ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ', 'ಜಾತ್ಯತೀತ' ಪದ ತೆಗೆಯಲು ಕೋರಿದ್ದ ಮನವಿ: ಸೋಮವಾರ ತೀರ್ಪು

ತೀರ್ಪು ಕಾಯ್ದಿರಿಸಿದ ಪೀಠ, ಜಾತ್ಯತೀತತೆ ಎಂಬುದು ಸಂವಿಧಾನದ ಮೂಲ ರಚನೆಯ ಭಾಗವಾಗಿದ್ದು 42ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೂ ಪರಿಶೀಲಿಸಿತ್ತು ಎಂದು ನೆನಪಿಸಿತು.
Constitution of India
Constitution of India
Published on

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಎಂಬ ಪದಗಳನ್ನು  ಸಂವಿಧಾನಕ್ಕೆ ಸೇರ್ಪಡೆ ಮಾಡಿರುವ 42ನೇ ತಿದ್ದುಪಡಿ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸೋಮವಾರ (ನವೆಂಬರ್‌ 25) ತೀರ್ಪು ಪ್ರಕಟಿಸಲಿದೆ.

ಶುಕ್ರವಾರ ತನ್ನ ಆದೇಶ ಕಾಯ್ದಿರಿಸಿದ ಸಿಜೆಐ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್‌ ಕುಮಾರ್‌ ಅವರಿದ್ದ ಪೀಠ  ಜಾತ್ಯತೀತತೆ ಎಂಬುದು ಸಂವಿಧಾನದ ಮೂಲ ರಚನೆಯ ಭಾಗವಾಗಿದ್ದು 42ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೂ ಪರಿಶೀಲಿಸಿತ್ತು ಎಂದು ನೆನಪಿಸಿತು.

Also Read
ಸಂವಿಧಾನದ ಪೀಠಿಕೆಯಿಂದ 'ಜಾತ್ಯತೀತ' ಪದ ತೆಗೆಯುವುದರಿಂದ ಸಂವಿಧಾನದ ಜಾತ್ಯತೀತ ಸ್ವರೂಪ ಬದಲಾಗಲ್ಲ: ನ್ಯಾ. ಜೋಸೆಫ್

"42ನೇ ತಿದ್ದುಪಡಿ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆ. ಸಂಸತ್ತು ಈ ಹಿಂದೆ ಮಾಡಿದ್ದೆಲ್ಲವೂ ಶೂನ್ಯ ಎಂದು ಹೇಳಲಾಗದು" ಎಂಬುದಾಗಿ ಸಿಜೆಐ ತಿಳಿಸಿದರು.

ಮಾಜಿ ರಾಜ್ಯಸಭಾ ಸದಸ್ಯ  ಮತ್ತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ ಹಾಗೂ ಬಲರಾಮ್ ಸಿಂಗ್ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಕಳೆದ ತಿಂಗಳು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಪಶ್ಚಿಮದ ಮಸೂರದಿಂದ ನೋಡುವ ಅಗತ್ಯವಿಲ್ಲ ಎಂದಿತ್ತು.

Also Read
ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ', 'ಜಾತ್ಯತೀತ' ಪದಗಳ ತೆಗೆಯಲು ಸ್ವಾಮಿ ಕೋರಿಕೆ: ಸಿಪಿಐ ನಾಯಕನಿಂದ ಆಕ್ಷೇಪಣೆ

ಶುಕ್ರವಾರ ನಡೆದ ವಿಚಾರಣೆ ಉಪಾಧ್ಯಾಯ ಲೋಕಸಭೆ ಅವಧಿ ವಿಸ್ತರಿಸಿದ್ದ ಅಸಾಧಾರಣ ಸಂದರ್ಭದಲ್ಲಿ  42 ನೇ ತಿದ್ದುಪಡಿಯ ಮೂಲಕ ಈ ಷರತ್ತುಗಳನ್ನು ಸೇರಿಸಲಾಗಿದ್ದು ಇದು ಅಸಾಂವಿಧಾನಿಕ. ರಾಜ್ಯಗಳ ಅನುಮೋದನೆಯನ್ನೇ ಪಡೆಯದೆ ಸಂವಿಧಾನವನ್ನು ಮೂಲಭೂತವಾಗಿ ಬದಲಿಸಲಾಗಿದೆ ಎಂದರು.

ಈ ಆತಂಕವನ್ನು ಸಿಜೆಐ ಖನ್ನಾ ಒಪ್ಪಿದರಾದರೂ 42 ನೇ ತಿದ್ದುಪಡಿ ಈಗಾಗಲೇ ನ್ಯಾಯಾಂಗ ಪರಿಶೀಲನೆಗೆ ಒಳಗಾಗಿದೆ ಎಂದು ನೆನಪಿಸಿದರು.

ವಕೀಲರಾದ ವಿಷ್ಣು ಶಂಕರ್ ಜೈನ್ ಮತ್ತು ಅಲಖ್ ಅಲೋಕ್ ಶ್ರೀವಾಸ್ತವ ಕೂಡ ಇಂದು ವಾದ ಮಂಡಿಸಿದರು. ಡಾ.ಸುಬ್ರಮಣ್ಯಂ ಸ್ವಾಮಿ ಖುದ್ದು ಹಾಜರಿದ್ದರು. "ನಿರ್ದಿಷ್ಟ ಸಿದ್ಧಾಂತ ಪಾಲಿಸುವಂತೆ ಈ ದೇಶದ ಜನರನ್ನು  ಯಾರೂ ಒತ್ತಾಯಿಸಲು ಸಾಧ್ಯವಿಲ್ಲ" ಎಂದು ಜೈನ್ ವಾದಿಸಿದರು. ಆದರೆ ಯಾರೂ ಹಾಗೆ ಮಾಡಿಲ್ಲ ಎಂದು ಸಿಜೆಐ ಮಾರುತ್ತರ ನೀಡಿದರು. 

ಮಿನರ್ವ ಮಿಲ್ಸ್ ಪ್ರಕರಣದಲ್ಲಿ ಜಾತ್ಯತೀತತೆ ಮತ್ತು ಸಮಾಜವಾದ ಎಂಬ ಪದಗಳನ್ನು ಸಮಗ್ರವಾಗಿ ವಿಶ್ಲೇಷಿಸಿಲ್ಲ ಎಂದು ಅರ್ಜಿದಾರರು ವಾದ ಮುಂದುವರೆಸಿದರು. ಆದರೆ ಎಸ್‌ ಆರ್‌ ಬೊಮ್ಮಾಯಿ ಪ್ರಕರಣದಲ್ಲಿ ಜಾತ್ಯತೀತತೆಯ ವ್ಯಾಖ್ಯಾನವನ್ನು ಸಮರ್ಪಕವಾಗಿ ಪರಿಶೀಲಿಸಲಾಗಿದೆ. ಮೂಲಭೂತ ರಚನೆಯ ಸಿದ್ಧಾಂತದ ಒಂದು ಭಾಗ ಜಾತ್ಯತೀತತೆ ಎಂದು ಬೊಮ್ಮಾಯಿ ಪ್ರಕರಣದಲ್ಲಿ ಹೇಳಲಾಗಿದೆ ಎಂದು ಸಿಜೆಐ ಹೇಳಿದರು. ಬಳಿಕ ಪ್ರಕರಣ ತೀರ್ಪನ್ನು ಸೋಮವಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತು.

ಭಾರತೀಯ ಕಮ್ಯುನಿಸ್ಟ್‌ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸದಸ್ಯ ಬಿನೋಯ್‌ ವಿಶ್ವಂ ಅವರು ಈ ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಕೀಲ ಶ್ರೀರಾಮ್ ಪರಾಕ್ಕಟ್ ಮೂಲಕ  ಬಿನೋಯ್‌ ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com