[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ರಚನೆ ನ್ಯಾಯಯುತ, ಪಿಐಎಲ್‌ ನಿರ್ವಹಣೆಗೆ ಅರ್ಹವಲ್ಲ- ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಕೆ

ಅರ್ಜಿದಾರೆ ಗೀತಾ ಮಿಶ್ರಾ ಅವರು ವಕೀಲ ಜಿ ಆರ್‌ ಮೋಹನ್‌ ಮೂಲಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಜಾರಕಿಹೊಳಿ ಪರ ವಕೀರಾದ ಸ್ವಾಮಿನಿ ಗಣೇಶ್‌ ಅವರು ಕರ್ನಾಟಕ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.
Ramesh Jarakiholi and Karnataka High Court
Ramesh Jarakiholi and Karnataka High Court

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸೆಕ್ಸ್‌ ಸಿ.ಡಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಗೆ ಅನುಮತಿಸಬಾರದು ಎಂದು ಮಧ್ಯಂತರ ಪರಿಹಾರ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯು (ಪಿಐಎಲ್‌) ನಿರ್ವಹಣೆಗೆ ಅರ್ಹವಾಗಲಿಲ್ಲ ಎಂದು ಆರೋಪಿ ಜಾರಕಿಹೊಳಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ಅರ್ಜಿದಾರೆ ಗೀತಾ ಮಿಶ್ರಾ ಅವರು ವಕೀಲ ಜಿ ಆರ್‌ ಮೋಹನ್‌ ಮೂಲಕ ಸಲ್ಲಿಸಿರುವ ಪಿಐಎಲ್‌ಗೆ ಜಾರಕಿಹೊಳಿ ಪರ ವಕೀರಾದ ಸ್ವಾಮಿನಿ ಗಣೇಶ್‌ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆಯ ಪ್ರಮುಖ ಅಂಶಗಳು ಕೆಳಕಂಡಂತೆ ಇವೆ.

Also Read
ಜಾರಕಿಹೊಳಿ ನಡೆ-ನುಡಿಯಲ್ಲಿ ವೈರುಧ್ಯ ಗುರುತಿಸಿದ ಸಂತ್ರಸ್ತೆ; ಜಾರಕಿಹೊಳಿ, ಎಸ್‌ಐಟಿಗೆ ಹೈಕೋರ್ಟ್‌ ನೋಟಿಸ್‌
  • ಏಳನೇ ಪ್ರತಿವಾದಿಯಾಗಿರುವ ರಮೇಶ್‌ ಜಾರಕಿಹೊಳಿ ಕೋರಿಕೆಯ ಮೇರೆಗೆ ಕಳೆದ ಮಾರ್ಚ್‌ ೧೦ರಂದು ಕಾನೂನು ಮತ್ತು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರ ನಿರ್ದೇಶನದಂತೆ ಅಹವಾಲುಗಳ ತನಿಖೆಗಾಗಿ ಎರಡನೇ ಪ್ರತಿವಾದಿಯಾದ ಬೆಂಗಳೂರು ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆಯೇ ವಿನಾ ಪ್ರಕರಣದ ತನಿಖೆ ನಡೆಸಲು ಆದೇಶಿಲ್ಲ. ಎಸ್‌ಐಟಿಯು ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.

  • ಕಳೆದ ಮಾರ್ಚ್‌ ೧೩ರಂದು ಜಾರಕಿಹೊಳಿ ಆಪ್ತರು ನೀಡಿದ ದೂರಿನ ಅನ್ವಯ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಮಾರ್ಚ್‌ ೨೬ರಂದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿದ್ದಾರೆ. ಈ ಎರಡೂ ಪ್ರಕರಣದ ವಿಚಾರಣೆಯನ್ನೂ ಎಸ್‌ಐಟಿ ನಡೆಸುತ್ತಿದೆ.

  • ತನಿಖೆ ನಡೆಸುವಂತೆ ಜಾರಕಿಹೊಳಿ ಅವರು ಸರ್ಕಾರಕ್ಕೆ ಕೋರಿರುವುದು ಮತ್ತು ಜಾರಕಿಹೊಳಿ ಆಪ್ತರು ಸದಾಶಿವನಗರ ನಗರದಲ್ಲಿ ದಾಖಲಿಸಿರುವ ಬ್ಲ್ಯಾಕ್‌ ಮೇಲ್‌ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿತ್ತು. ಆನಂತರ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ದೂರು ಎಲ್ಲವೂ ಒಂದಕ್ಕೊಂದು ಸಂಬಂಧಪಟ್ಟಿದ್ದರಿಂದ ಈ ದೂರನ್ನು ಎಸ್‌ಐಟಿಗೆ ವರ್ಗಾಯಿಸಲಾಗಿದ್ದು, ಇದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು.

  • ಪಿಐಎಲ್‌ನಲ್ಲಿ ಎರಡನೇ ಪ್ರತಿವಾದಿಯನ್ನಾಗಿಸಲಾಗಿರುವ ಬೆಂಗಳೂರು ಪೊಲೀಸ್‌ ಆಯುಕ್ತರು ನಗರದ ಪೊಲೀಸ್‌ ಮುಖ್ಯಸ್ಥರಾಗಿರುವುದರಿಂದ ಸರ್ಕಾರದ ನಿರ್ದೇಶನದ ಹೊರತಾಗಿಯೂ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ ೭೭ ಮತ್ತು ಐಪಿಸಿ ೩೬ರ ಅಡಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ಗಿಂತ ಹೆಚ್ಚಿನ ಸ್ಥಾನ ಹೊಂದಿರುವ ತನಿಖಾಧಿಕಾರಿಗಳ ತಂಡ ರಚಿಸಿ, ಐಪಿಸಿ ೧೭೩(೨)ರ ಪ್ರಕಾರ ಎರಡು ಅಪರಾಧಗಳಿಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನ್ಯಾಯಾಲಯ ಮತ್ತು ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ.

  • ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತಂಡ ರಚಿಸಿರುವುದು ಕಾನೂನುಬಾಹಿರ ಮತ್ತು ಶಾಸನಬದ್ಧವಾಗಿಲ್ಲ ಎಂದು ಅರ್ಜಿದಾರರು ಹೇಳುತ್ತಿರುವುದು ಸುಳ್ಳು. ಏಕೆಂದರೆ, ಐಪಿಸಿ ಸೆಕ್ಷನ್‌ ೨ (ಎಚ್)‌, ೨ (ಆರ್‌) ಮತ್ತು ೧೭೩(೨) ರ ಅಡಿ ಅದಕ್ಕೆ ಅವಕಾಶವಿದೆ.

  • ಎರಡು ಪ್ರತ್ಯೇಕ ಪ್ರಕರಣಗಳ ತನಿಖೆ ನಡೆಸಲು ಬೆಂಗಳೂರು ಹೆಚ್ಚುವರಿ ಪೊಲೀಸ್‌ ಆಯುಕ್ತರ ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಅದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಆದೇಶಿಸಿರುವುದನ್ನು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಹೇಳಲಾಗದು.

  • ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗುವ ದೂರುಗಳ ತನಿಖೆಗೆ ಸಂಬಂಧಿಸಿದಂತೆ ಠಾಣೆಯ ಅಧಿಕಾರಿಗಳ ಮೇಲೆ ಪಕ್ಷಪಾತದ ಆರೋಪ ಮಾಡಲಾಗುತ್ತದೆ. ಇದನ್ನು ತಪ್ಪಿಸಲು ಮತ್ತು ಪಕ್ಷಕಾರರಿಗೆ ಒಳಿತು ಮಾಡುವ ಉದ್ದೇಶದಿಂದ ಪಾರದರ್ಶಕ, ನ್ಯಾಯಯುತ ಮತ್ತು ಪ್ರಾಮಾಣಿಕವಾಗಿ ತನಿಖೆ ನಡೆಸುವ ಉದ್ದೇಶದಿಂದ ಉನ್ನತ ಅಧಿಕಾರಿಗಳ ತಂಡವನ್ನು ರಚಿಸಲಾಗುತ್ತದೆ.

