ಜಮ್ಮುವಿನಲ್ಲಿ ರೋಹಿಂಗ್ಯಾಗಳಿಗೆ ನೆಲೆ: ಗಡಿಯಾಚೆಗೆ ಎನ್ಐಎ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ

ಕಿರುಕುಳದ ಕಾರಣದಿಂದಾಗಿ ಪಲಾಯನ ಮಾಡಿದ ರೋಹಿಂಗ್ಯಾಗಳು ಹೇಗೆ ಜಮ್ಮುವಿನಲ್ಲಿ ನೆಲೆ ಕಂಡುಕೊಳ್ಳಲು 2,000 ಕಿ.ಮೀ ದೂರ ಪ್ರಯಾಣಿಸಬಹುದು ಎಂಬುದು ವಿವರಣೆಗೆ ನಿಲುಕುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಜಮ್ಮುವಿನಲ್ಲಿ ರೋಹಿಂಗ್ಯಾಗಳಿಗೆ ನೆಲೆ:  ಗಡಿಯಾಚೆಗೆ ಎನ್ಐಎ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ

ರೋಹಿಂಗ್ಯಾಗಳ ಗಡಿಪಾರು ತಡೆಯಬೇಕೆಂದು ಕೋರಿ ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಜಮ್ಮು ಮೂಲದ ಸರ್ಕಾರೇತರ ಸಂಸ್ಥೆಯಾದ 'ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಸೋಶಿಯಲ್ ಜಸ್ಟೀಸ್' ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದು ಜಮ್ಮುವಿನಲ್ಲಿ ರೋಹಿಂಗ್ಯಾಗಳಿಗೆ ನೆಲೆ ಕಲ್ಪಿಸುತ್ತಿರುವುದು ದೊಡ್ಡ ಷಡ್ಯಂತ್ರದ ಭಾಗವಾಗಿದ್ದು ಇದು ದೇಶವನ್ನು ಅಸ್ಥಿರಗೊಳಿಸಲಿದೆ ಎಂದಿದೆ.

ರೋಹಿಂಗ್ಯಾ ಸಮುದಾಯದ ಸದಸ್ಯ ಮೊಹಮ್ಮದ್ ಸಲೀಮುಲ್ಲಾ ಅವರು ಜಮ್ಮುವಿನಲ್ಲಿ "ಸೆರೆ ಸಿಕ್ಕಿದ್ದಾರೆ" ಎಂದು ವರದಿಯಾಗಿರುವ 150 ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರನ್ನು ಬಿಡುಗಡೆ ಮಾಡಿ ರಕ್ಷಿಸಲು ಮತ್ತು ಅವರಿಗೆ ನಿರಾಶ್ರಿತರ ಕಾರ್ಡ್‌ ಒದಗಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮುಂದಾಗಿದ್ದ ಒಂದು ದಿನಕ್ಕೂ ಮುನ್ನವೇ ಸರ್ಕಾರೇತರ ಸಂಸ್ಥೆ ಈ ಅರ್ಜಿ ಸಲ್ಲಿಸಿದೆ.

Also Read
ವ್ಯಕ್ತಿಯ ಹಕ್ಕುಗಳಿಗಿಂತ ಮಾಧ್ಯಮಗಳ ವಾಕ್ ಸ್ವಾತಂತ್ರ್ಯ ಮಿಗಿಲಲ್ಲ: ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯ

ರೋಹಿಂಗ್ಯಾ ನಿರಾಶ್ರಿತರಿಗೆ ನೆಲೆ ಕಲ್ಪಿಸಿರುವುದು ಉದ್ವಿಗ್ನತೆಯಿಂದ ಕೂಡಿರುವ ಮತ್ತು ಅಂತರರಾಷ್ಟ್ರೀಯ ಸೂಕ್ಷ್ಮ ಪ್ರದೇಶವಾದ ಜಮ್ಮು ಕಾಶ್ಮೀರದ ಜನಸಮೂಹದ ಚಹರೆಯನ್ನು ಬದಲಿಸುವ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಟ್ಟ ಹುನ್ನಾರದ ಭಾಗವಾಗಿದೆ ಎಂದು ವಕೀಲ ರಾಜೀವ್ ಎಂ ರಾಯ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ವಿಸ್ತರಿಸುವ, ದೇಶದ ಸುರಕ್ಷತೆ ಮೇಲೆ ಪರಿಣಾಮ ಬೀರುವ ಸಲುವಾಗಿ ಈ ಬಗೆಯ ಆಶ್ರಯ ಒದಗಿಸುವುದನ್ನು ಸುವ್ಯವಸ್ಥಿತವಾಗಿ ಯೋಜನಾಬದ್ಧವಾಗಿ, ಚಿತಾವಣೆ ರೂಪದಲ್ಲಿ ನಿರ್ವಹಿಸಿ ಕಾರ್ಯರೂಪಕ್ಕೆ ತಂದಿರುವುದು ಹಗಲು ಬೆಳಕಿನಷ್ಟೇ ಸ್ಪಷ್ಟ” ಎಂದು ಅರ್ಜಿ ವಿವರಿಸಿದೆ.

