ಅಪಘಾತಕ್ಕೀಡಾದ ಹಡಗುಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕೇರಳ ಹೈಕೋರ್ಟ್ ಸೂಚನೆ

ಮೀನುಗಳ ಸಾವು, ಮಾಲಿನ್ಯ ಹಾಗೂ ಆರ್ಥಿಕ ನಷ್ಟವನ್ನು ಪರಿಗಣಿಸಬೇಕು. ಸರ್ಕಾರ ಸಾರ್ವಜನಿಕ ಬೊಕ್ಕಸವನ್ನು ಖಾಲಿ ಮಾಡದೆ ಕಂಪೆನಿಯಿಂದ ವಸೂಲಿ ಮಾಡಬೇಕು ಎಂದ ಪೀಠ.
Ship
Ship Image for representational purposes only
Published on

ಕೇರಳ ಕರಾವಳಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಲೈಬೀರಿಯಾ ಮತ್ತು ಸಿಂಗಪೋರ್‌ ಮೂಲದ ಎರಡು ಹಡಗುಗಳು ಮುಳುಗಲು ಕಾರಣವಾದವರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಹೈಕೋರ್ಟ್‌ ಗುರುವಾರ ಹೇಳಿದೆ.

ಲೈಬೀರಿಯಾದ ಎಂಎಸ್‌ಸಿ ಎಲ್ಸಾ-3 ಮತ್ತು ಸಿಂಗಪೋರ್‌ನ ವಾನ್‌ ಹೈ 503 ಹಡುಗಳ ಅಪಘಾತದಿಂದಾಗಿ ಪರಿಸರ ಮಾಲಿನ್ಯ ಮತ್ತಿತರ ನಷ್ಟ ಸರಿದೂಗಿಸಲು ಸಾರ್ವಜನಿಕ ಬೊಕ್ಕಸ ಬರಿದು ಮಾಡದೆ ಹಡಗು ಕಂಪೆನಿಯಿಂದಲೇ ದಂಡ ವಸೂಲಿ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Also Read
ಕೊಚ್ಚಿ ಹಡಗು ದುರಂತ: ಮುಳುಗಿದ ಹಡಗಿನ ಸಮೂಹದ ಮತ್ತೊಂದು ಹಡಗನ್ನು ವಶಕ್ಕೆ ಪಡೆಯಲು ಸೂಚಿಸಿದ ಕೇರಳ ಹೈಕೋರ್ಟ್‌

ಮೀನುಗಳ ಸಾವು, ಮಾಲಿನ್ಯ ಹಾಗೂ ಆರ್ಥಿಕ ನಷ್ಟವನ್ನು ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳುವುದು ವಿಳಂಬವಾದರೆ ಅದು ಕೆಟ್ಟ ಪೂರ್ವ ನಿದರ್ಶನಕ್ಕೆ ಎಡೆ ಮಾಡಿಕೊಡುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

"ಇಂತಹ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಲು ಮುಂದಾಗಬೇಕು. ಯಾರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುತ್ತದೆ ಎನ್ನುವುದರ ಕುರಿತಾದ ಪ್ರಕ್ರಿಯಾ ಲೋಪಗಳು ಮುಂದೆ ಕಾನೂನಾತ್ಮಕ ಸನ್ನಿವೇಶಗಳು ಉದ್ಭವಿಸಲು ಕಾರಣವಾಗಬಹುದು. ಈ ಬಗ್ಗೆ ನೀವು ಪರಿಶೀಲಿಸಬೇಕು," ಎಂದು ಅದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿತು.

 ಕ್ರಿಮಿನಲ್‌ ಪ್ರಕರಣದ ಜೊತೆಗೆ ಸಿವಿಲ್‌ ಮೊಕದ್ದಮೆ ಹೂಡುವ ಕುರಿತಂತೆಯೂ ಸರ್ಕಾರ ಯೋಚಿಸಬೇಕು ಎಂದ ಅದು ಸಾಧ್ಯವಾದ ಎಲ್ಲಾ ಕ್ರಮ ಕೈಗೊಳ್ಳುವಂತೆ ಸರ್ಕಾರಗಳಿಗೆ ತಾಕೀತು ಮಾಡಿತು.

ಪ್ರಕರಣದ ಮುಂದಿನ ವಿಚಾರಣೆ ಜೂನ್ 19, 2025ರಂದು ನಡೆಯಲಿದ್ದು ಅಷ್ಟರೊಳಗೆ ಅಧಿಕಾರಿಗಳು ವಿವರವಾದ ಸ್ಥಿತಿಗತಿ ವರದಿ  ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲ ಅರ್ಜುನ್ ಶ್ರೀಧರ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಅದು ನೇಮಿಸಿತು.

ಮೇ 24 ರಂದು ಕರಾವಳಿ ಜಿಲ್ಲೆಯಾದ ಅಲಪ್ಪುಳದಿಂದ ನೈಋತ್ಯಕ್ಕೆ 25 ಕಿ.ಮೀ ದೂರದಲ್ಲಿ ಲೈಬೀರಿಯಾ ಮೂಲದ ಸರಕು ಹಡಗು ಎಂಎಸ್‌ಸಿ ಎಲ್ಸಾ 3 ಮುಳುಗಿತ್ತು. ಅಪಾಯಕಾರಿ ವಸ್ತು ಸೋರಿಕೆಯಿಂದಾಗಿ ಅರಬ್ಬೀ ಸಮುದ್ರದಲ್ಲಿ ಮಾಲಿನ್ಯ ಮತ್ತು ಕೇರಳ ಕರಾವಳಿ ತೀರದ ಮೀನುಗಾರರ ಜೀವನೋಪಾಯದ ವಿಚಾರದಲ್ಲಿ ವ್ಯಾಪಕ ಕಳವಳ ಹುಟ್ಟುಹಾಕಿತ್ತು.

Also Read
ಕೊಚ್ಚಿ ಬಳಿ ಹಡಗು ಮುಳುಗಡೆ: ರಾಸಾಯನಿಕ ಮತ್ತು ತೈಲ ಸೋರಿಕೆ ಮಾಹಿತಿ ಬಿಡುಗಡೆಗೆ ಕೇರಳ ಹೈಕೋರ್ಟ್ ಆದೇಶ

ಮತ್ತೊಂದು ಘಟನೆಯಲ್ಲಿ ದಹನಕಾರಿ ದ್ರವ, ವಿನಾಶಕಾರಿ ವಸ್ತುಗಳು ಹಾಗೂ ಕೀಟನಾಶಕಗಳಿರುವ 1,754 ಕಂಟೇನರ್‌ಗಳಿರುವ ವಾನ್ ಹೈ 503 ಹಡಗು ಕಣ್ಣೂರಿನ ಬಳಿ ಬೆಂಕಿಗೆ ಆಹುತಿಯಾಗಿ ಪರಿಸರ ಮಾಲಿನ್ಯದ ಆತಂಕ ಸೃಷ್ಟಿಯಾಗಿತ್ತು.

ಹೀಗಾಗಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಕೋರಿ ಕೇರಳ ಮೀನುಗಾರರ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ಟಿ ಎನ್‌ ಪ್ರತಾಪನ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com