  • ಸದರಿ ಪ್ರಕರಣದಲ್ಲಿ ಎರಡು ಪ್ರತ್ಯೇಕ ದೂರುಗಳ ವಿಚಾರಣೆಗಾಗಿ ಇನ್‌ಸ್ಪೆಕ್ಟರ್‌, ಎಸಿಪಿ, ಡಿಸಿಪಿ, ಜಂಟಿ ಪೊಲೀಸ್‌ ಆಯುಕ್ತರನ್ನು ಒಳಗೊಂಡ ಬೆಂಗಳೂರಿನ ಹೆಚ್ಚುವರಿ ಪೊಲೀಸ್‌ ಆಯುಕ್ತರ ನೇತೃತ್ವದ ತಂಡವನ್ನು ರಚಿಸಲಾಗಿದೆ.

  • ವಾಸ್ತವ ಸಂಗತಿ ಹೀಗಿರಬೇಕಾದರೆ ಅರ್ಜಿದಾರರು (ಪಿಐಎಲ್‌ ಸಲ್ಲಿಸಿರುವವರು) ಪ್ರಕರಣದ ತನಿಖೆಯನ್ನು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಅಥವಾ ಹೆಡ್‌ ಕಾನ್‌ಸ್ಟೆಬಲ್‌ ಮಟ್ಟದ ಸಿಬ್ಬಂದಿ ತನಿಖೆ ನಡೆಸುವುದಕ್ಕೆ ವಾಪಸ್‌ ಮಾಡುವಂತೆ ಏಕೆ ಕೋರುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಬೆಂಗಳೂರು ಪೊಲೀಸ್‌ ಆಯುಕ್ತ ನಂತರದ ಶ್ರೇಣಿ ಹೊಂದಿರುವ ಅಧಿಕಾರಿ ನೇತೃತ್ವದ ತನಿಖೆಯ ಬದಲಿಗೆ ಕೆಳಹಂತದ ಅಧಿಕಾರಿಗಳು ತನಿಖೆ ನಡೆಸುವಂತೆ ಕೋರಿರುವ ಅರ್ಜಿದಾರರ ಮನಸ್ಥಿತಿಯು ರಮೇಶ್‌ ಜಾರಕಿಹೊಳಿ ಅವರಿಗೆ ಅರ್ಥವಾಗುತ್ತಿಲ್ಲ.

  • ಎರಡನೇ ಪ್ರತಿವಾದಿಯಾದ ಪೊಲೀಸ್‌ ಆಯುಕ್ತರ ಆಕ್ಷೇಪಿತ ಆದೇಶವು (ಎಸ್‌ಐಟಿ ರಚನೆ) ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ ೨೨ ಮತ್ತು ಐಪಿಸಿ ಸೆಕ್ಷನ್‌ ೩೬ರ ಪ್ರಕಾರ ಕಾನೂನು ಸಮ್ಮತವಾಗಿದೆ. ಹೀಗಾಗಿ, ಪಿಐಎಲ್‌ ನಿರ್ವಹಣೆಗೆ ಅರ್ಹವಾಗಿಲ್ಲ. ಅದನ್ನು ವಜಾ ಮಾಡಬೇಕು ಎಂದು ಕೋರಲಾಗಿದೆ.

  • ಪ್ರಕರಣಗಳನ್ನು ಎಸ್‌ಐಟಿಯಿಂದ ಸದಾಶಿವನಗರ ಮತ್ತು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಪೊಲೀಸರಿಗೆ ವರ್ಗಾಯಿಸುವಂತೆ ಕೋರಿರುವ ಅರ್ಜಿದಾರರ ಮನವಿಯನ್ನು ಕ್ರಿಮಿನಲ್‌ ನ್ಯಾಯಶಾಸ್ತ್ರದಲ್ಲಿ ಎಂದೂ ಕೇಳಿಲ್ಲ.

  • ತನಿಖೆಯಲ್ಲಿ ಹೆಚ್ಚಿನ ಪಾದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಪೊಲೀಸ್‌ ಠಾಣೆಗಳಿಗೆ ಬದಲಿಗೆ ಉನ್ನತ ಅಧಿಕಾರಿಗಳ ತಂಡಕ್ಕೆ ತನಿಖೆ ವರ್ಗಾಯಿಸುವಂತೆ ಹೈಕೋರ್ಟ್‌ಗೆ ಹಲವು ಮನವಿಗಳು ಸಲ್ಲಿಕೆಯಾಗುತ್ತಿರುತ್ತವೆ.

