ಗೋವಾದ ಬಾರ್ ಮತ್ತು ರೆಸ್ಟರಂಟ್ ನಂಟಿನ ಬಗ್ಗೆ ಸ್ಮೃತಿ ಇರಾನಿ ಮತ್ತು ಅವರ ಕುಟುಂಬ ಸಾರ್ವಜನಿಕವಾಗಿ ಪದೇ ಪದೇ ಸಮರ್ಥನೆ ಮಾಡಿಕೊಳ್ಳುತ್ತಿದ್ದು ಬೇರೆಯವರು ಈ ಸಮರ್ಥನೆಗಳ ಮೇಲೆ ಅವಲಂಬಿತರಾಗಿ ಕಾನೂನುಬದ್ಧ ಪ್ರಶ್ನೆ ಕೇಳಿದಾಗ ಅವರು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಹಾಗೂ ನೇತಾ ಡಿಸೋಜಾ ಅವರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಸ್ಮೃತಿ ಇರಾನಿ ಅವರ ವಾದದಲ್ಲಿ ಅಂತಹ ಸಮರ್ಥನೆಗಳ ಬಗ್ಗೆ ಕನಿಷ್ಠ ಮೂರು ದಾಖಲೆಗಳು ದೊರೆತಿವೆ ಎಂದು ಈ ಮೂವರೂ ನಾಯಕರು ವಕೀಲ ಸುನೀಲ್ ಅವರ ಮೂಲಕ ಸಲ್ಲಿಸಲಾದ ಉತ್ತರದಲ್ಲಿ ತಿಳಿಸಿದ್ದಾರೆ.
ತಾವು ಎತ್ತಿರುವ ಪ್ರಶ್ನೆಗಳಿಂದ ಸ್ಮೃತಿ ಅವರು ನುಣುಚಿಕೊಳ್ಳಲು ಅಥವಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ವೈಯಕ್ತಿಕ ವ್ಯವಹಾರಗಳ ವಿಶ್ವಾಸಾರ್ಹತೆ ಬಗ್ಗೆ ಅವರು ಖುಲ್ಲಂಖುಲ್ಲಾ ವಿನಾಯಿತಿ ಪಡೆಯಲಾಗದು ಎಂದು ಅವರು ಹೇಳಿದ್ದಾರೆ.
ಗೋವಾ ಬಾರ್‌ಗೆ ಸಂಬಂಧಿಸಿದಂತೆ ಸ್ಮೃತಿ ಮತ್ತವರ ಮಗಳ ವಿರುದ್ಧ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಈ ಸಂಬಂಧ ಸ್ಮೃತಿ ಅವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಮೂವರು ವಿರೋಧ ಪಕ್ಷದ ನಾಯಕರು ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ್ದಾರೆ.
ಬಾರ್ ಮತ್ತು ರೆಸ್ಟರಂಟ್ ವಿವಾದಕ್ಕೆ ಸಂಬಂಧಿಸಿದಂತೆ ಸ್ಮೃತಿ ಮತ್ತು ಅವರ ಪುತ್ರಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಮಾನಹಾನಿಕರ ಪೋಸ್ಟ್‌ಗಳನ್ನು ತೆಗೆಯುವಂತೆ ತಮಗೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ʼದಮನಕಾರಿ ಮತ್ತು ಅತಿರೇಕದ ತಪ್ಪು ನಿರೂಪಣೆʼಗಳನ್ನು ಆಧರಿಸಿದೆ ಎಂದು ಕೂಡ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಲೋಕಸಭೆಯ ಅಫಿಡವಿಟ್ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಅವರು ಸಲ್ಲಿಸಿದ ದಾಖಲೆಗಳನುಸಾರ ತಾವು ಸ್ಮೃತಿ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು ಸಮರ್ಥನೀಯ ಆಧಾರವಿದೆ ಎಂಬುದು ಸ್ಪಷ್ಟ ಎಂದು ಅವರು ವಿವರಿಸಿದ್ದಾರೆ.
ವ್ಯಕ್ತಿಗಳ ಹುದ್ದೆ ಲೆಕ್ಕಿಸದೆ ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಪ್ರಶ್ನಿಸಲು ತಾವು ಅರ್ಹರು ಮಾತ್ರರಲ್ಲ ಕರ್ತವ್ಯಬದ್ಧರೂ ಕೂಡ ಎಂದು ಖೇರಾ ಮತ್ತಿತರರು ವಾದಿಸಿದ್ದಾರೆ.
ಸ್ಮೃತಿ ಇರಾನಿ ಮಾಡಿದ ಘೋಷಣೆಗಳು ಮತ್ತು ಅನುಮೋದನೆಗಳಿಂದಾಗಿ ತಮ್ಮ ಪ್ರಶ್ನೆಗಳು ಸಹಜವಾಗಿ ಉದ್ಭವಿಸಿದ್ದು ತಾವು ಬಳಸಿದ ಭಾಷೆ ನ್ಯಾಯಯುತ ಹೇಳಿಕೆಯ ವಲಯದಲ್ಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.