
ಹದಿನಾರು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಇಬ್ಬರ ಆರೋಪಿಗಳಿಗೆ ಐಪಿಸಿ ಸೆಕ್ಷನ್ 377ರ (ಅಸ್ವಾಭಾವಿಕ ಕೃತ್ಯ) ಅಡಿಯಲ್ಲಿ ಮೂರು ವರ್ಷಗಳ ಕಾಲ ವಿಧಿಸಿದ್ದ ಕಠಿಣ ಸಜೆಯನ್ನು ಕೇರಳ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ [ಅಬ್ದುಲ್ ಸಲಾಮ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ ಮತ್ತು ಸಂಬಂಧಿತ ವ್ಯಾಜ್ಯ].
ಸಂತ್ರಸ್ತ ಧೂಮಪಾನ ಮಾಡುತ್ತಾನೆ ಎಂದ ಮಾತ್ರಕ್ಕೆ ಆತನ ಸಾಕ್ಷ್ಯ ಸರಿಯಿಲ್ಲ ಎನ್ನಲಾಗದು. ಸಂತ್ರಸ್ತನ ಅಂತಹ ನಡೆ ಆತನ ನೈತಿಕ ಸಮಗ್ರತೆಯ ಬಗ್ಗೆ ಸ್ವಯಂಚಾಲಿತ ತೀರ್ಮಾನಕ್ಕೆ ಬರಲು ಕಾರಣವಾಗಬಾರದು ಎಂದು ಆರೋಪಿಗಳ ಮನವಿ ವಜಾಗೊಳಿಸುವಾಗ ನ್ಯಾಯಮೂರ್ತಿ ಸಿ ಎಸ್ ಸುಧಾ ತಿಳಿಸಿದರು.
“ಸಂತ್ರಸ್ತ ತಾನು ಧೂಮಪಾನ ಮಾಡುತ್ತೇನೆ ಆದರೆ ಮದ್ಯಪಾನ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಆತ ಧೂಮಪಾನ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿರುವುದು ಆತ ವಿಕೃತ ಸ್ವಭಾವದವನೆಂದು ತೀರ್ಮಾನಿಸಲು ಕಾರಣವಾಗದು. ಯುವಕರು ತಮ್ಮ ಹದಿಹರೆಯದ ಇಲ್ಲವೇ ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡುವ ಸಾಧ್ಯತೆ ಇದ್ದು ಅವರ ಸ್ವಭಾವ ಸಂಪೂರ್ಣ ವಕ್ರ ಮತ್ತು ವಿಶ್ವಾಸಾರ್ಹವಲ್ಲ ಎಂದು ಹಣೆಪಟ್ಟಿ ಹಚ್ಚಲಾಗದು” ಎಂಬುದಾಗಿ ನ್ಯಾಯಮೂರ್ತಿಗಳು ವಿವರಿಸಿದರು.
ಇಬ್ಬರು ಆರೋಪಿಗಳು 16 ವರ್ಷದ ಬಾಲಕನನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮದ್ಯ ಸೇವಿಸುವಂತೆ ಒತ್ತಾಯಿಸಿ ಅವನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ದೂರಲಾಗಿತ್ತು.
ಸಂತ್ರಸ್ತ ನೀಡಿದ್ದ ದೂರಿನ ಆಧಾರದ ಮೇಲೆ, ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣ ಶಿಕ್ಷೆ) ಮತ್ತು 377ರ ಅಡಿಯಲ್ಲಿ ಐಪಿಸಿ ಸೆಕ್ಷನ್ 34 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಸೆಕ್ಷನ್ 363 ಐಪಿಸಿ ಅಡಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಸೆಷನ್ಸ್ ನ್ಯಾಯಾಲಯ ಸೆಕ್ಷನ್ 377ರ ಅಡಿ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳು ಸಂತ್ರಸ್ತ ಧೂಮಪಾನ ಮಾಡುವುದರಿಂದ ಆತನ ಸಾಕ್ಷ್ಯ ವಿಶ್ವಾಸಾರ್ಹವಲ್ಲ ಎಂದು ಪರಿಗಣಿಸಬೇಕು ಎಂದು ಕೋರಿದ್ದರು.
ಸಂತ್ರಸ್ತ ನುಡಿದ ಸಾಕ್ಷ್ಯ ನಂಬಲರ್ಹವಾಗಿದೆ ಎಂದು ಪರಿಗಣಿಸಿದ ನ್ಯಾಯಾಲಯ ಆರೋಪಿಗಳನ್ನು ಸುಳ್ಳೇ ಸಿಲುಕಿಸುವ ಉದ್ದೇಶದ ಬಗ್ಗೆ ಯಾವುದೇ ಪುರಾವೆಗಳು ದೊರೆತಿಲ್ಲ ಎಂದಿತು. ಅಲ್ಲದೆ ಸಂತ್ರಸ್ತ ತನಗೆ ಪೂರ್ವ ಪರಿಚಯ ಇರದ ಅಥವಾ ದ್ವೇಷ ಹೊಂದಿರದ ವ್ಯಕ್ತಿಗಳ ವಿರುದ್ಧ ಅಂತಹ ವಿವರವಾದ ಆರೋಪ ಸೃಷ್ಟಿಸುವುದು ಅಸಂಭವದ ವಿಚಾರ ಎಂದಿತು.
ಒಬ್ಬ ವ್ಯಕ್ತಿ ಧೂಮಪಾನ ಮಾಡುತ್ತಾನೆ ಎಂದ ಮಾತ್ರಕ್ಕೆ ಅವನು ವಕ್ರ ಸ್ವಭಾವದವನೆಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು. ಆದ್ದರಿಂದ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ದೋಷ ಇಲ್ಲ ಎಂದ ಹೈಕೋರ್ಟ್ ಅಪರಾಧ ಎತ್ತಿಹಿಡಿದು ಆರೋಪಿಗಳ ಮೇಲ್ಮನವಿ ವಜಾಗೊಳಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]