ಮುರುಘಾ ಶರಣರ ಜಾಮೀನಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪ; ಮಠದ ಚೆಕ್‌, ದಾಖಲೆಗಳಿಗೆ ಸ್ವಾಮೀಜಿ ಸಹಿಗೆ ವಿರೋಧ

ಲೈಂಗಿಕ ಕಿರುಕುಳ ಆರೋಪ ಮಾಡಿರುವ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ವಾಸವಿದ್ದು, ಅವರಿಗೂ ತಮಗೂ ಸಂಪರ್ಕವಿರಲಿಲ್ಲ. ಆರೋಪ ಮಾಡಿರುವ ಮಕ್ಕಳನ್ನು ನೋಡಿರಲಿಲ್ಲ ಎಂದು ಜಾಮೀನು ಮನವಿಯಲ್ಲಿ ಸ್ವಾಮೀಜಿ ವಾದ. 12 ಆಧಾರಗಳ ಮೇಲೆ ಜಾಮೀನಿಗೆ ಕೋರಿಕೆ.
ಮುರುಘಾ ಶರಣರ ಜಾಮೀನಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪ; ಮಠದ ಚೆಕ್‌, ದಾಖಲೆಗಳಿಗೆ ಸ್ವಾಮೀಜಿ ಸಹಿಗೆ ವಿರೋಧ
Published on

ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಹಾಗೂ ಎಸ್‌ಸಿ/ಎಸ್‌ಟಿ ಕಾಯಿದೆಯ ಅಡಿ ಬಂಧಿತರಾಗಿರುವ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ಹಾಗೂ ಇತರೆ ಮೂವರು ಆರೋಪಿಗಳ ನಿರೀಕ್ಷಣಾ ಕೋರಿಕೆಗೆ ರಾಜ್ಯ ಸರ್ಕಾರದ ವತಿಯಿಂದ ಗುರುವಾರ ಆಕ್ಷೇಪಣೆ ಸಲ್ಲಿಸಲಾಗಿದ್ದು, ವಿಚಾರಣೆಯನ್ನು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್‌ 12ಕ್ಕೆ ಮುಂದೂಡಿದೆ.

ಶಿವಮೂರ್ತಿ ಮುರುಘಾ ಶರಣರ ಜಾಮೀನು ಹಾಗೂ ಕ್ರಮವಾಗಿ ಮೂರರಿಂದ ಐದನೇ ಆರೋಪಿಗಳಾದ ಎಸ್‌ ಬಸವಾದಿತ್ಯ, ಎ ಜೆ ಪರಮಶಿವಯ್ಯ ಮತ್ತು ವಕೀಲ ಎನ್‌ ಗಂಗಾಧರ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ನಡೆಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರಾದ ನಾಗವೇಣಿ ಅವರು ಜಾಮೀನು ಕೋರಿರುವ ಆರೋಪಿ ಶ್ರೀಗಳ ಮನವಿ ಹಾಗೂ ನಿರೀಕ್ಷಣಾ ಜಾಮೀನಿಗೆ ಕೋರಿಕೆ ಸಲ್ಲಿಸಿರುವ ಆರೋಪಿಗಳ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಿದರು. ವಿದ್ಯಾರ್ಥಿನಿಯರ ಪರವಾಗಿ ಪ್ರತ್ಯೇಕವಾಗಿ ವಕಾಲತ್ತು ಹಾಕಿರುವ ವಕೀಲರಾದ ಶ್ರೀನಿವಾಸ್‌ ಮತ್ತು ಮುಕುಂದ್‌ ಅವರು ಜಾಮೀನು ಮನವಿಗಳನ್ನು ವಿರೋಧಿಸಿ, ಪ್ರತಿಕ್ರಿಯೆ ದಾಖಲಿಸಿದ್ದಾರೆ.

ಜಾಮೀನು ಅರ್ಜಿಯಲ್ಲಿ ಶ್ರೀಗಳ ವಾದವೇನು?

ಲೈಂಗಿಕ ಕಿರುಕುಳ ಆರೋಪ ಮಾಡಿರುವ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ವಾಸವಿದ್ದು, ಅವರಿಗೂ ತಮಗೂ ಯಾವುದೇ ತೆರನಾದ ಸಂಪರ್ಕವಿರಲಿಲ್ಲ. ಆರೋಪ ಮಾಡಿರುವ ಮಕ್ಕಳನ್ನು ನೋಡಿಯೇ ಇರಲಿಲ್ಲ. ಮುರುಘಾ ಮಠದ ಮಾಜಿ ಕಾರ್ಯದರ್ಶಿ ಎಸ್‌ ಕೆ ಬಸವರಾಜನ್‌ ಅವರು ಹಗೆತನದಿಂದ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಮಠಾಧೀಶರಾಗಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಯಾವುದೇ ರೀತಿಯಲ್ಲೂ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಜಾಮೀನು ಮನವಿಯಲ್ಲಿ ವಾದಿಸಿದ್ದಾರೆ.

