ನೇಮಕಾತಿ ಹಗರಣ: ಸಿಬಿಐ ವಿಶೇಷ ನ್ಯಾಯಾಧೀಶರ ವರ್ಗಾವಣೆಗೆ ಆದೇಶಿಸಿದ ಕಲ್ಕತ್ತಾ ಹೈಕೋರ್ಟ್; ಇ ಡಿ ಅಧಿಕಾರಿಗೆ ಕೊಕ್
ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಂಬಂಧಿಸಿದ ಶಾಲಾ ನೇಮಕಾತಿ ಹಗರಣದ ವಿಚಾರವಾಗಿ ವಿಶೇಷ ನ್ಯಾಯಾಧೀಶರ ನೇಮಕಾತಿಗೆ ಮುಂದಾಗದ ಹಿನ್ನೆಲೆಯಲ್ಲಿ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಸಮನ್ಸ್‌ನಂತೆ ಪಶ್ಚಿಮ ಬಂಗಾಳ ಕಾನೂನು ಸಚಿವ ಮೊಲೊಯ್ ಘಟಕ್ ಸೆಪ್ಟೆಂಬರ್ 27 ರಂದು ನ್ಯಾಯಾಲಯಕ್ಕೆ ಹಾಜರಾದರು [ಶಂತನು ಸಿಟ್ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ಮುಂದೆ ಸಂಜೆ 5 ಗಂಟೆಗೆ ಖುದ್ದಾಗಿ ಹಾಜರಾದ, ಕಾನೂನು ಸಚಿವರು ಡಿಸೆಂಬರ್ 6 ರೊಳಗೆ ನ್ಯಾಯಾಧೀಶರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ನ್ಯಾಯಾಲಯ ಇದನ್ನು ಆದೇಶದಲ್ಲಿ ದಾಖಲಿಸಿಕೊಂಡಿತು.
ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಲಿ ನ್ಯಾಯಾಧೀಶ ಅಪರ್ಣ್ ಚಟರ್ಜಿ ಅವರು ಹೊರಡಿಸಿದ್ದ ಕೆಲ ಆದೇಶಗಳು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾದವು. ನ್ಯಾ ಚಟರ್ಜಿ ಅವರನ್ನು ವರ್ಗಾವಣೆ ಮಾಡುವಂತೆ ತಾನು ಕೆಲ ತಿಂಗಳುಗಳ ಹಿಂದೆ ಹೊರಡಿಸಿದ್ದ ಆದೇಶವನ್ನು ಇನ್ನೂ ಜಾರಿಗೆ ತಾರದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ವರ್ಗಾವಣೆ ಆದೇಶವನ್ನು ಏಕೆ ಜಾರಿಗೆ ತರಲಾಗಿಲ್ಲ ಎಂದು ಆಶ್ಚರ್ಯವಾಗುತ್ತಿದೆ. ಸಿಬಿಐ (ಹಾಲಿ) ನ್ಯಾಯಾಧೀಶರನ್ನು ಯಾರು ರಕ್ಷಿಸುತ್ತಿದ್ದಾರೆ ಎಂದು ಕಾನೂನು ಸಚಿವರ ಖುದ್ದು ಹಾಜರಿಗೆ ಆದೇಶಿಸುವ ಮುನ್ನ ನ್ಯಾಯಾಲಯ ಕೇಳಿತ್ತು. ನ್ಯಾ ಚಟರ್ಜಿ ಅವರನ್ನು ಅಕ್ಟೋಬರ್ 4ರೊಳಗೆ ವರ್ಗಾವಣೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿತು.
ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ವಿರುದ್ಧ ಅದರ ಯಾವುದೇ ಅಧಿಕಾರಿಗಳು ದೂರು ನೀಡದಂತೆ ಅಥವಾ ಸ್ವೀಕರಿಸದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ತಾಕೀತು ಮಾಡಿತು. ಅಂತಹ ಯಾವುದೇ ದೂರನ್ನು ಹೈಕೋರ್ಟ್ ಅನುಮತಿಯಿಲ್ಲದೆ ಪರಿಗಣಿಸುವಂತಿಲ್ಲ ಎಂದು ಅದು ಹೇಳಿತು.
ಬಂಧಿತ ಆರೋಪಿಯೊಬ್ಬರು ಕೆಲವು ಆರೋಪಗಳನ್ನು ಮಾಡಿದ ನಂತರ ಎಸ್‌ಐಟಿ ಸದಸ್ಯರಿಗೆ ಕೊಲ್ಕತ್ತಾ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಸಿಬಿಐ ವಿಶೇಷ ನ್ಯಾಯಾಧೀಶರು ಎಸ್‌ಐಟಿ ಸದಸ್ಯರನ್ನು ವಿಚಾರಣೆಗಾಗಿ ಕೊಲ್ಕತ್ತಾ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ವಿಶೇಷ ಸಿಬಿಐ ನ್ಯಾಯಾಧೀಶರ ಈ ನಡೆಯನ್ನು ಹೈಕೋರ್ಟ್ ಟೀಕಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 18 ರಂದು ನಡೆಯಲಿದೆ.
ತನಿಖಾ ತಂಡದಿಂದ ಇ ಡಿ ಅಧಿಕಾರಿ ತೆಗೆದುಹಾಕಲು ಆದೇಶ
ಮಹತ್ವದ ಬೆಳವಣಿಗೆಯೊಂದರಲ್ಲಿ ಶಾಲಾ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಜಾರಿ ನಿರ್ದೇಶನಾಲಯದ (ಇ ಡಿ) ಸಹಾಯಕ ನಿರ್ದೇಶಕ ಮಿಥಿಲೇಶ್ ಕುಮಾರ್ ಮಿಶ್ರಾ ಅವರನ್ನು ತೆಗೆದುಹಾಕುವಂತೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. [ಸೌಮೆನ್ ನಂದಿ. ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].
ಮಿಶ್ರಾ ಅವರನ್ನು ಎಸ್‌ಐಟಿಯಿಂದ ತಕ್ಷಣವೇ ತೆಗೆದುಹಾಕುವಂತೆ ಇ ಡಿ ನಿರ್ದೇಶಕರಿಗೆ ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತು. ಅಂತಹ ದೊಡ್ಡ ಪ್ರಕರಣವನ್ನು ನಿಭಾಯಿಸುವ ಸಾಮರ್ಥ್ಯ ಅವರಿಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಮಿಶ್ರಾ ಅವರ ಕೆಲಸವನ್ನು ಜವಾಬ್ದಾರಿಯುತ ಅಧಿಕಾರಿಗೆ ವಹಿಸುವಂತೆ ನ್ಯಾಯಾಲಯ ಇ ಡಿ ನಿರ್ದೇಶಕರಿಗೆ ಸೂಚಿಸಿದೆ.