ಕೊಲೆ ಪ್ರಕರಣ ಎಂಬ ಕಾರಣಕ್ಕೆ ಆರೋಪಿಗಳಿಗೆ ಜಾಮೀನು ನೀಡದೆ ಇರುವುದು ತಪ್ಪು: ಸುಪ್ರೀಂ ಕೋರ್ಟ್
ವ್ಯಕ್ತಿಯೊಬ್ಬನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಎಂದ ಮಾತ್ರಕ್ಕೆ, ಆ ಆರೋಪಿ ಕ್ರಿಮಿನಲ್ ವಿಚಾರಣೆಯ ತೀರ್ಪು ಹೊರಬೀಳುವವರೆಗೆ ಜಾಮೀನು ಇಲ್ಲದೆ ಜೈಲಿನಲ್ಲಿ ಉಳಿಯಬೇಕು ಎಂಬುದು ಸ್ವಯಂಚಾಲಿತ ಅರ್ಥವಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ [ ದೀಪಕ್ ತಾಖರ್ ಮತ್ತು ರಾಜಸ್ಥಾನ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕೊಲೆ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ವೇಳೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿ ವಿರುದ್ಧ ಕೊಲೆಯ ಗಂಭೀರ ಆರೋಪ ಇರುವುದರಿಂದ ಜಾಮೀನು ಅರ್ಜಿಗೆ ಸರ್ಕಾರದ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಜಾಮೀನು ನೀಡದೆ ಇರಲು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ.
"ಒಬ್ಬ ವ್ಯಕ್ತಿ ಮೇಲೆ ಕೊಲೆ ಆರೋಪ ಹೊರಿಸಿದರೆ, ಅವನು ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂಬುದು ನಿಮ್ಮ ಮನಸ್ಸಿನಲ್ಲಿರುವ ಸಂಪೂರ್ಣ ತಪ್ಪು ಪರಿಕಲ್ಪನೆ. ಇದು ಸರಿಯಲ್ಲ. ನಾವು ಉಳಿದ ಸಂದರ್ಭಗಳನ್ನೂ ನೋಡಬೇಕು" ಎಂದು ನ್ಯಾಯಮೂರ್ತಿ ಓಕಾ ಹೇಳಿದರು.
ಆರೋಪಿ ಒಂದು ವರ್ಷ ಕಾಲ ಸೆರೆವಾಸ ಅನುಭವಿಸಿದ್ದಾನೆ ಅಲ್ಲದೆ ಆತನಿಗೆ ಅಪರಾಧದ ಹಿನ್ನೆಲೆಯಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಜಾಮೀನು ನೀಡಿದೆ.
ನಡೆದದ್ದು ರಸ್ತೆ ಅಪಘಾತವಾದರೂ ಕೊಲೆ ಎಂದು ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪಘಾತದಿಂದ ಸಾವು ಸಂಭವಿಸಿದೆ ಎಂದು ಸಾಕ್ಷಿಗಳು ಸಹ ಹೇಳಿದ್ದಾರೆ. ಇದನ್ನು ವಿಚಾರಣಾ ವರದಿ ಕೂಡ ತಿಳಿಸಿದೆ. ತಾನು ಸಲ್ಲಿಸಿರುವ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ವರದಿ ಕೂಡ ಈ ಸಂಗತಿಗಳಿಗೆ ಪೂರಕವಾಗಿದೆ ಎಂದು ಅರ್ಜಿದಾರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅಪರಾಧದ ಗಂಭೀರತೆ ಉಲ್ಲೇಖಿಸಿ ರಾಜಸ್ಥಾನ ಹೈಕೋರ್ಟ್ ಆರೋಪಿಗೆ ಜಾಮೀನು ನಿರಾಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.