ಅಪಹರಣ ಪ್ರಕರಣ: ತಮಿಳುನಾಡು ಎಡಿಜಿಪಿ ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಇತ್ತ ಎಡಿಜಿಪಿ ಅಮಾನತು ಮಾಡಿರುವ ರಾಜ್ಯ ಸರ್ಕಾರವನ್ನು ಉದ್ದೇಶಿಸಿ ನ್ಯಾಯಾಲಯ ಹೀಗೆ ಮಾಡುವಂತಿಲ್ಲ ಇದು ನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ಎಂದಿತು.
ಅಪಹರಣ ಪ್ರಕರಣ: ತಮಿಳುನಾಡು ಎಡಿಜಿಪಿ ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿದ ಸುಪ್ರೀಂ ಕೋರ್ಟ್
Published on

ಹದಿಹರೆಯದ ಹುಡುಗನ ಅಪಹರಣ ಪ್ರಕರಣದಲ್ಲಿ ತಮಿಳುನಾಡು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್.ಎಂ. ಜಯರಾಮ್  ಅವರನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಆಘಾತ ವ್ಯಕ್ತಪಡಿಸಿದೆ [ಎಂ ಜಗನ್‌ಮೂರ್ತಿ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ನಡುವಣ ಪ್ರಕರಣ].

ಅಲ್ಲದೆ ಹೈಕೋರ್ಟ್‌ ಆದೇಶದಂತೆ ಜಯರಾಮ್‌ ಅವರನ್ನು ಬಂಧಿಸಿ, ಆ ಬಳಿಕ ಅವರನ್ನು ಸರ್ಕಾರ ಅಮಾನತುಗೊಳಿಸಿದ್ದಕ್ಕೆ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ಪೀಠ ತೀವ್ರವಾಗಿ ಆಕ್ಷೇಪಿಸಿತು.

Also Read
ಹದಿಹರೆಯದ ವ್ಯಕ್ತಿಯ ಅಪಹರಣ: ಮದ್ರಾಸ್ ಹೈಕೋರ್ಟ್ ಆದೇಶದಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಂಧನ

ಹಿರಿಯ ಐಪಿಎಸ್‌ ಅಧಿಕಾರಿಯಾಗಿರುವ ಜಯರಾಮ್‌ ಅವರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದ್ದರೂ ಅವರನ್ನು ಇನ್ನೂ ಅಮಾನತಿನಲ್ಲಿಯೇ ಇರಿಸಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಇಂತಹ ಕ್ರಮ ಆಘಾತಕಾರಿಯಾಗಿದ್ದು ಅಮಾನತು ಹಿಂತೆಗೆದುಕೊಂಡ ವಿವರ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತು.

"ನೀವು (ಸರ್ಕಾರದಿಂದ) ಸೂಚನೆಗಳನ್ನು ಪಡೆಯಿರಿ. ಅವರು ಹಿರಿಯ ಪೊಲೀಸ್ ಅಧಿಕಾರಿ. ಅವರು ತನಿಖೆಗೆ ಒಪ್ಪಿಕೊಂಡ ಮೇಲೆ ಅವರನ್ನು ಅಮಾನತುಗೊಳಿಸುವ ಪ್ರಶ್ನೆಯೇನಿದೆ? ನೀವು ಹೀಗೆ ಮಾಡಲು ಸಾಧ್ಯವಿಲ್ಲ. ಇದು ತುಂಬಾ ನಿರಾಶಾದಾಯಕ. ನೀವು ಸೂಚನೆಗಳನ್ನು ಪಡೆಯಿರಿ" ಎಂದ  ನ್ಯಾಯಾಲಯ ಪ್ರಕರಣವನ್ನು ನಾಳೆ (ಗುರುವಾರ) ಆಲಿಸಲು ನಿರ್ಧರಿಸಿತು.

ತನ್ನ ಮಗಳು ಅಂತರ್ಜಾತಿ ವಿವಾಹವಾಗುವುದನ್ನು ವಿರೋಧಿಸಿದ್ದ ಆಕೆಯ ಕುಟುಂಬ ಪ್ರಿಯಕರನ ಹದಿಹರೆಯದ ಕಿರಿಯ ಸಹೋದರನನ್ನು ಅಪರಹರಿಸಿದ ಪ್ರಕರಣದಲ್ಲಿ  ಹೆಸರು ಕೇಳಿ ಬಂದಿದ್ದ ಪುರಚ್ಚಿ ಭಾರತಂ ಪಕ್ಷದ ಸಂಸ್ಥಾಪಕ ಹಾಗೂ ಶಾಸಕ ಪೂವೈ ಎಂ. ಜಗನ್ ಮೂರ್ತಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌ ಎಡಿಜಿಪಿ ಹಾಗೂ ಶಾಸಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಶಾಸಕ ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕೆಂದು ಈ ಮುನ್ನ ಪೀಠ ತಾಕೀತು ಮಾಡಿತ್ತು. ಅಂತೆಯೇ ಶಾಸಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಬಳಿಕ ಎಡಿಜಿಪಿ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಯರಾಮ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

Also Read
ಸಿದ್ಧ ವೃತ್ತಿಪರರು ಆಧುನಿಕ ವೈದ್ಯಕೀಯ ಪ್ರಾಕ್ಟೀಸ್‌ ಮಾಡಬಹುದು, ಆಲೋಪಥಿ ಔಷಧಿ ಇಡುವಂತಿಲ್ಲ: ಮದ್ರಾಸ್‌ ಹೈಕೋರ್ಟ್‌

ಹಿನ್ನೆಲೆ

23 ವರ್ಷದ  ಯುವಕನೊಬ್ಬ 21 ವರ್ಷದ ಯುವತಿಯನ್ನು ಆಕೆಯ ಕುಟುಂಬದ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಕಿರಿಯ ಸಹೋದರನನ್ನು ತನಿಖೆ ನಡೆಸಿದ ಪೊಲೀಸರು ಹಲವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಎಡಿಜಿಪಿ ಹಾಗೂ ಶಾಸಕ ಮೂರ್ತಿ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿತ್ತು.

ವರದಿಗಳ ಪ್ರಕಾರ ಯುವತಿಯ ತಂದೆ ವನರಾಜ, ಸೇವೆಯಿಂದ ವಜಾಗೊಂಡಿದ್ದ ಮಾಜಿ ಮಹಿಳಾ ಪೊಲೀಸ್‌ ಪೇದೆ ಸೈಬಲ್‌ ಮಹೇಶ್ವರಿ ಸಹಾಯ ಪಡೆದು ಮದುವೆ ರದ್ದುಗೊಳಿಸಿ ಮಗಳನ್ನು ವಾಪಸ್‌ ಕರೆತರುವ ಸನ್ನಾಹದಲ್ಲಿದ್ದರು. ಅಂತೆಯೇ ಮಹೇಶ್ವರಿ ಅವರು ಎಡಿಜಿಪಿ ಅವರನ್ನು ಸಂಪರ್ಕಿಸಿದ್ದರು. ಅವರು ಪ್ರಕರಣವನ್ನು ಶಾಸಕರ ಬಳಿ ಕೊಂಡೊಯ್ದಿದ್ದರು.

ಶಾಸಕರ ಸಹಚರರು ಅಣ್ಣನನ್ನು ಅಪಹರಿಸುವ ಸಲುವಾಗಿ ಅವರ ನಿವಾಸಕ್ಕೆ ತೆರಳಿದ್ದರು. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಟೆರೇಸ್‌ ಮೇಲೆ ಮಲಗಿದ್ದ ಕಿರಿಯ ಮಗನನ್ನು ಅಪಹರಿಸಿದ್ದರು. ಯುವಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಂತೆಯೇ ಎಡಿಜಿಪಿ ವಾಹನದಲ್ಲಿಯೇ ಹುಡುಗನನ್ನು ಕರೆತಂದು ಬಸ್‌ಸ್ಟಾಂಡ್‌ ಒಂದರ ಬಳಿ ಇಳಿಸಿ ಹೋಗಲಾಗಿತ್ತು. ಎಡಿಜಿಪಿ ವಾಹನವನ್ನು ಕಾನ್‌ಸ್ಟೇಬಲ್‌ ಒಬ್ಬರು ಓಡಿಸುತ್ತಿದ್ದರು.  ಮಹೇಶ್ವರಿ ಮತ್ತು ವನರಾಜ ಇಬ್ಬರೂ ಎಡಿಜಿಪಿ ಅವರ ಅಧಿಕೃತ ವಾಹನದಲ್ಲಿದ್ದರು ಎಂದು ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಲಾಗಿತ್ತು.

ಮಹೇಶ್ವರಿ, ವನರಾಜ,  ಶಾಸಕರ ಪುರಚ್ಚಿ ಭಾರತಂ ಪಕ್ಷದೊಂದಿಗೆ ಸಂಬಂಧ ಹೊಂದಿರುವ ವಕೀಲ ಶರತ್‌ಕುಮಾರ್‌ ಸೇರಿದಂತೆ ಪ್ರಕರಣದಲ್ಲಿ  ಐವರನ್ನು ಬಂಧಿಸಲಾಗಿತ್ತು. ʼವಕೀಲ ಮತ್ತು ಮಾಜಿ ಪೊಲೀಸ್ ಕಾನ್ಸ್ಟೆಬಲ್ ಮಹೇಶ್ವರಿ ಇಬ್ಬರೂ ತಾವು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದು ಅವರ ಹೇಳಿಕೆಗಳಿಂದಾಗಿ ಶಾಸಕರು ನೇರವಾಗಿ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ. ಆರೋಪಿಗಳಿಂದ ₹7.5 ಲಕ್ಷ ವಶಪಡಿಸಿಕೊಳ್ಳಲಾಗಿದ್ದು  ಕಸ್ಟಡಿ ವಿಚಾರಣೆಯಿಂದ ಮಾತ್ರ ಹೆಚ್ಚಿನ ವಿವರ ಬೆಳಕಿಗೆ ಬರಲಿವೆʼ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.

Kannada Bar & Bench
kannada.barandbench.com