ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ಸಿಬಿಐ ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಅನ್ನು ರದ್ದುಗೊಳಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಏಪ್ರಿಲ್ 7ರಂದು ನೀಡಿದ್ದ ಆದೇಶವನ್ನು ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಎತ್ತಿಹಿಡಿದಿದೆ.
ಆದರೆ ಸಿಬಿಐ ನಿರ್ದೇಶಕರು ಲಿಖಿತವಾಗಿ ಆಕಾರ್ ಅವರ ಕ್ಷಮೆ ಕೋರಬೇಕು ಎಂಬ ಮ್ಯಾಜಿಸ್ಟ್ರೇಟ್ ಅವರ ನಿರ್ದೇಶನವನ್ನು ಸಿಬಿಐ ವಿಶೇಷ ನ್ಯಾಯಾಧೀಶ ಸಂತೋಷ್ ಸ್ನೇಹಿ ಮಾನ್ ತಳ್ಳಿಹಾಕಿದರು.
ಆಕಾರ್ ಅವರು ಕರೆದಾಗಲೆಲ್ಲಾ ತನಿಖೆಗೆ ಹಾಜರಾಗಿದ್ದು ತನಿಖೆಗೆ ಯಾವುದೇ ರೀತಿ ಅಡ್ಡಿ ಉಂಟು ಮಾಡಿಲ್ಲ ಅಲ್ಲದೇ ಸಾಕ್ಷ್ಯನಾಶ ಮಾಡಲು ಯತ್ನಿಸಿಲ್ಲ ಹೀಗಾಗಿ ಅವರ ವಿರುದ್ಧ ಎಲ್‌ಒಸಿ ಹೊರಡಿಸಿದ್ದು ಕಾನೂನಿನ ಪ್ರಕಾರ ದೋಷಪೂರಿತ. ಅಲ್ಲದೆ ಆಕಾರ್ ಅವರ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ವಿಚಾರಣಾ ನ್ಯಾಯಾಲಯ ಆರೋಪಪಟ್ಟಿಯನ್ನು ಪರಿಗಣಿಸುವ ಹಂತದಲ್ಲಿದೆ ಎಂದು ನ್ಯಾಯಾಲಯ ಗಮನಿಸಿದೆ.
ಹೀಗಾಗಿ "ಒಮ್ಮೆ ಪ್ರಕರಣ ನ್ಯಾಯಾಲಯದಲ್ಲಿದ್ದಾಗ, ಬಲವಂತದ ಕ್ರಮಗಳ ಹೊರತಾಗಿಯೂ ಪ್ರತಿವಾದಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಆಗ ಮಾತ್ರ ಎಲ್ಒಸಿ ಹೊರಡಿಸುವ ಸಂದರ್ಭ ಉದ್ಭವಿಸುತ್ತದೆ" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಆಕಾರ್ ಅವರು ಪ್ರಭಾವಿ ವ್ಯಕ್ತಿಯಾಗಿದ್ದು ದೇಶದ ಹೊರಗೆ ಉತ್ತಮ ಸಂಪರ್ಕ ಹೊಂದಿರುವುದರಿಂದ ಪ್ರತಿವಾದಿ ಆರೋಪಿ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ದೇಶ ತೊರೆಯಬಹುದು ಎಂಬ ಕಾರಣಕ್ಕೆ ಈ ಪ್ರಕರಣದಲ್ಲಿ ಎಲ್‌ಒಸಿಯನ್ನು ತನಿಖೆ ಪೂರ್ಣಗೊಳಿಸಿದ ನಂತರ ನೀಡಲಾಗಿದೆ. ಆದರೆ ಕಾನೂನಿನ ಪ್ರಕಾರ ಎಲ್‌ಒಸಿ ನೀಡಲು ಅಗತ್ಯವಾದ ಕಾರಣಗಳು ಮತ್ತು ಸಂದರ್ಭದೊಳಗೆ ಸಿಬಿಐನ ವಾದ ಬರುವುದಿಲ್ಲ ಮತ್ತು ಇದಕ್ಕೆ ಕಾನೂನಿನ ಯಾವುದೇ ಬಲ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಎಲ್‌ಒಸಿ ಹೊರಡಿಸಲು ಕಾರಣವಾಗುವಂತಹ ಸನ್ನಿವೇಶ ಇದೆಯೇ ಎನ್ನುವುದನ್ನು ನಿರ್ಣಯಿಸುವ ತನಿಖಾಧಿಕಾರಿಯ ವ್ಯಕ್ತಿನಿಷ್ಠ ಒಪ್ಪಿಗೆಯು ಕಾನೂನಿನಲ್ಲಿ ನಿಗದಿಪಡಿಸಿದ ವಸ್ತುನಿಷ್ಠ ಮಾನದಂಡಗಳಿಗೆ ಹೊಂದಾಣಿಕೆಯಾಗಬೇಕು ಎಂದು ನ್ಯಾಯಾಲಯ ಹೇಳಿದೆ.
ಸಿಬಿಐ ನಿರ್ದೇಶಕರು ಲಿಖಿತವಾಗಿ ಆಕಾರ್ ಅವರ ಕ್ಷಮೆ ಕೋರಬೇಕು ಎಂಬ ಮ್ಯಾಜಿಸ್ಟ್ರೇಟ್ ಅವರ ನಿರ್ದೇಶನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ “ಕಾನೂನನ್ನು ತಪ್ಪಾಗಿ ಅರ್ಥೈಸಿ ವ್ಯಾಖ್ಯಾನಿಸಿದ ಪರಿಣಾಮ ಎಲ್‌ಒಸಿ ಜಾರಿಯಾಗಿದೆಯೇ ವಿನಾ ದುರುದ್ದೇಶ ಅಥವಾ ಕೆಟ್ಟ ಇಚ್ಛೆಯಿಂದಲ್ಲ” ಎಂದು ಹೇಳಿದೆ.
“ಆರೋಪಿಗಳು ಪರಿಹಾರ ಪಡೆಯಲು ಅರ್ಹರೇ ಎಂಬುದು ಸಂಬಂಧಪಟ್ಟ ನ್ಯಾಯವ್ಯಾಪ್ತಿ ಹೊ೦ದಿರುವ ನ್ಯಾಯಾಲಯದ ಪ್ರತ್ಯೇಕ ಸ್ವತಂತ್ರ ವಿಚಾರಣೆಯ ವಿಷಯವಾಗಿದೆ” ಎಂದು ಅದು ಸ್ಪಷ್ಟಪಡಿಸಿತು.