ತಾನು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠ ಮತ್ತು ವಿದ್ಯಾಪೀಠದ ಏಕೈಕ ಟ್ರಸ್ಟಿಯಾಗಿದ್ದು, ಚೆಕ್ ಹಾಗೂ ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅನುಮತಿ ನಿರಾಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ವಜಾ ಮಾಡಬೇಕು ಎಂದು ಕೋರಿ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಮೂರ್ತಿ ಮುರುಘಾ ಶರಣರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ವಕೀಲರಾದ ಸಂದೀಪ್ ಪಾಟೀಲ್ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 20ರಂದು ಮಾಡಿರುವ ಆದೇಶವನ್ನು ವಜಾ ಮಾಡಬೇಕು. ಅಲ್ಲದೇ, ಮಠ ಹಾಗೂ ವಿದ್ಯಾಪೀಠದ ನಿರ್ವಹಣೆ ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಸಲು ಮಠ ಮತ್ತು ವಿದ್ಯಾಪೀಠದ ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡುವಂತೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಿದ್ಯಾಪೀಠದ ಆಡಳಿತ ಮತ್ತು ನಿರ್ವಹಣೆ ನೋಡಿಕೊಳ್ಳುವುದಕ್ಕೆ ಮಠದ ಆಡಳಿತ ಮಂಡಳಿ ಸೀಮಿತವಾಗಿದ್ದು, ಸಿಬ್ಬಂದಿಯ ವೇತನ, ಮಠ ಹಾಗೂ ವಿದ್ಯಾಪೀಠದ ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡುವ ವಿಷಯದಲ್ಲಿ ಅಥವಾ ಹಣಕಾಸಿನ ವಿಚಾರದಲ್ಲಿ ಆಡಳಿತ ಮಂಡಳಿಯ ಪಾತ್ರವಿಲ್ಲ. ಮಠ ಅಥವಾ ವಿದ್ಯಾಪೀಠದ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಅಧಿಕಾರ ಆಡಳಿತ ಮಂಡಳಿಗೆ ಇಲ್ಲ. ಹಣಕಾಸಿನ ವಿಚಾರ ಹಾಗೂ ಚೆಕ್‌ಗೆ ಸಹಿ ಮಾಡುವ ಅಧಿಕಾರ ಅರ್ಜಿದಾರರಿಗೆ ಮಾತ್ರ ಇದೆ ಎಂದು ವಿವರಿಸಲಾಗಿದೆ.
ಭಾರತೀಯ ಟ್ರಸ್ಟ್ ಕಾಯಿದೆ 1882ರ ಸೆಕ್ಷನ್ 34, ಟ್ರಸ್ಟ್‌ನ ನಿರ್ವಹಣೆ ಮತ್ತು ಆಡಳಿತಕ್ಕೆ ಸಂಬಂಧಪಟ್ಟಿದೆ. ಇಲ್ಲಿ ಅರ್ಜಿದಾರರು ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಮಾತ್ರ ಅವಕಾಶ ಕೋರುತ್ತಿದ್ದಾರೆ. ಹೀಗಾಗಿ, ಇಲ್ಲಿ ಸೆಕ್ಷನ್ 34 ಅನ್ವಯಿಸುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಮಠ ಮತ್ತು ವಿದ್ಯಾಪೀಠದಲ್ಲಿ ಸುಮಾರು ಮೂರು ಸಾವಿರ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಆರೋಪಿ ಸ್ವಾಮೀಜಿ ಅವರು ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅನುಮತಿಸದಿದ್ದರೆ ಸಿಬ್ಬಂದಿಗೆ ವೇತನ ಪಾವತಿಯಾಗದೆ, ಆರ್ಥಿಕ ಸಮಸ್ಯೆ ಉಂಟು ಮಾಡಿದಂತಾಗುತ್ತದೆ. ಕರ್ನಾಟಕ ಕಾರಾಗೃಹ ಕಾಯಿದೆ 1963ರ ಸೆಕ್ಷನ್ 40ರ ಅಡಿ ಅರ್ಜಿದಾರರು ವಿಚಾರಣಾಧೀನ ಕೈದಿಯಾಗಿದ್ದು, ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಲಾಗಿದೆ.