದ್ದುಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 3, 2025ರಂದು ಎತ್ತಿಹಿಡಿದಿತ್ತು.
ಆದೇಶದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.