'ನಿಮ್ಮ ಕಾಲಿನ ಮೇಲೆ ನಿಲ್ಲಿ, ಶರದ್ ಪವಾರ್ ಹೆಸರೇಕೆ ಬೇಕು?' ಅಜಿತ್ ಬಣದ ಕಿವಿ ಹಿಂಡಿದ ಸುಪ್ರೀಂ

ಯಾವುದೇ ಹಕ್ಕುತ್ಯಾಗ ಇಲ್ಲದೆ ಗಡಿಯಾರ ಚಿಹ್ನೆ ಬಳಸಿಕೊಂಡು ಅಜಿತ್ ಪವಾರ್ ಮತದಾರರ ಮನಸ್ಸಿನಲ್ಲಿ 'ದೊಡ್ಡ ಪ್ರಮಾಣದ ಗೊಂದಲ' ಮೂಡಿಸಿದ್ದಾರೆ ಎಂದು ಶರದ್ ಪವಾರ್ ಬಣ ದೂರಿತ್ತು.
Sharad Pawar, Ajit Pawar with NCP clock symbol and SC
Sharad Pawar, Ajit Pawar with NCP clock symbol and SC Sharad Pawar, Ajit Pawar (FB)
Published on

ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರ ಗರಿಗೆದರಿರುವಂತೆಯೇ ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿ ಬಣ ಆನ್‌ಲೈನ್‌ ಪ್ರಚಾರದಲ್ಲಿ ಎನ್‌ಸಿಪಿ ಎಸ್‌ಪಿ ಬಣದ ನಾಯಕ ಶರದ್‌ ಪವಾರ್‌ ಅವರ ಹೆಸರನ್ನೇಕೆ ಪದೇ ಪದೇ ಬಳಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ [ಶರದ್ ಪವಾರ್ ಮತ್ತು ಅಜಿತ್ ಅನಂತರಾವ್ ಪವಾರ್ ಇನ್ನಿತರರ ನಡುವಣ ಪ್ರಕರಣ].

ಎರಡೂ ಬಣಗಳು ತಮ್ಮ ರಣಕಣದ ಬಗ್ಗೆ ಗಮನಹರಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಇದೇ ವೇಳೆ ಕಿವಿಮಾತು ಹೇಳಿತು.

Also Read
ಗಡಿಯಾರ ಚಿಹ್ನೆ ಕುರಿತು ಹೊಸದಾಗಿ ಹಕ್ಕುತ್ಯಾಗ ಪ್ರಕಟಣೆ: ಸುಪ್ರೀಂ ಕೋರ್ಟ್‌ಗೆ ಅಜಿತ್ ಪವಾರ್ ಬಣದಿಂದ ವಾಗ್ದಾನ

ಎಂತಹ ಗೊಂದಲಗಳಿದ್ದರೂ ಅವುಗಳನ್ನು ನಿವಾರಿಸಿಕೊಳ್ಳುವಷ್ಟು ಮತದಾರರು ಬುದ್ಧಿವಂತರಿದ್ದಾರೆ. ಚುನಾವಣಾ ಹೋರಾಟದಲ್ಲಿ ಅಜಿತ್ ಪವಾರ್ ನೇತೃತ್ವದ ಬಣ ಶರದ್ ಪವಾರ್ ಅವರ ಹೆಸರನ್ನು ಅವಲಂಬಿಸಬಾರದು. ಶರದ್ ಪವಾರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ನೀವು ನಿಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಯತ್ನಿಸಿ ಎಂದು ನ್ಯಾಯಾಲಯ ಹೇಳಿತು.

ಯಾವುದೇ ಹಕ್ಕುತ್ಯಾಗ ಇಲ್ಲದೆ ಗಡಿಯಾರ ಚಿಹ್ನೆ ಬಳಸಿಕೊಂಡು ಅಜಿತ್ ಪವಾರ್ ಮತದಾರರ ಮನಸ್ಸಿನಲ್ಲಿ 'ದೊಡ್ಡ ಪ್ರಮಾಣದ ಗೊಂದಲ ಮೂಡಿಸಿದ್ದಾರೆ ಎಂದು ಶರದ್ ಪವಾರ್ ಬಣ ಈ ಹಿಂದೆ ಅರ್ಜಿ ಸಲ್ಲಿಸಿತ್ತು.

ಶರದ್‌ ಪವಾರ್‌ ಅವರ ವರ್ಚಸ್ಸನ್ನು ಅಜಿತ್‌ ಪವಾರ್‌ ಬಣ ಬಳಸಿಕೊಳ್ಳುತ್ತಿದೆ. ಎನ್‌ಸಿಪಿಯ ಗಡಿಯಾರ ಚಿಹ್ನೆ ಇರುವ ಯಾವುದೇ ಚುನಾವಣಾ ಜಾಹೀರಾತುಗಳಲ್ಲಿ ಚಿಹ್ನೆ ಹಂಚಿಕೆ ವಿವಾದ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ ಎಂಬುದನ್ನು ಸಾರುವಂತಹ ಹಕ್ಕುತ್ಯಾಗ ಪ್ರದರ್ಶಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಅಜಿತ್ ಪವಾರ್ ಬಣ ಪಾಲಿಸುತ್ತಿಲ್ಲ ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶರದ್‌ ಅವರ ಬಣವನ್ನು ಪ್ತತಿನಿಧಿಸುವ ವಕೀಲ ಪ್ರಾಂಜಲ್ ಅಗರ್ವಾಲ್ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರಿದರು.

Also Read
ಅಜಿತ್‌ ಬಣಕ್ಕೆ ಚುನಾವಣೆ ವೇಳೆ ಶರದ್‌ ಪವಾರ್‌ ಬೇಕು: ಹಿರಿಯ ನಾಯಕನ ಹೆಸರು, ಗಡಿಯಾರ ಚಿಹ್ನೆ ಬಳಸದಂತೆ ಸುಪ್ರೀಂ ಸೂಚನೆ

ಅಜಿತ್ ಪವಾರ್ ಬಣದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್ ಫೇಸ್‌ಬುಕ್‌ನ ಹಳೆಯ ಪುಟಗಳಲ್ಲಷ್ಟೇ ಶರದ್‌ ಅವರ ಹೆಸರನ್ನು ಬಳಸಿಕೊಂಡ ಜಾಹೀರಾತು ಇದೆ ಎಂದರು.

ಆದರೆ ಈ ವಾದವನ್ನು ಒಪ್ಪದ ನ್ಯಾಯಾಲಯ ಶರದ್‌ ಪವಾರ್‌ ಬಣದೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಅಜಿತ್‌ ಬಣ ಸ್ವಂತ ಕಾಲ ಮೇಲೆ ನಿಲ್ಲಲು ಯತ್ನಿಸಬೇಕು ಎಂದಿತು. ಪ್ರಕರಣವನ್ನು ನವೆಂಬರ್ 19 ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com