ಸೌಜನ್ಯ ಕೊಲೆ: ಯೂಟ್ಯೂಬರ್‌ ಸಮೀರ್‌ ಪ್ರಕರಣವನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಿದ ಹೈಕೋರ್ಟ್‌

“ವ್ಯಾಪ್ತಿಯ ವಿಚಾರ ಇರುವುದರಿಂದ ಈ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ. ಹಲವು ಪ್ರಕರಣಗಳನ್ನು ಹಾಗೆ ವರ್ಗಾಯಿಸಲಾಗುತ್ತದೆ. ಹೀಗಾಗಿ, ಅರ್ಜಿದಾರರು ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ” ಎಂದ ನ್ಯಾಯಾಲಯ.
Sameer M D and Karnataka HC
Sameer M D and Karnataka HC
Published on

ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಬಿತ್ತರಿಸಿದ್ದ ಯೂಟ್ಯೂಬರ್ ಎಂ ಡಿ ಸಮೀರ್ ವಿರುದ್ಧ ಬಳ್ಳಾರಿಯ ಕೌಲ್‌ ಬಜಾರ್ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪೀಠವು ಧಾರವಾಡಕ್ಕೆ ವರ್ಗಾಯಿಸಿ ಮಂಗಳವಾರ ಆದೇಶಿಸಿದೆ.

ಬೆಂಗಳೂರಿನ ಸಮೀರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Mohammad Nawaz
Justice Mohammad Nawaz

ಅರ್ಜಿದಾರ ಸಮೀರ್‌ ಪರ ವಕೀಲರು “ಬಳ್ಳಾರಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಎಫ್‌ಐಆರ್‌ಗೆ ತಡೆ ನೀಡಿ ಮಧ್ಯಂತರ ರಕ್ಷಣೆ ಒದಗಿಸಿರುವುದನ್ನು ಮುಂದುವರಿಸಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ವಕೀಲರು “ಬೇರೆ ಪೀಠಕ್ಕೆ ಅರ್ಜಿ ವರ್ಗಾವಣೆ ಮಾಡಲಾಗದು. ಧಾರವಾಡ ಪೀಠದಲ್ಲಿ ಹೊಸದಾಗಿ ಅರ್ಜಿದಾರರು ಅರ್ಜಿ ಸಲ್ಲಿಸಬೇಕು. ಮಧ್ಯಂತರ ಪರಿಹಾರ ಮುಂದುವರಿಸಬಾರದು” ಎಂದು ಕೋರಿದರು.

ಆಗ ಪೀಠವು “ಹೈಕೋರ್ಟ್‌ ಎಫ್‌ಐಆರ್‌ಗೆ ತಡೆ ನೀಡಿದೆ. ಸರ್ಕಾರವು ಮಧ್ಯಂತರ ಆದೇಶ ತೆರವಿಗೆ ಅರ್ಜಿ ಸಲ್ಲಿಸಿದೆ. ವ್ಯಾಪ್ತಿಯ ವಿಚಾರ ಇರುವುದರಿಂದ ಈ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ. ಹಲವು ಪ್ರಕರಣಗಳನ್ನು ಹಾಗೆ ವರ್ಗಾಯಿಸಲಾಗುತ್ತದೆ. ಹೀಗಾಗಿ, ಅರ್ಜಿದಾರರು ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ” ಎಂದು ಹೇಳಿ, ಸಮೀರ್‌ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಿ, ವಿಚಾರಣೆ ಮುಂದೂಡಿತು.

Also Read
ಸೌಜನ್ಯ ಕೊಲೆ ಪ್ರಕರಣ: ಯೂಟ್ಯೂಬರ್‌ ಸಮೀರ್‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

ಪ್ರಕರಣದ ಹಿನ್ನೆಲೆ: ಯೂಟ್ಯೂಬರ್‌ ಸಮೀರ್‌ 'ಊರಿಗೆ ದೊಡ್ಡವರೇ ಕೊಲೆ ಮಾಡಿದವರಾ?ʼ ಎಂಬ ತಲೆಬರಹದ ವಿಡಿಯೋವನ್ನು 'ದೂತ: ಸಮೀರ್‌ ಎಂ ಡಿ (Dhootha : Sameer MD)' ಎಂಬ ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಸದರಿ ವಿಡಿಯೊವನ್ನು ಕೋಟ್ಯಂತರ ಜನರು ವೀಕ್ಷಣೆ ಮಾಡಿದ್ದರು. ಇದನ್ನು ಆಧರಿಸಿ, ಬಳ್ಳಾರಿ ಪೊಲೀಸರು ಸ್ವಯಂಪ್ರೇರಿತವಾಗಿ ಸಮೀರ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಕ್ಕೂ ಮುನ್ನ, ಸಮೀರ್‌ಗೆ ಪೊಲೀಸ್‌ ನೋಟಿಸ್‌ ನೀಡಲಾಗಿತ್ತು. ಇದನ್ನೂ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ವೇಳೆ ತನಿಖಾಧಿಕಾರಿಯ ನಡೆಗೆ ಹೈಕೋರ್ಟ್‌ ಕಿಡಿಕಾರಿತ್ತು.

ಆನಂತರ 'ಊರಿಗೆ ದೊಡ್ಡವರೇ ಕೊಲೆ ಮಾಡಿದವರಾ?ʼ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ನಿರ್ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Kannada Bar & Bench
kannada.barandbench.com