(ಮ್ಯಾನ್ಮಾರ್‌ನ ಪ್ರಮುಖ ರಾಜ್ಯವಾದ) ರಖೈನ್‌ನಿಂದ ಜಮ್ಮುವಿಗೆ ಕಾನೂನು ಬಾಹಿರ ವಲಸೆ ಮತ್ತು ದೇಶಿ ಪ್ರಯಾಣ ಕುರಿತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದರೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಗಡಿಯಾಚೆಗಿನ ತನಿಖೆ ನಡೆಸಲಿದೆ. ಇದರ ಹಿಂದಿರುವ ವ್ಯಕ್ತಿಗಳು, ಕಾರ್ಯಾಚಾರಣಾ ವಿಧಾನ, ದೇಶದೊಳಗಿನ ಅವರ ಪಯಣ ಹಾಗೂ ರಾಖೈನ್‌ನಿಂದ ಪಯಾಯನಗೈದು ಜಮ್ಮುವಿನಲ್ಲಿ ನೆಲೆ ನಿಂತಿರುವುದು ಈ ಎಲ್ಲ ಅಂಶಗಳನ್ನೂ ಹೊರಗೆಡಹಲು ಎನ್‌ಐಎ ತನಿಖೆ ಅಗತ್ಯ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಕಿರುಕುಳದಿಂದಾಗಿ ಪಲಾಯನ ಮಾಡಿದ ರೋಹಿಂಗ್ಯಾಗಳು ಹೇಗೆ ಜಮ್ಮುವಿನಲ್ಲಿ ನೆಲೆ ಕಂಡುಕೊಳ್ಳಲು 2,000 ಕಿ.ಮೀ ಪ್ರಯಾಣಿಸಬಹುದು ಎಂಬುದು 'ವಿವರಣೆಗೆ ನಿಲುಕುವುದಿಲ್ಲ' ಎಂದೂ ಹೇಳಲಾಗಿದೆ.

ರಖೈನ್‌ನಿಂದ ಜಮ್ಮುವಿಗೆ ನೇರವಾಗಿ ಗೆರೆ ಎಳೆದರೂ ಅದು 2,000 ಕಿ.ಮೀಗಿಂತಲೂ ಹೆಚ್ಚು ದೂರವಾಗುತ್ತದೆ. ಶೋಷಣೆಯಿಂದ ಪಲಾಯನ ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವ ಜನ ಅಷ್ಟು ದೂರದ ಪ್ರಯಾಣ ಹೇಗೆ ಮಾಡಿದರು ಎಂದು ಅರ್ಥವಾಗದು. ಅಲ್ಲದೆ ಸೀಮಿತ ಉದ್ಯೋಗ ಮತ್ತು ಆರ್ಥಿಕ ಅವಕಾಶವಿರುವ ಜಮ್ಮುವಿನಂತಹ ಪ್ರದೇಶದಲ್ಲಿ ನೆಲೆ ಕಲ್ಪಿಸಿರುವುದು ದೊಡ್ಡ ಷಡ್ಯಂತ್ರದ ಭಾಗವಾಗಿದೆ” ಎಂದು ಅರ್ಜಿ ಹೇಳಿದೆ.

ಹಿಂಸಾತ್ಮಕ ಮತ್ತು ಪ್ರತ್ಯೇಕತಾವಾದಿ ಇತಿಹಾಸ ಹೊಂದಿರುವ ಅಕ್ರಮ ವಲಸಿಗರಾದ ರೋಹಿಂಗ್ಯಾಗಳು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಹೆಚ್ಚು ಅಸ್ಥಿರವಾದ ಜನಸಮೂಹ ಹೊಂದಿರುವ ಮತ್ತು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಅನಿಶ್ಚಿತ ಪ್ರದೇಶವಾದ ಜಮ್ಮುವಿನಲ್ಲಿ ನೆಲೆಸಿದ್ದಾರೆ. ಇದು ದೊಡ್ಡ ಷಡ್ಯಂತ್ರ ಮತ್ತು ಸಂಘಟಿತ ಕಾರ್ಯತಂತ್ರದ ಭಾಗವಾಗಿದೆ. ಜಮ್ಮು ನಿವಾಸಿಗಳ ಮೂಲಭೂತ ಹಕ್ಕುಗಳು ಮತ್ತು ಒಟ್ಟಾರೆಯಾಗಿ ದೇಶದ ಜನಸಮೂಹದ ಎಲ್ಲಾ ಮೂಲಭೂತ ಹಕ್ಕುಗಳು ಅಪಾಯದಲ್ಲಿವೆ ಎಂದು ಅರ್ಜಿ ಆರೋಪಿಸಿದೆ.

Related Stories

No stories found.
Kannada Bar & Bench
kannada.barandbench.com