ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು ಹಾಗೂ ತನ್ನ ಪತ್ನಿ ಶಾಕೆರೆ ಖಲೀಲಿ ಅವರನ್ನು ಜೀವಂತ ಸಮಾಧಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ಮನೋಹರ್ ಮಿಶ್ರಾ ಅಲಿಯಾಸ್ ಸ್ವಾಮಿ ಶ್ರದ್ಧಾನಂದನಿಗೆ ವಿಧಿಸಿದ್ದ ಆಜೀವ ಪರ್ಯಂತ ಸೆರೆವಾಸ ಶಿಕ್ಷೆಯನ್ನು ಹಿಂಪಡೆಯಲಾಗದು ಎಂದಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಆತ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ [ಸ್ವಾಮಿ ಶ್ರದ್ಧಾನಂದ ಅಲಿಯಸ್ ಮುರಳಿ ಮನೋಹರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಆತ ಆಜೀವ ಪರ್ಯಂತ ಸೆರೆವಾಸ ಅನುಭವಿಸಬೇಕು ಎಂದು 2008ರಲ್ಲಿ ವಿಧಿಸಲಾಗಿದ್ದ ಷರತ್ತನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ಎತ್ತಿಹಿಡಿದಿದೆ.
ಇಟಲಿಯಲ್ಲಿ ಭಾರತದ ರಾಯಭಾರಿಯಾಗಿದ್ದ ಅಕ್ಬರ್ ಮಿರ್ಜಾ ಖಲೀಲಿ ಅವರ ಪತ್ನಿಯಾಗಿದ್ದ ಶಾಕೆರೆ ಖಲೀಲಿ ಅವರನ್ನು ಮರುವಿವಾಹವಾಗಿದ್ದ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರಳಿ ಮೋಹನ್ ಕೋಟ್ಯಂತರ ರೂಪಾಯಿ ಆಸ್ತಿ ಆಸೆಗಾಗಿ ಆಕೆಯನ್ನು 1991ರಲ್ಲಿ ಕೊಲೆಗೈದಿದ್ದ. ತಾನು ಕಾಫಿಯಲ್ಲಿ ಬೆರೆಸಿದ್ದ ಅಮಲು ಬರಿಸುವ ಪದಾರ್ಥ ಸೇವಿಸಿ ಪ್ರಜ್ಞಾಹೀನರಾಗಿದ್ದ ಶಾಕೆರೆ ಅವರನ್ನು ಸಜೀವವಾಗಿ ಹೂತುಹಾಕಿದ್ದ. ಮೂರು ವರ್ಷಗಳ ಬಳಿಕ ಶ್ರದ್ಧಾನಂದನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಆತ ಅಪರಾಧಿ ಎಂದು ಸಾಬೀತಾಗಿ ಕಳೆದ 30 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾನೆ.
2008ರ ತೀರ್ಪು ಆತನಿಗೆ ನೀಡಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತ್ತಾದರೂ ಪೆರೋಲ್, ಫರ್ಲೋ ಅಥವಾ ಕ್ಷಮಾದಾನ ಪಡೆಯದೆ ಆತ ಆಜೀವ ಪರ್ಯಂತ ಜೈಲಿನಲ್ಲೇ ಕಳೆಯಬೇಕು ಎಂದು ತಿಳಿಸಿತ್ತು. 84 ವರ್ಷದ ಶ್ರದ್ಧಾನಂದ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ಈಚೆಗೆ ನ್ಯಾಯಾಲಯ ತಿರಸ್ಕರಿಸಿತ್ತು.
ಶ್ರದ್ಧಾನಂದ ವಕೀಲ ವರುಣ್ ಠಾಕೂರ್ ಮೂಲಕ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಶ್ರದ್ಧಾನಂದ ಪರ ವಕೀಲ ತ್ರಿಪುರಾರಿ ರೇ ವಾದ ಮಂಡಿಸಿದ್ದರು.
ಕೊಲೆ ಪ್ರಕರಣದ ಮಾಹಿತಿದಾರೆ ಮತ್ತು ಮೃತ ಶಾಕೆರೆ ಖಲೀಲಿ ಅವರ ಪುತ್ರಿ ರೆಹಾನೆ ಖಲೀಲಿ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ವಕೀಲರಾದ ಪ್ರಾಂಜಲ್ ಕಿಶೋರ್ ಮತ್ತು ಮದಿಯಾ ಮುಷ್ತಾಕ್, ವಾದಿಸಿದರು.
ಕರ್ನಾಟಕ ಸರ್ಕಾರವನ್ನು ಸ್ಥಾಯಿ ವಕೀಲ ಚಿದಾನಂದಗೌಡ ಪ್ರತಿನಿಧಿಸಿದ್ದರು.
ತನ್ನ ಬದುಕನ್ನು ಆಧರಿಸಿ ನಿರ್ಮಿಸಲಾಗಿದ್ದ ಡ್ಯಾನ್ಸಿಂಗ್ ಆನ್ ದಿ ಗ್ರೇವ್ ಹೆಸರಿನ ಸಾಕ್ಷ್ಯಚಿತ್ರ ಸರಣಿಯನ್ನು ಪ್ರಶ್ನಿಸಿ ಸ್ವಾಮಿ ಶ್ರದ್ಧಾನಂದ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಕೂಡ ಈಚೆಗೆ ವಜಾಗೊಳಿಸಲಾಗಿತ್ತು.