  • ಪ್ರಕರಣದಲ್ಲಿ ಅರ್ಜಿದಾರರು ಮೂರನೇ ಪಕ್ಷಕಾರರಾಗಿದ್ದಾರೆ. ಅರ್ಜಿದಾರರು ಪ್ರಕರಣದಲ್ಲಿ ದೂರುದಾರರು, ಪೊಲೀಸ್‌ ಮಾಹಿತಿದಾರರು, ಸಂತ್ತಸ್ತರು ಅಥವಾ ಸಾಕ್ಷಿ ಯಾವುದೂ ಆಗಿಲ್ಲ. ಇಡೀ ಪ್ರಕ್ರಿಯಲ್ಲಿ ಅರ್ಜಿದಾರರು ಹೊರಗಿನವರಾಗಿದ್ದು, ಯಾವ ಕಾರಣಕ್ಕಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂಬುದು ಅವರಿಗೆ ಮಾತ್ರ ಗೊತ್ತಿದೆ.

  • ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ, ಪೊಲೀಸ್‌ ಮಾಹಿತಿದಾರರು ಅಥವಾ ಸಾಕ್ಷಿಗಳು ಎರಡು ಪ್ರತ್ಯೇಕ ಪ್ರಕರಣಗಳ ವಿಚಾರಣೆ ನಡೆಸಿರುವ ಎಸ್‌ಐಟಿ ಪ್ರಶ್ನಿಸಿ ಸಮರ್ಥ ಪ್ರಾಧಿಕಾರ ಅಥವಾ ನ್ಯಾಯಾಲಯದ ಮೆಟ್ಟಿಲೇರಿಲ್ಲ.

  • ಪ್ರಕರಣದ ಅರ್ಹತೆಯ ಆಧರಿಸಿ ಪಿಐಎಲ್‌ ಮೂಲಕ ಕ್ರಿಮಿನಲ್‌ ಪ್ರಕರಣಗಳಲ್ಲಿ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವ ಕಟ್ಟುಪಾಡುಗಳನ್ನು ಬಳಸಿಕೊಂಡು ಈ ನ್ಯಾಯಾಲಯವನ್ನು ಮೂರನೇ ವ್ಯಕ್ತಿಗಳು ಸಂಪರ್ಕಿಸಲಾಗದು. ಹೀಗಾಗಿ, ಅಶೋಕ್‌ ಕುಮಾರ್‌ ಪಾಂಡೆ ವರ್ಸಸ್‌ ಪಶ್ಚಿಮ ಬಂಗಾಳ ಪ್ರಕರಣದಲ್ಲಿ ವ್ಯಕ್ತಿಯ ಘನತೆಗೆ ಧಕ್ಕೆ ತರುವ ದುರುದ್ದೇಶದಿಂದ ದಾಖಲಿಸಲಾಗದ ಪಿಐಎಲ್‌ಗಳ ವಿಚಾರಣೆ ನಡೆಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲು ಏಳನೇ ಪ್ರತಿವಾದಿಯಾದ ರಮೇಶ್‌ ಜಾರಕಿಹೊಳಿ ಇಚ್ಛಿಸುತ್ತೇನೆ. ಹಾಗಾಗಿ, ಅರ್ಜಿದಾರರ ಹಿಂದಿರುವವರನ್ನು ತೃಪ್ತಿಪಡಿಸುವುದಾಗಿಕ್ಕಾಗಿ ರಾಜಕೀಯ ಮತ್ತು ಖಾಸಗಿ ದುರುದ್ದೇಶದಿಂದ ಈ ಮನವಿ ಸಲ್ಲಿಸಲಾಗಿದೆ.

  • ಉನ್ನತಾಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡದಲ್ಲಿರುವ ಅಧಿಕಾರಿಗಳು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ಪಕ್ಷಾತೀತವಾಗಿ ತನಿಖೆ ನಡೆಸಿ, ತಪ್ಪಿಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ಎಲ್ಲಾ ನಿಟ್ಟಿನಲ್ಲಿ ಪ್ರಕರಣಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿರದ ಪಿಐಎಲ್‌ ಅನ್ನು ವಜಾ ಮಾಡಬೇಕು ಎಂದು ಕೋರಲಾಗಿದೆ.

Kannada Bar & Bench
kannada.barandbench.com