ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಯಾವುದೇ ವ್ಯಕ್ತಿ 'ಹೊಡಿ, ಹೊಡಿ' ಎಂದು ಉದ್ಗರಿಸಿದ ಮಾತ್ರಕ್ಕೆ ಅದು ಕೊಲೆಯನ್ನು ಮಾಡುವ ಸಾಮಾನ್ಯ ಉದ್ದೇಶವನ್ನು ಸಾಬೀತುಪಡಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠವು ಇತ್ತೀಚೆಗೆ ಹೇಳಿದೆ [ಜಯಾನಂದ್ s/o ಅರ್ಜುನ್ ಧಬಾಲೆ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಮಹಿಳೆಯೊಬ್ಬರನ್ನು ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಕುಟುಂಬವೊಂದರ ಮೂರು ಸದಸ್ಯರನ್ನು ಖುಲಾಸೆಗೊಳಿಸಿ ನಾಲ್ಕನೇ ಸದಸ್ಯನಾದ ಕೊಲೆ ಆರೋಪಿಗೆ ಶಿಕ್ಷೆ ವಿಧಿಸುವ ವೇಳೆ ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ಅಭಯ್ ಮಂತ್ರಿ ಅವರನ್ನೊಳಗೊಂಡ ಪೀಠ ಈ ವಿಚಾರ ತಿಳಿಸಿತು.
ಐಪಿಸಿ ಸೆಕ್ಷನ್ 34ರ ಅಡಿ ಸಾಮಾನ್ಯ ಉದ್ದೇಶದ ಅಗತ್ಯ ಅಂಶಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
2019 ರಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದಿದ್ದಕ್ಕಾಗಿ ಪುಸದ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಕುಟುಂಬವೊಂದರ ನಾಲ್ವರು ಸದಸ್ಯರು (ಅಪೀಲುದಾರರು) ದೋಷಿಗಳು ಎಂದು ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ “ಆರೋಪಿ ನಂ. 2 ರಿಂದ 4 ಸ್ಥಳದಲ್ಲೇ ಇರುವುದು ಹಾಗೂ 'ಹೊಡಿ ಹೊಡಿ' ಎಂಬ ಪದ ಉಚ್ಚರಿಸಿರುವುದು ಐಪಿಸಿ ಸೆಕ್ಷನ್ 34ರ ಅಡಿ ಕೊಲೆಯ ಉದ್ದೇಶವನ್ನು ಹೇಳುವುದಿಲ್ಲ ಎಂದು ನುಡಿದಿದೆ.
ಮೃತ ಮಹಿಳೆಯನ್ನು ಕೊಲ್ಲಲು ಮೂವರು ಆರೋಪಿಗಳ ಕಡೆಯಿಂದ ಪೂರ್ವಸಂಚು ನಡೆದಿತ್ತು ಇಲ್ಲವೇ ಇದೀಗ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೊಲೆಗಾರನ ಉದ್ದೇಶದ ಬಗ್ಗೆ ಅವರಿಗೆ ತಿಳಿದಿತ್ತು ಎಂಬುದನ್ನು ಸಾಕ್ಷ್ಯಗಳು ಬಿಂಬಿಸುವುದಿಲ್ಲ ಎಂದು ಅದು ಹೇಳಿದೆ.
ಹಿನ್ನೆಲೆ: ಗಂಡನ ಮರಣದ ನಂತರ ಅತ್ತೆಯ ಮನೆಯಲ್ಲೇ ವಾಸಿಸುತ್ತಿದ್ದ ಸುನಂದಾ ಎಂಬ ಮಹಿಳೆಯನ್ನು ಮೃತಪಟ್ಟಾಗ ಆಕೆಯ ಮೈದುನ ಜಯಾನಂದ ಮತ್ತವನ ಕುಟುಂಬದವರು ಕೊಂದಿದ್ದರು ಎಂಬುದು ಆರೋಪವಾಗಿತ್ತು. ಸುನಂದಾ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಸ್ಥಳದಲ್ಲಿ ಜಯಾನಂದ ಕೊಡಲಿ ಹಿಡಿದು ನಿಂತಿರುವುದನ್ನು, ಆತನ ಮಕ್ಕಳಾದ ನಿರಂಜನ್ ಮತ್ತು ಕಿರಣ್ ಸ್ಥಳದಲ್ಲಿ ಇದ್ದುದನ್ನು ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿದ್ದರು. ಅಲ್ಲದೆ, ಜಯಾನಂದನ ಪತ್ನಿ ಆಶಾಬಾಯಿ 'ಹೊಡಿ, ಹೊಡಿ' ಎಂದು ಕೂಗುವ ಮೂಲಕ ಹಲ್ಲೆಗೆ ಪ್ರೋತ್ಸಾಹ ನೀಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.
ಕುಟುಂಬ ಸದಸ್ಯರ ಈ ನಡೆ ಸುನಂದಾ ಅವರನ್ನು ಕೊಲೆ ಮಾಡುವ ಸಂಘಟಿತ ಪ್ರಯತ್ನದ ಭಾಗವಾಗಿದ್ದು ಅವರು ಅವಳನ್ನು ಕೊಲ್ಲುವ ಸಾಮಾನ್ಯ ಉದ್ದೇಶ ಹೊಂದಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ, ಮೇಲ್ಮನವಿದಾರರು ಈ ವಾದವನ್ನು ವಿರೋಧಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ ಸಾಕ್ಷ್ಯದ ಕುರಿತಂತೆ ಪ್ರಾಸಿಕ್ಯೂಷನ್ ವ್ಯಾಖ್ಯಾನವನ್ನು ಒಪ್ಪಲಿಲ್ಲ. "ಹೊಡಿ, ಹೊಡಿ" ಎಂದಿರುವುದು ಥಳಿಸುವ ಉದ್ದೇಶದಿಂದ ಹೇಳಿರುವ ಸಾಧ್ಯತೆಗಳಿದ್ದು ಕೊಲ್ಲುವ ಉದ್ದೇಶದಿಂದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
“ಹೊಡಿ, ಹೊಡಿ ಎಂಬ ಪದಗಳನ್ನು ಉಚ್ಚರಿಸುವುದು ಐಪಿಸಿಯ ಸೆಕ್ಷನ್ 34ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಹೊಡೆಯಲೆಂದಷ್ಟೇ ಈ ಪದ ಉಚ್ಚರಿಸಿರಬಹುದು”ಎಂದು ಪೀಠ ಹೇಳಿತು.
ಆದ್ದರಿಂದ, ಆರೋಪಿಗಳು ಕೊಲೆ ಮಾಡಲು ಮೊದಲೇ ಸಂಚು ರೂಪಿಸಿದ್ದರು ಅಥವಾ ಸಾಮಾನ್ಯ ಉದ್ದೇಶ ಹೊಂದಿದ್ದರು ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಅದು ತೀರ್ಮಾನಿಸಿತು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 34 ಮತ್ತು ಸೆಕ್ಷನ್ 302ರ ಸಹವಾಚನದೊಂದಿಗೆ ಆಶಾಬಾಯಿ, ನಿರಂಜನ್ ಮತ್ತು ಕಿರಣ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. ಆದರೆ ಜಯಾನಂದ ಧಾಬಲೆಯ ಅಪರಾಧ ಮತ್ತು ಆತನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು.