ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ದಳವು ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶುಕ್ರವಾರ 1,691 ಪುಟಗಳ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, 120 ಸಾಕ್ಷಿಗಳನ್ನು ಉಲ್ಲೇಖಿಸಿದೆ. ಇದರೊಂದಿಗೆ ಪ್ರಜ್ವಲ್ ವಿರುದ್ಧದ ಮೂರು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾದಂತಾಗಿದೆ. ಇನ್ನೂ ಒಂದು ಪ್ರಕರಣದಲ್ಲಿ ಎಸ್‌ಐಟಿಯು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಿದೆ.
ತನಿಖಾಧಿಕಾರಿಯಾಗಿರುವ ಪೊಲೀಸ್ ಇನ್‌ಸ್ಪೆಕ್ಟರ್ ಜಿ ಶೋಭಾ ಅವರು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರಿಗೆ ಆರೋಪ ಪಟ್ಟಿ ಹಾಗೂ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದರು.
ಬೆಂಗಳೂರಿನ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 506, 354(ಎ)(1)(ii), 354(ಬಿ), 354(ಸಿ), 201 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಅಪರಾಧಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿರುವ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಂಸದರ ಕ್ವಾರ್ಟರ್ಸ್ ಅನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಹಂಚಿಕೆ ಮಾಡಲಾಗಿತ್ತು. ಇದನ್ನು ಪ್ರಜ್ವಲ್ ತನ್ನ ಗೃಹ ಕಚೇರಿ ಮಾಡಿಕೊಂಡಿದ್ದರು. 2020ರ ಜನವರಿ-ಫೆಬ್ರವರಿಯಲ್ಲಿ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಸೀಟು ಕೊಡಿಸುವ ಉದ್ದೇಶದಿಂದ ಸಂತ್ರಸ್ತೆಯು ಅಲ್ಲಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆ ಒಬ್ಬರೇ ಇರುವುದನ್ನು ಕಂಡು ಆಕೆಯನ್ನು ಸಂಸದರ ಕ್ವಾರ್ಟರ್ಸ್‌ನಲ್ಲಿ ಕೊಠಡಿಗೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ್ದರು. ತಾನು ಹೇಳಿದಂತೆ ಕೇಳದಿದ್ದರೆ ಪತಿಯನ್ನು ಶೂಟ್ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದನು. ವಿಡಿಯೋ ಮಾಡುವಾಗ ನಗುವಂತೆ ಪೀಡಿಸುತ್ತಿದ್ದನು ಎಂದು ಸಂತ್ರಸ್ತೆ ಕಿಡಿಗೇಡಿ ಕೃತ್ಯ ಬಿಚ್ಚಿಟ್ಟಿದ್ದಾರೆ.
ಆನಂತರ ಎರಡು ದಿನಗಳ ಬಳಿಕ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋ ಇದೆ. ಈಗ ಮತ್ತೆ ಕ್ವಾರ್ಟರ್ಸ್‌ಗೆ ಬಾರದಿದ್ದರೆ ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆನಂತರ ವಾಟ್ಸಾಪ್ ಕರೆ ಮಾಡಿದಾಗ ಸ್ವೀಕರಿಸಬೇಕು ಎಂಬ ಬೆದರಿಕೆ ಹಾಕಿದ್ದನು. ಅಲ್ಲದೆ 15 ದಿನಗಳ ಬಳಿಕ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಿಮ್‌ಗಳಿಂದ ವಿಡಿಯೋ ಕರೆ ಮಾಡಿ, ಸಂತ್ರಸ್ತೆಯನ್ನು ಬೆತ್ತಲಾಗುವಂತೆ ಮಾಡಿ ತನ್ನ ಗುರುತು ಮರೆಮಾಚಲು ಕಣ್ಣು ಮತ್ತು ಹುಬ್ಬು ಮಾತ್ರ ಕಾಣುವಂತೆ ಮಾಡಿ ಸ್ಕ್ರೀನ್ ಶಾಟ್‌ಗಳನ್ನು ತೆಗೆದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡುವಾಗ ತಾನು ಸೂಚಿಸಿದ ರೀತಿಯ ಒಳ ಉಡುಪು ಮತ್ತು ಬಟ್ಟೆ ಧರಿಸಬೇಕು ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ, ತನ್ನ ನಂಬರ್‌ಗಳನ್ನು ಸೇವ್ ಮಾಡದಂತೆ ಬೆದರಿಕೆ ಹಾಕಿದ್ದನು ಎಂದು ವಿವರಿಸಲಾಗಿದೆ.
2020ರ ಜೂನ್‌ನಲ್ಲಿ ಹೊಳನರಸೀಪುರದಲ್ಲಿ ತಂದೆಯ ಮಾಲೀಕತ್ವದ ಚೆನ್ನಾಂಬಿಕ ನಿಲಯಕ್ಕೆ ಸಂತ್ರಸ್ತೆ ಕರೆಸಿ, ಆಕೆಯ ಮೇಲೆ ಬಲಾತ್ಕಾರ ಮಾಡಿ ವಿಡಿಯೋ ಮಾಡಿದ್ದಾನೆ. 2022ರ ಅಕ್ಟೋಬರ್ 3ರಂದು ಬೇಲೂರಿನ ರಂಭಾಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಶರನ್ನವರಾತ್ರಿ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂದು ರಾತ್ರಿ ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂತ್ರಸ್ತೆಯನ್ನು ಹಾಸನ ಕ್ವಾರ್ಟರ್ಸ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ. ಇದೇ ರೀತಿ ಹಲವು ಬಾರಿ ಅತ್ಯಾಚಾರ ನಡೆಸಿ, ವಿಡಿಯೊ ರೆಕಾರ್ಡ್ ಮತ್ತು ಚಿತ್ರಗಳನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾನೆ. ಆನಂತರ ಅವುಗಳನ್ನು ನಾಶಪಡಿಸಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಹೊಳೆನರಸೀಪುರದ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಜ್ವಲ್ ವಿರುದ್ಧ ಎಸ್‌ಐಟಿಯು 2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ.
ಮನೆಗೆಲಸದಾಕೆ ಮೇಲೆ ಎಸಗಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು ಈಚೆಗೆ ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376(2)(n), 376(2)(k), 506, 354(A), 354(B), 354(c), 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66E ಅಡಿ ಅಪರಾಧಕ್ಕೆ 1,632 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ 113 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಪ್ರಜ್ವಲ್ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣ ಇದಾಗಿದೆ.
ಇದಕ್ಕೂ ಮುನ್ನ, ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು ಬರೋಬ್ಬರಿ 2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಆರೋಪ ಪಟ್ಟಿಯಲ್ಲಿ 150 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ.