
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಅವಧಿ ಮೀರಿದರೂ ತಮ್ಮ ಅಧಿಕೃತ ನಿವಾಸ ತೊರೆಯದೆ ಇದ್ದುದರ ಹಿಂದೆ ಏನೋ ದುರುದ್ದೇಶ ಇದೆ ಎಂದು ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ಶುಕ್ರವಾರ ಪರೋಕ್ಷವಾಗಿ ಆರೋಪಿಸಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದ ಸಿಂಗ್, ತಮ್ಮ ವಿಕಲಚೇತನ ದತ್ತು ಮಕ್ಕಳ ವಿಶೇಷ ಅಗತ್ಯತೆಗಳಿಗಾಗಿ ಸ್ಥಳಾಂತರ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಸಿಜೆಐ ಒಬ್ಬರು ತಾವು ನಿವೃತ್ತರಾದ ಎಂಟು ತಿಂಗಳ ಬಳಿಕವೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ನಿವಾಸದಲ್ಲಿ ವಾಸವಿದ್ದು ನಂತರ ಬೇರೆ ಸರ್ಕಾರಿ ವಸತಿ ಸಮುಚ್ಛಯಕ್ಕೆ ಸ್ಥಳಾಂತರಗೊಂಡರು. ಚಂದ್ರಚೂಡ್ ಅವರ ಅಧಿಕಾರಾವಧಿಯಲ್ಲಿ ಸರ್ಕಾರದೊಂದಿಗೆ ಕೆಲ ಒಪ್ಪಂದಗಳು ನಡೆದಿದ್ದವು. ಸರ್ಕಾರ ಅವರಿಗೆ ಏನನ್ನಾದರೂ ನೀಡುತ್ತದೆ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ವಿಕಾಸ್ ಸಿಂಗ್ ಹೇಳಿದರು.
ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿಯೊಬ್ಬರು ಅವಧಿ ಮೀರಿ ಅಧಿಕಾರದಲ್ಲಿರಲು ಬಯಸಿದ ಉದಾಹರಣೆ ಕಂಡಿದ್ದೇವೆ. ಮುಖ್ಯ ನ್ಯಾಯಮೂರ್ತಿಗಳು ತಾವು ನಿವೃತ್ತರಾದ ಆರು ತಿಂಗಳ ಒಳಗೆ ತಮ್ಮ ಅಧಿಕೃತ ನಿವಾಸ ಖಾಲಿ ಮಾಡಬೇಕು. ಅವರು ಈಗಾಗಲೇ ಎಂಟು ತಿಂಗಳು ಆ ಮನೆಯಲ್ಲಿದ್ದರು. ಮನೆ ಸ್ಥಳಾಂತರ ವಿಳಂಬಕ್ಕೆ ತಮ್ಮ ವಿಕಲಚೇತನ ಮಕ್ಕಳನ್ನು ಆಧಾರವಾಗಿ ಬಳಸುತ್ತಿರುವುದು ಕಂಡು ಆಶ್ಚರ್ಯವಾಯಿತು. ಆದರೆ ಖಾಸಗಿ ಮನೆ ಹುಡುಕುತಿರುವುದಾಗಿ ಹೇಳುತ್ತಿದ್ದ ಅವರು ಕಡೆಗೆ ಎಂಟು ತಿಂಗಳು ಬಳಿಕ ಸ್ಥಳಾಂತರಗೊಂಡಿದ್ದು ಸರ್ಕಾರಿ ನಿವಾಸಕ್ಕೆ. ತಾವು ಅಧಿಕಾರದಲ್ಲಿದ್ದಾಗ ಅವರಿಗೆ ಸರ್ಕಾರದ ಏನನ್ನಾದರೂ ಒದಗಿಸಲು ಕೆಲ ಒಪ್ಪಂದವಾಗಿತ್ತು. ಹಾಗಾಗಿಯೇ ಅವರು ಖಾಸಗಿ ಮನೆಗೆ ತೆರಳದೆ ಸರ್ಕಾರಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದಾರೆ. ಅವರು ಸರ್ಕಾರಿ ನಿವಾಸದಲ್ಲಿ ವಾಸಿಸಲು ಅರ್ಹರಲ್ಲ ಎಂದು ಸಿಂಗ್ ವಿವರಿಸಿದ್ದಾರೆ.
ತಮ್ಮ ವಿಕಲಚೇತನ ಮಕ್ಕಳ ಬಗ್ಗೆ ಅರಿವಿದ್ದ ನ್ಯಾ. ಚಂದ್ರಚೂಡ್ ಈ ಬಗ್ಗೆ ಮೊದಲೇ ಯೋಜನೆ ರೂಪಿಸಿಕೊಳ್ಳಬಹುದಿತ್ತು. ಆದರೆ ಸರ್ಕಾರಿ ಬಂಗಲೆ ದೊರೆಯುವುದು ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಅಧಿಕೃತ ನಿವಾಸ ತೊರೆಯಲು ಅವರಿಗೆ ಇಷ್ಟವಿಲ್ಲದಿದ್ದರೆ ಜೊತೆಗೆ ಸರ್ಕಾರಿ ಬಂಗಲೆಯಲ್ಲಿ ಉಳಿಯಲು ಅವರಿಗೆ ಅರ್ಹತೆ ಇಲ್ಲದಿದ್ದರೆ ಆಗ ಖಂಡಿತವಾಗಿಯೂ ಅದರ ಹಿಂದೆ ಏನೋ ದುರದ್ದೇಶ ಇದೆ ಎಂದರ್ಥ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿಗೆ ಎಸ್‌ಸಿಬಿಎ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಂಗ್ ಮಾತನಾಡಿದರು. ವೇದಿಕೆಯಲ್ಲಿ ಸುಪ್ರೀಂ ಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಉಪಸ್ಥಿತರಿದ್ದರು. ಇದಕ್ಕೂ ಒಂದು ದಿನ ಮೊದಲು ಅಂದರೆ ಗುರುವಾರ ಸಿಜೆಐ ಗವಾಯಿ ಅವರು ತಾವು ನಿಗದಿತ ಗಡುವಿನೊಳಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ನಿವಾಸ ತೊರೆಯುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.