

ಲಡಾಖ್‌ಗೆ ಪ್ರತ್ಯೇಕ ರಾಜ್ಯ ಸ್ಥಾನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಚಿಂತಕ, ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿರುವುದು ಸಾರ್ವಜನಿಕ ಸುವ್ಯವಸ್ಥೆ ಅಥವಾ ಭದ್ರತೆ ಕುರಿತಾದ ನೈಜ ಕಾಳಜಿಯಿಂದಲ್ಲ ಬದಲಿಗೆ ಗೌರವಯುತ ನಾಗರಿಕರೊಬ್ಬರು ಅಭಿಪ್ರಾಯ ಭೇದ ಹೊಂದುವ ತಮ್ಮ ಹಕ್ಕನ್ನು ಬಳಸದಂತೆ ಉದ್ದೇಶಪೂರ್ವಕವಾಗಿ ಅವರ ದನಿಯನ್ನು ಅಡಗಿಸುವ ಪ್ರಯತ್ನ ಎಂದು ವಾಂಗ್‌ಚುಕ್ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಮತ್ತು ಆರನೇ ಪರಿಚ್ಛೇದದ ಸ್ಥಾನಮಾನದ ನೀಡುವಂತೆ ಆಗ್ರಹಿಸಿ ಸೆಪ್ಟೆಂಬರ್‌ನಲ್ಲಿ ಲೇಹ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಿದೆಯಡಿ (ಎನ್‌ಎಸ್‌ಎ) ಬಂಧಿಸಲಾಗಿತ್ತು.
ಈ ಹಿಂದೆ ವಾಂಗ್‌ಚುಕ್ ಬಂಧನ ಟೀಕಿಸಿದ್ದ ಆಂಗ್ಮೋ, ವಿಚಾರಣಾರ್ಹತೆಯ ಆಧಾರದ ಮೇಲೆ ಅವರ ಸೆರೆವಾಸ ಪ್ರಶ್ನಿಸಿ ತಾವು ಸಲ್ಲಿಸಿದ್ದ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಲು ಮುಂದಾಗಿರುವುದಾಗಿ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಅವರು ಒದಗಿಸಿರುವ ಹೆಚ್ಚುವರಿ ಸಾಕ್ಷ್ಯಗಳಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಆಂಗ್ಮೋ ಅವರು ತಿದ್ದುಪಡಿ ಮಾಡಿದ ಪ್ರತಿಯನ್ನು 10 ದಿನಗಳಲ್ಲಿ ಸಲ್ಲಿಸಬೇಕು. ಒಂದು ವಾರದಲ್ಲಿ ಕೇಂದ್ರ ಪ್ರತಿಕ್ರಿಯೆ ನೀಡಬೇಕು ನಂತರ ಒಂದು ವಾರದೊಳಗೆ ಆಂಗ್ಮೋ ಅವರು ಪ್ರತ್ಯುತ್ತರ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ ನ್ಯಾಯಾಲಯ ನವೆಂಬರ್ 24ಕ್ಕೆ ವಿಚಾರಣೆ ಮುಂದೂಡಿತು.
ವಾಂಗ್‌ಚುಕ್ ಬಂಧನ ಪ್ರಶ್ನಿಸಿರುವ ತಿದ್ದುಪಡಿ ಮನವಿಯಲ್ಲಿ ಗೀತಾಂಜಲಿ ಅವರು ತಮ್ಮ ಪತಿಯ ವಿರುದ್ಧ ಕೈಗೊಂಡ ಸರಣಿ ಕ್ರಮಗಳನ್ನು ಉಲ್ಲೇಖಿಸಿದ್ದಾರೆ. ವಾಂಗ್‌ಚುಕ್ ಅವರಿಗೆ ಸೇರಿದ್ದ ಸರ್ಕಾರೇತರ ಸಂಸ್ಥೆಗೆ ವಿದೇಶಿ ನಿಧಿ ಪಡೆಯದಂತೆ ಅನುಮತಿ ನಿರಾಕರಿಸಲಾಗಿದೆ. ಭೂಗುತ್ತಿಗೆ ರದ್ದುಪಡಿಸುವ ನೋಟಿಸ್ ನೀಡಲಾಗಿದ್ದು ಸಿಬಿಐ ತನಿಖೆ ಆರಂಭ ಮಾಡುವುದಾಗಿ ತಿಳಿಸಲಾಗಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆ ಸಮನ್ಸ್ ನೀಡಲಾಗಿದೆ. ಬಂಧನಕ್ಕೆ ಆಧಾರವಾಗಿರುವ ಐದು ಎಫ್‌ಐಆರ್‌ಗಳಲ್ಲಿ ಮೂರು 2024ರಷ್ಟು ಹಳೆಯವು. ಹೀಗಾಗಿ ಅವರ ಬಂಧನಕ್ಕೂ ಎಫ್‌ಐಆರ್‌ಗೂ ನೇರ ಸಂಬಂಧ ಇಲ್ಲ ಎಂದಿದ್ದಾರೆ.
ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿರುವ ಲೇಹ್‌ನ ಅಪೆಕ್ಸ್ ಬಾಡಿ (ಎಬಿಎಲ್) ಪ್ರಮುಖ ಸದಸ್ಯರಾಗಿ ವಾಂಗ್‌ಚುಕ್ ಸಾರ್ವಜನಿಕರಿಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪಗಳನ್ನು ಅವರ ಪತ್ನಿ ನಿರಾಕರಿಸಿದ್ದಾರೆ. ಕೇಂದ್ರದೊಂದಿಗಿನ ಮಾತುಕತೆ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಬಲವಾದ ಆಕ್ಷೇಪ ಹೊಂದಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
ವಾಂಗ್‌ಚುಕ್ ಎಂದಿಗೂ ಶಾಂತಿಪ್ರಿಯ ಹೋರಾಟಗಾರ ಎಂದಿರುವ ಅವರು ತಮ್ಮ ಪತಿ ಶಿಕ್ಷಣ, ಹವಾಮಾನ ಸಂಶೋಧನೆ, ಸೈನ್ಯಕ್ಕೆ ತಾಂತ್ರಿಕ ಸೌಲಭ್ಯ ಒದಗಿಸುವುದು ಮುಂತಾದ ರಾಷ್ಟ್ರಹಿತದ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಆಂಗ್ಮೋ ಪರ ವಾದ ಮಂಡಿಸಿದರು. ತಿದ್ದುಪಡಿ ಮಾಡಿದ ಅರ್ಜಿಯನ್ನು ವಕೀಲ ಸರ್ವಂ ರಿತಮ್ ಖರೆ ಅವರ ಮೂಲಕ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು.