ಅನೇಕ ಕಾರಣಗಳಿಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಂಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಹೊಣೆಗಾರಿಕೆಯನ್ನು ಅನುಭವಿ ನಾಯಕರಾದ ಗದಗ ವಿದಾನಸಭಾ ಕ್ಷೇತ್ರದ ಶಾಸಕರಾಗಿರುವ ಎಚ್ ಕೆ ಪಾಟೀಲ್ ಅವರಿಗೆ ವಹಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಪೂರ್ಣ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಎಚ್ ಕೆ ಪಾಟೀಲರು ಎರಡನೆಯ ಬಾರಿಗೆ ಕಾನೂನು ಮತ್ತು ಸಂಸದೀಯ ಖಾತೆಯ ಹೊಣೆಯನ್ನು ನಿರ್ವಹಿಸುತ್ತಿರುವುದು ವಿಶೇಷ. ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹನ್ನೊಂದು ತಿಂಗಳ ಅಲ್ಪಾವಧಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಪಾಟೀಲರು ಕಾರ್ಯನಿರ್ವಹಿಸಿದ್ದರು.
ಕಾನೂನು ಪದವೀಧರರಾಗಿರುವ ಎಚ್ ಕೆ ಪಾಟೀಲ್ ಅವರು ಎರಡು ಬಾರಿ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಎಸ್ ಎಂ ಕೃಷ್ಣ, ಧರ್ಮಸಿಂಗ್, ಈ ಹಿಂದೆ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಹಾಗೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ವಿವಿಧ ಮಹತ್ವದ ಖಾತೆಗಳನ್ನು ನಿಭಾಯಿಸಿರುವ ಅನುಭವ ಅವರಿಗಿದೆ.
ಸುಮಾರು ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಹನುಮಂತಗೌಡ ಕೃಷ್ಣೇಗೌಡ ಪಾಟೀಲರು ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಕೇವಲ 11 ತಿಂಗಳ ಅವಧಿಯಲ್ಲಿ ಹಲವು ಮಹತ್ತರ ನೀತಿ-ನಿರೂಪಣೆ, ಸುಧಾರಣಾ ಕ್ರಮಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಂಡಿದ್ದರು.
ದೇಶದಲ್ಲೇ ಪ್ರಥಮ ಬಾರಿಗೆ ಅವರ ಅವಧಿಯಲ್ಲಿ ಜಾರಿಗೆ ತಂದ ಉದ್ಯೋಗ, ಆಹಾರ ಭದ್ರತೆ ಮತ್ತು ಮಕ್ಕಳ ಹಕ್ಕುಗಳ ಕಾನೂನುಗಳು ರಾಷ್ಟ್ರೀಯ ನೀತಿಗಳಾಗಿವೆ. ಪಾಟೀಲರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಥಮ ಬಾರಿಗೆ ಅಧಿವೇಶನ ನಡೆದಿದ್ದು, ಬಳಿಕ ಪ್ರತಿವರ್ಷ ಅಲ್ಲಿ ಅಧಿವೇಶನ ನಡೆಸುವುದು ನಿಯಮವಾಗಿ ಬದಲಾಗಿದೆ.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (ಕಿಲ್ಪಾರ್), ವಕೀಲರ ಅಕಾಡೆಮಿ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಲೆ ಎತ್ತಿದ್ದು ಹಾಗೂ ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಹೈಕೋರ್ಟ್ ಪೀಠ ಆರಂಭಿಸಲು ಶಿಲಾನ್ಯಾಸ ನಡೆದಿದ್ದು ಪಾಟೀಲರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಎಂಬುದು ಗಮನಾರ್ಹ.
ಪರಿಷತ್ ಮತ್ತು ವಿಧಾನಸಭೆ ಎರಡಲ್ಲೂ ಕೆಲಸ ಮಾಡಿರುವ ಆಡಳಿತಾತ್ಮಕವಾಗಿ ಸಾಕಷ್ಟು ಅನುಭವಿಯಾಗಿರುವ ಪಾಟೀಲರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಬಿಜೆಪಿ ಆಡಳಿತದಲ್ಲಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯಿದೆಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದವು. ಅಧಿಕಾರಕ್ಕೆ ಬಂದರೆ ಅವುಗಳನ್ನು ಪರಿಶೀಲಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಮೇಲಿಂದ ಮೇಲೆ ಹೇಳುತ್ತಲೇ ಬಂದಿದ್ದಾರೆ. ಈ ನಡುವೆ ಹಿಜಾಬ್, ಮುಸ್ಲಿಮ್ ಮೀಸಲಾತಿ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ, ಜಾತಿಯಾಧಾರಿತ ನಿಗಮಗಳು ಸೇರಿದಂತೆ ಹಲವು ನೀತಿ-ನಿರೂಪಣೆಯ ವಿಚಾರಗಳು ನ್ಯಾಯಾಲಯದ ಮೆಟ್ಟಿಲೇರಿವೆ.
ಇದಲ್ಲದೆ, ವಕೀಲ ಸಮುದಾಯವು ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದನ್ನು ಇಲ್ಲಿ ನೆನೆಯಬಹುದು. ವಕೀಲರಿಗೆ ವಿಮೆ ಕಲ್ಪಿಸುವ ವಿಚಾರವೂ ಸರ್ಕಾರದ ಮಟ್ಟದಲ್ಲಿ ಪ್ರಗತಿಯಲ್ಲಿದೆ. ಇದೆಲ್ಲವನ್ನು ʼಹುಲಕೋಟಿ ಹುಲಿʼ ಎಂದು ಜನಪ್ರಿಯವಾಗಿದ್ದ ಕೆ ಎಚ್ ಪಾಟೀಲರ ಪುತ್ರ, ಸೌಮ್ಯ ಸ್ವಭಾವದ ಎಚ್ ಕೆ ಪಾಟೀಲರು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.