ವಾಲ್ಮೀಕಿ ನಿಗಮ ಹಗರಣ: ಜಪ್ತಿ ಮಾಡಿರುವ ₹6.11 ಕೋಟಿ ಹಣವನ್ನು ನಿಗಮದ ಖಾತೆಗೆ ವರ್ಗಾಯಿಸಲು ವಿಶೇಷ ನ್ಯಾಯಾಲಯದ ಆದೇಶ

ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡವು ಇದುವರೆಗೆ ₹79 ರಿಂದ ₹80 ಕೋಟಿ ಜಪ್ತಿ ಮಾಡಿದೆ. ಉಳಿದ ಹಣವನ್ನು ಜಫ್ತಿ ಮಾಡಬೇಕಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
Karnataka Maharshi Valmiki Scheduled Tribes Development Corporation Limited
Karnataka Maharshi Valmiki Scheduled Tribes Development Corporation Limited
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಹಣ ದುರ್ಬಳಕೆ ಪ್ರಕರಣದ ತನಿಖೆ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ₹6.11 ಕೋಟಿ ಹಣವನ್ನು ನಿಗಮನಕ್ಕೆ ಬಿಡುಗಡೆ ಮಾಡಲು ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಈಚೆಗೆ ಆದೇಶಿಸಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರತ್ಯೇಕವಾಗಿ ಸಲ್ಲಿಸಿದ್ದ ಏಳು ಅರ್ಜಿಗಳನ್ನು ವಿಶೇಷ ನ್ಯಾಯಾಧೀಶರಾದ ಕೆ ಎಂ ರಾಧಾಕೃಷ್ಣ ಪುರಸ್ಕರಿಸಿದ್ದಾರೆ.

Judge K M Radhakrishna
Judge K M Radhakrishna

ತನಿಖಾಧಿಕಾರಿಯು ನಿಗಮದ ಖಾತೆಯನ್ನು ಖಾತರಿಪಡಿಸಿಕೊಂಡು ₹6,11,72,400 ರೂಪಾಯಿಗಳನ್ನು ನಿಗಮಕ್ಕೆ ವರ್ಗಾಯಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜಕಾರಣಿ, ಬ್ಯಾಂಕ್‌ ಅಧಿಕಾರಿಗಳು ಸೇರಿ 15 ಆರೋಪಿಗಳು ದಾಖಲೆಗಳನ್ನು ತಿರುಚಿ, ನಿಗಮದ ಖಾತೆಯನ್ನು ಎಂ ಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ವರ್ಗಾಯಿಸಿದ್ದರು. ಆನಂತರ ನಿಗಮದ ₹89.62 ಕೋಟಿಯನ್ನು ಅಲ್ಲಿಗೆ ವರ್ಗಾಯಿಸಿ, ಬಳಿಕ ಹಣವನ್ನು ಹೈದರಾಬಾದ್‌ ಮೂಲದ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ 18 ಖಾತೆಗಳಿಗೆ ವರ್ಗಾಯಿಸಲಾಗಿತ್ತು.ಅಲ್ಲಿಂದ 300-500 ವಿವಿಧ ಉದ್ಯಮಿಗಳು, ವ್ಯಾಪಾರಿಗಳ ಖಾತೆಗೆ ಹಣ ವರ್ಗಾವಣೆ ಮಾಡಿ, ನಗದು ಮಾಡಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡವು ಇದುವರೆಗೆ ₹79 ರಿಂದ ₹80 ಕೋಟಿ ಜಫ್ತಿ ಮಾಡಿದೆ. ಉಳಿದ ಹಣವನ್ನು ಜಫ್ತಿ ಮಾಡಬೇಕಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ತುಳಿತಕ್ಕೆ ಒಳಗಾದ ಪರಿಶಿಷ್ಟ ಪಂಗಡಗಳಲ್ಲಿ ಬರುವ ಸಮುದಾಯಗಳ ಅಭಿವೃದ್ಧಿಗೆ ನಿಗಮ ಶ್ರಮಿಸುತ್ತಿದ್ದು, ಜಫ್ತಿ ಮಾಡಿರುವ ಹಣವನ್ನು ತನಿಖಾ ಸಂಸ್ಥೆ ಇಟ್ಟುಕೊಳ್ಳುವುದರಿಂದ ನಿಗಮದ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಅಡ್ಡಿಯಾಗಲಿದ್ದು, ಜಫ್ತಿ ಮಾಡಿರುವ ಹಣವನ್ನು ನಿಗಮಕ್ಕೆ ಬಿಡುಡೆ ಮಾಡುವುದರಿಂದ ಅಭಿವೃದ್ಧಿ ಕಾರ್ಯ ನಡೆಸಲು ಅನುಕೂಲವಾಗಲಿದೆ. ಈ ಸಂಬಂಧ ನ್ಯಾಯಾಲಯ ಆದೇಶ ಮಾಡಬೇಕು ಎಂದು ಕೋರಲಾಗಿತ್ತು.

28.10.2024ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಎಸ್‌ಐಟಿ ಜಫ್ತಿ ಮಾಡಿರುವ ನಿಗಮದ ಹಣವನ್ನು ಬಿಡುಗಡೆ ಮಾಡಲು ಕೋರುವಂತೆ ನಿಗಮದ ವ್ಯವಸ್ಥಾಪಕರಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಇದರ ಅನ್ವಯ ಪರಿಶಿಷ್ಟ ಪಂಗಡ ಇಲಾಖೆಯ ಉಪ ಕಾರ್ಯದರ್ಶಿಯು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.

Also Read
ವಾಲ್ಮೀಕಿ ನಿಗಮದ ಹಗರಣ: ₹50 ಕೋಟಿ ಮೌಲ್ಯದ ನಗದು, ಬಂಗಾರ, ಕಾರು ಜಪ್ತಿ; 3,072 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ 12 ಮಂದಿಯನ್ನು ಎಸ್‌ಐಟಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಏಳು ಮಂದಿಗೆ ಈಗಾಗಲೇ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಈಗಾಗಲೇ ಎಸ್‌ಐಟಿಯು ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇನ್ನು, ಇದೇ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸಿದೆ. ಈ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಈ ಪ್ರಕರಣದಲ್ಲಿ ಅವರಿಗೆ ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Attachment
PDF
KMVSTDCL Vs High Grounds PS
Preview
Kannada Bar & Bench
kannada.barandbench.com