ಮಠದ ಚೆಕ್‌, ದಾಖಲೆಗಳಿಗೆ ಸಹಿ: ಮೆಮೊ ಸಲ್ಲಿಸಲು ಮುರುಘಾ ಶರಣರಿಗೆ ನಿರ್ದೇಶಿಸಿದ ಹೈಕೋರ್ಟ್‌

ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿಕೆ ಸಲ್ಲಿಸಲಾಗಿದೆ.
Karnataka HC and Dr. Shivamurthy Muruga Sharanaru
Karnataka HC and Dr. Shivamurthy Muruga Sharanaru

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಮತ್ತು ಎಸ್‌ಸಿ-ಎಸ್‌ಟಿ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿ ಬಂಧಿತರಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಜೈಲಿನಿಂದಲೇ ಮಠದ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮನವಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮುರುಘಾ ಶರಣರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಆರೋಪಿ ಸ್ವಾಮೀಜಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಸಂದೀಪ್ ಪಾಟೀಲ್ ಅವರು “ಮುರುಘಾ ಶರಣರು ಮಠದ ಏಕೈಕ ಟ್ರಸ್ಟಿಯಾಗಿದ್ದು, ಅವರು ಜೈಲಿನಲ್ಲಿ ಇರುವ ಕಾರಣ ಮಠದ ವಿದ್ಯಾಸಂಸ್ಥೆಗಳ ಸುಮಾರು 3,500 ನೌಕರರು ಸಂಬಳ ಇಲ್ಲದೆ ಪರದಾಡುವಂತಾಗಿದೆ. ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು” ಎಂದು ಕೋರಿದರು.

ಮುಂದುವರಿದು, “ಎರಡು ತಿಂಗಳ ನಂತರ ಏನಾಗುತ್ತದೆಯೋ ತಿಳಿದುಕೊಂಡು ಚೆಕ್ ಗಳಿಗೆ ಸಹಿ ಮಾಡುವುದಕ್ಕೆ ಸಂಬಂಧಿಸಿದಂತೆ ಬೇರೊಬ್ಬರಿಗೆ ಸಾಮಾನ್ಯ ಅಧಿಕಾರ ಪತ್ರ (ಮುಖ್ತ್ಯಾರನಾಮೆ / ಜನರಲ್‌ ಪವರ್‌ ಆಫ್ ಅಟರ್ನಿ - ಜಿಪಿಎ) ನೀಡಲು ಕೋರಲಾಗುವುದು. ವಿದ್ಯಾಪೀಠದ ಕಾರ್ಯದರ್ಶಿಗೆ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರ ಇಲ್ಲ. ಹೀಗಾಗಿ, ಜಿಪಿಎ ನೀಡುವ ಆಗುವ ತನಕ ತಾತ್ಕಾಲಿಕವಾಗಿ ಎರಡು ತಿಂಗಳ (ಆಗಸ್ಟ್ ಮತ್ತು ಸೆಪ್ಟೆಂಬರ್) ತಿಂಗಳ ಪಾವತಿಗೆ ಅನುವಾಗುವಂತೆ ಅಕ್ಟೋಬರ್ 1ರಿಂದ 5ರವರೆಗೆ ಐದು ದಿನಗಳ ಕಾಲ 200 ಚೆಕ್ ಗಳಿಗೆ ಸಹಿ ಮಾಡಲು ಒಂದು ಬಾರಿ ಅವಕಾಶ ನೀಡಬೇಕು” ಎಂದು ಮನವಿ ಮಾಡಿದರು.

Also Read
ಮಠ, ವಿದ್ಯಾಪೀಠದ ನಿರ್ವಹಣೆ: ಚೆಕ್‌ಗೆ ಸಹಿ ಹಾಕಲು ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಶಿವಮೂರ್ತಿ ಶರಣರು

ಇದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್ ಜವಳಿ ಅವರು “ಕರ್ನಾಟಕ ಜೈಲು ಕಾಯಿದೆ ಮತ್ತು ಜೈಲು ಕೈಪಿಡಿ ಅನುಸಾರ ಈ ರೀತಿ ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡು ತಮ್ಮ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಇಲ್ಲ. ಈಗ ಸ್ವಾಮೀಜಿಗೆ ಅವಕಾಶ ಮಾಡಿಕೊಟ್ಟರೆ ಇದು ಮತ್ತೊಬ್ಬರಿಗೂ ಇದು ಹಾದಿಯಾಗಬಹುದು. ಹೀಗಾಗಿ, ಅರ್ಜಿದಾರರ ಮನವಿ ಪುರಸ್ಕರಿಸಬಾರದು” ಎಂದು ಆಕ್ಷೇಪಿಸಿದರು.

ವಾದ- ಪ್ರತಿ ವಾದ ಆಲಿಸಿದ ಪೀಠವು “ಆರೋಪಿಯಿಂದಾಗಿ ಇತರರಿಗೆ ಸಮಸ್ಯೆಯಾಗಬಾರದು. ಅರ್ಜಿದಾರರು ಏನು ಹೇಳುತ್ತಿದ್ದಾರೋ ಅದರ ಪ್ರಸ್ತಾವವನ್ನು ಲಿಖಿತವಾಗಿ ಜ್ಞಾಪನಾ ಪತ್ರದೊಂದಿಗೆ (ಮೆಮೊ) ನ್ಯಾಯಾಲಯಕ್ಕೆ ಸಲ್ಲಿಸಲಿ. ಆನಂತರ ಅದನ್ನು ಪರಿಶೀಲಿಸಲಾಗುವುದು” ಎಂದು ಹೇಳಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com