ಲೈಂಗಿಕ ಕಿರುಕುಳ ಆರೋಪವನ್ನು ಚಾಪೆಯ ಅಡಿ ಸರಿಸಲಾಗದು: ಮಧ್ಯಪ್ರದೇಶ ನ್ಯಾಯಾಧೀಶರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಕಿರಿಯ ನ್ಯಾಯಿಕ ಅಧಿಕಾರಿಗೆ ಅನುಚಿತ ವಾಟ್ಸಾಪ್‌ ಸಂದೇಶಗಳನ್ನು ಕಳುಹಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಶಂಭೂ ಸಿಂಗ್‌ ರಘುವಂಶಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಲಾಗಿತ್ತು.
Stop Sexual Harassment
Stop Sexual Harassment

ಕಿರಿಯ ನ್ಯಾಯಿಕ ಅಧಿಕಾರಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ದೂರು ನೀಡಿದ್ದಕ್ಕೆ ಸಂಬಂಧಿಸಿದಂತೆ ಜಾರಿಗೊಳಿಸಿದ್ದ ಶಿಸ್ತುಕ್ರಮ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲು ನಿರಾಕರಿಸಿದೆ (ಶಂಭೂ ಸಿಂಗ್‌ ರಘುವಂಶಿ ವರ್ಸಸ್‌ ಮಧ್ಯಪ್ರದೇಶ ಹೈಕೋರ್ಟ್‌).

“ಲೈಂಗಿಕ ಕಿರುಕುಳ ಆರೋಪಗಳನ್ನು ಚಾಪೆಯಡಿ ಸರಿಸಲಾಗದು” ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಹೇಳಿದ್ದಾರೆ. ಕಿರಿಯ ನ್ಯಾಯಿಕ ಅಧಿಕಾರಿಗೆ ವಾಟ್ಸಾಪ್‌ನಲ್ಲಿ ಅನುಚಿತ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಶಂಭೂ ಸಿಂಗ್‌ ರಘುವಂಶಿ ಅವರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಲಾಗಿದ್ದು, ಈ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್‌ ಜಾರಿ ಮಾಡಿದ್ದ ಶಿಸ್ತುಕ್ರಮ ಪ್ರಕ್ರಿಯೆ ವಜಾಗೊಳಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

ಇಂದು ನ್ಯಾಯಾಧೀಶ ರಘುವಂಶಿ ಅವರ ಮನವಿ ವಿಚಾರಣೆಗೆ ನಿರಾಕರಿಸಿರುವ ಸಿಜೆಐ ಎಸ್‌ ಎ ಬೊಬ್ಡೆ ಅವರು “ನೀವು ತೆಳುವಾದ ಹಿಮಹಾಸಿನ ಮೇಲೆ ನಡೆಯುತ್ತಿದ್ದೀರಿ. ನೀವು ಖುಲಾಸೆಗೊಳ್ಳುವ ಅವಕಾಶ ಇರಬಹುದು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ನೀವು ಶಿಕ್ಷೆಗೊಳಗಾಗಿದ್ದೀರಿ. ಲೈಂಗಿಕ ಕಿರುಕುಳ ಆರೋಪಗಳನ್ನು ಆ ರೀತಿ ಸುಲಭವಾಗಿ ಚಾಪೆಯ ಅಡಿ ಸರಿಸಲಾಗದು” ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ವೇದಿಕೆಯ ಮೆಟ್ಟಿಲೇರಲು ಅವಕಾಶ ಕಲ್ಪಿಸುವಂತೆ ನ್ಯಾ. ರಘುವಂಶಿ ಕೋರಿದ ಹಿನ್ನೆಲೆಯಲ್ಲಿ ಸಿಜೆಐ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ನಿರ್ದಿಷ್ಟ ನ್ಯಾಯಾಲಯವು ಪ್ರಕರಣದ ಬಗ್ಗೆ ನಿರ್ಧರಿಸಿರುವುದರಿಂದ ತಾವು ಮತ್ತೊಂದು ವೇದಿಕೆಯಲ್ಲಿ ಇದನ್ನು ಪ್ರಶ್ನಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದೆ.

“ನಿರ್ದಿಷ್ಟ ನ್ಯಾಯಾಲಯವು ಈಗಾಗಲೇ ಪ್ರಕರಣ ನಿರ್ಣಯಿಸಿದ್ದು, ಅದೇ ವ್ಯಕ್ತಿಯ ಮೂಲಕ ಪ್ರಕರಣವನ್ನು ಮತ್ತೊಂದು ವೇದಿಕೆಗೆ ಕೊಂಡೊಯ್ಯಲು ಸಮಸ್ಯೆ ಇಲ್ಲ. ಫಿರ್ಯಾದುದಾರರು ಮತ್ತೊಂದು ನ್ಯಾಯಿಕ ವೇದಿಕೆಗೆ ಹೋಗಲಾಗದೆ ಇರುವ ನಿರ್ದೇಶನವೇನಾದರೂ ಇದ್ದರೆ ಆಗ ನಮಗೆ ತಿಳಿಸಲಿ, ನಾವು ಅದನ್ನು ಪರಿಶೀಲಿಸುತ್ತೇವೆ. ಪ್ರಸ್ತುತ ದೂರುದಾರರಿಗೆ ಮನವಿ ಹಿಂಪಡೆಯಲು ಸ್ವಾತಂತ್ರ್ಯ ಕಲ್ಪಿಸಲಾಗಿದ್ದು, ಸೂಕ್ತ ವೇದಿಕೆಯಲ್ಲಿ ಅದನ್ನು ಪ್ರಶ್ನಿಸಲು ಅವರು ಸ್ವತಂತ್ರರು” ಎಂದು ನ್ಯಾಯಾಲಯ ಹೇಳಿದೆ.

ಕರ್ತವ್ಯದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ (ಪೋಶ್‌ ಕಾಯಿದೆ) ಅಡಿ ಕಿರಿಯ ನ್ಯಾಯಿಕ ಅಧಿಕಾರಿ ದಾಖಲಿಸಿದ್ದ ದೂರನ್ನು ಹಿಂಪಡೆದ ನಡುವೆಯೂ ಸರ್ವೋಚ್ಚ ನ್ಯಾಯಾಲಯವು ನಿಲುವು ಬದಲಿಸಿಲ್ಲ.

Also Read
ನಿವೃತ್ತ ಸಿಜೆಐ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್

ಆರೋಪಿತ ನ್ಯಾಯಾಧೀಶರು ವಾಟ್ಸಾಪ್‌ ಸಂದೇಶಗಳನ್ನು ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದು, ಇಂಥ ನಡತೆಯು ನ್ಯಾಯಿಕ ಕೆಲಸ ಕೈಗೊಳ್ಳಲು ಯೋಗ್ಯವಾದ ವಾತಾವರಣ ಸೃಷ್ಟಿಸುವುದಿಲ್ಲ. ದೂರಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಇಲಾಖಾ ಪ್ರಕ್ರಿಯೆಗಳು ಸ್ವತಂತ್ರವಾಗಿದ್ದು, ಪೋಶ್‌ನ ದೂರಿಗೆ ಹೊರತಾಗಿವೆ ಎಂದು ಹೈಕೋರ್ಟ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ರವೀಂದ್ರ ಶ್ರೀವಾಸ್ತವ ಹೇಳಿದ್ದಾರೆ.

2018ರಲ್ಲಿ ನ್ಯಾ. ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಲಾಗಿದ್ದು, ಹೈಕೋರ್ಟ್‌ ಆದೇಶಿಸಿರುವ ಶಿಸ್ತುಕ್ರಮ ಪ್ರಕ್ರಿಯೆ ವಜಾಗೊಳಿಸುವಂತೆ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಇದನ್ನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ನಲ್ಲಿ ಮನವಿ ಮಾಡುವಂತೆ ನಿರ್ದೇಶಿಸಿತ್ತು. ಹೈಕೋರ್ಟ್‌ ಮನವಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ರಘುವಂಶಿ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಸಿಂಗ್‌ ವಿರುದ್ಧದ ಶಿಸ್ತುಕ್ರಮ ಪ್ರಕ್ರಿಯೆಗೆ ತಡೆ ನೀಡಿತ್ತು.

Related Stories

No stories found.
Kannada Bar & Bench
kannada.barandbench.com