ಮಾಜಿ ಶಾಸಕ ಎಸ್‌ ಕೆ ಬಸವರಾಜನ್‌ ಅವರು ಮಠದೊಂದಿಗೆ ತಿಕ್ಕಾಟದಲ್ಲಿ ತೊಡಗಿದ್ದನ್ನು ವಿಸ್ತೃತವಾಗಿ ವಿವರಿಸಲಾಗಿದ್ದು, ಸ್ವಾಮೀಜಿಯನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆಕ್ಷೇಪಿಸಲಾಗಿದೆ. ಒಟ್ಟು 15 ಆಧಾರಗಳ ಮೇಲೆ ಡಾ. ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅಕ್ಕಮಹಾದೇವಿ ಹಾಸ್ಟೆಲ್‌ನ ವಾರ್ಡನ್‌ ಎಸ್‌ ರಶ್ಮಿ ಅವರ ಪೊಲೀಸ್‌ ಕಸ್ಟಡಿ ಅವಧಿ ಇಂದು ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿ ರಶ್ಮಿ ಅವರನ್ನು ನ್ಯಾಯಾಲಯವು ಸೆಪ್ಟೆಂಬರ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಆದೇಶಿಸಿದೆ.

ಬೈಲಾದ ಪ್ರಕಾರ ನಿರ್ಧಾರ ಕೈಗೊಳ್ಳಲಿ

ಮುರುಘಾ ಮಠದ ಅಧ್ಯಕ್ಷರಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಚೆಕ್‌ ಮತ್ತು ಇತರೆ ದಾಖಲೆಗಳಿಗೆ ಸಹಿ ಹಾಕಲು ಜೈಲು ಅಧಿಕಾರಿ ಅನುಮತಿ ನೀಡಲು ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿಗೆ ಸರ್ಕಾರಿ ಅಭಿಯೋಜಕರು ಇಂದು ಆಕ್ಷೇಪ ದಾಖಲಿಸಿದ್ದಾರೆ.

Also Read
ಶಿವಮೂರ್ತಿ ಮುರುಘಾ ಶರಣರು ಸೇರಿ ನಾಲ್ವರ ಜಾಮೀನಿಗೆ ಸಂತ್ರಸ್ತೆಯರ ವಿರೋಧ; ನಾಳೆಗೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಮಠವು ತನ್ನದೇ ಆದ ಬೈಲಾ ಹೊಂದಿದ್ದು, ಅದರಲ್ಲಿ ನಿಯಮಗಳಿರುತ್ತವೆ. ಮಠವು ತನ್ನದೇ ಕಾರ್ಯಕಾರಿ ಸಮಿತಿಯನ್ನು ಹೊಂದಿದೆ. ನಿಯಮದ ಪ್ರಕಾರ ಅವರು ನಿರ್ಧಾರ ಕೈಗೊಳ್ಳಬಹುದು. ಡಾ. ಶಿವಮೂರ್ತಿ ಮುರುಘಾ ಶರಣರು ಆರೋಪಿಯಾಗಿದ್ದು, ಸಾರ್ವಜನಿಕರಿಗೆ ಸೇರಿದ ಮಠದ ಆಸ್ತಿಯನ್ನು ದುರ್ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಚೆಕ್‌ ಅಥವಾ ಮಠದ ಇನ್ನಾವುದೇ ದಾಖಲೆಗಳಿಗೆ ಸಹಿ ಮಾಡಲು ಆರೋಪಿ ಶ್ರೀಗಳಿಗೆ ಅವಕಾಶ ನೀಡಲು ನ್ಯಾಯಾಲಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೇ, ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಈಗಾಗಲೇ ಹೆಬ್ಬಾಳದ ಶಾಖಾ ಮಠದ ಮಹಾಂತ ರುದ್ರ ಸ್ವಾಮೀಜಿ ಅವರಿಗೆ ಉಸ್ತುವಾರಿ ವಹಿಸಲಾಗಿದೆ. ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ನಿವೃತ್ತ ನ್ಯಾಯಾಧೀಶರಾದ ಎಸ್‌ ಬಿ ವಸ್ತ್ರದಮಠ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ, ಆರೋಪಿ ಶಿವಮೂರ್ತಿ ಮುರುಘಾ ಶರಣರ ಸಹಿ ಅಗತ್ಯತೆ ಉದ್ಭವಿಸುವುದಿಲ್ಲ ಎಂದು ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

Kannada Bar & Bench
kannada.barandbench.com