ಕ್ಲೇಮ್‌ ಕಮಿಷನರ್‌ಗಳಿಗೆ ಮೂಲಸೌಕರ್ಯ ಕಲ್ಪಿಸಿರುವ ಮಾಹಿತಿ ನೀಡದ ರಾಜ್ಯ ಸರ್ಕಾರ: ಹೈಕೋರ್ಟ್‌ ಅಸಮಾಧಾನ

ರಾಜ್ಯ ಸರ್ಕಾರದ ಅಫಿಡವಿಟ್‌ ತಿರಸ್ಕರಿಸಿದ ಪೀಠವು ಏಪ್ರಿಲ್‌ 14ರೊಳಗೆ ಸಮರ್ಪಕ ಅಫಿಡವಿಟ್‌ ಸಲ್ಲಿಸಬೇಕು. ಇದೇ ಕೊನೆಯದಾಗಿ ಅವಕಾಶ ನೀಡಲಾಗುತ್ತಿದೆ ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.
ಕ್ಲೇಮ್‌ ಕಮಿಷನರ್‌ಗಳಿಗೆ ಮೂಲಸೌಕರ್ಯ ಕಲ್ಪಿಸಿರುವ ಮಾಹಿತಿ ನೀಡದ ರಾಜ್ಯ ಸರ್ಕಾರ: ಹೈಕೋರ್ಟ್‌ ಅಸಮಾಧಾನ

Vatal Nagaraj and Karnataka HC

ಮಹದಾಯಿ ನ್ಯಾಯಾಧಿಕರಣದ ತೀರ್ಪು ಖಂಡಿಸಿ ಮತ್ತು ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ನಡೆದ ಪ್ರತ್ಯೇಕ ಬಂದ್‌ಗಳಿಂದ ರಾಜ್ಯದಲ್ಲಿ ಉಂಟಾಗಿರುವ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಪ್ರಮಾಣ ಅಂದಾಜಿಸಲು ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಕ್ಲೇಮ್‌ ಕಮಿಷನರ್ (ಪರಿಹಾರ ಆಯುಕ್ತ) ಆಗಿ ನೇಮಿಸಿರುವ ಬಗ್ಗೆ ಮತ್ತು ಅವರಿಗೆ ಮೂಲ ಸೌಕರ್ಯ ಕಲ್ಪಿಸಿರುವ ಬಗ್ಗೆ ಸೂಕ್ತ ಮಾಹಿತಿ ನೀಡದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಈಚೆಗೆ ಬೇಸರ ವ್ಯಕ್ತಪಡಿಸಿದೆ.

ಮಹದಾಯಿ ನ್ಯಾಯಾಧಿಕರಣದ ತೀರ್ಪು ಖಂಡಿಸಿ 2018ರಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ ವಿರೋಧಿಸಿ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಜತೆಗೆ, ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದನ್ನು ಖಂಡಿಸಿ 2019ರಲ್ಲಿ ರಾಮನಗರ, ಕನಕಪುರ ತಾಲೂಕಿನಲ್ಲಿ ನಡೆದ ಬಂದ್ ವಿರೋಧಿಸಿ ರವಿಕುಮಾರ್ ಕಂಚನಹಳ್ಳಿ ಹೈಕೋರ್ಟ್‌ಗೆ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಉಂಟಾಗಿರುವ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಪ್ರಮಾಣ ಅಂದಾಜಿಸಲು ನೇಮಕ ಮಾಡಿರುವ ನ್ಯಾಯಮೂರ್ತಿ ಕೆಂಪಣ್ಣ ಅವರ ನೇತೃತ್ವದ ಕ್ಲೇಮ್‌ ಕಮೀಷನ್‌ಗೆ ಸಂಬಂಧಿಸಿದ ಮಾಹಿತಿ ಒಳಗೊಂಡ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿದ್ದರು.

Also Read
ಬಂದ್‌ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ: ಕ್ಲೇಮ್‌ ಕಮಿಷನರ್‌ ನೇಮಕದ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಇದರಿಂದ ಬೇಸರ ವ್ಯಕ್ತಪಡಿಸಿದ ಪೀಠವು ಮಹದಾಯಿ ನ್ಯಾಯಾಧಿಕರಣದ ತೀರ್ಪು ಪ್ರಕರಣದಲ್ಲಿನ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಹ್ಮದ್ ಗೌಸ್ ಎಂ. ಪಟೇಲ್ ಅವರನ್ನು ಕ್ಲೇಮ್‌ ಕಮೀಷನರ್ ಆಗಿ ನೇಮಕ ಮಾಡಲು ಹೈಕೋರ್ಟ್ ಆದೇಶಿಸಿದೆ. ಇನ್ನು ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಚನ್ನಪಟ್ಟಣ, ಕನಕಪುರ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರತಿಭಟನೆಗಳಲ್ಲಿ ಉಂಟಾದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಲದ ನ್ಯಾಯಾಧೀಶ ಸಿ ಆರ್ ಬೆನಕನಹಳ್ಳಿ ಅವರನ್ನು ಕ್ಲೇಮ್‌ ಕಮೀಷನರ್ ಆಗಿ ನೇಮಿಸಲು ಮತ್ತು ಅವರಿಗೆ ಮೂಲ ಸೌಕರ್ಯವನ್ನು ಕಲ್ಪಿಸಲು 2020ರ ಫೆಬ್ರವರಿ 25ರಂದು ಆದೇಶಿಸಲಾಗಿದೆ. ಈ ಆದೇಶವನ್ನು ಪಾಲಿಸಿದ ಬಗ್ಗೆ ಸರ್ಕಾರ ಈವರೆಗೆ ಮಾಹಿತಿ ನೀಡಿಲ್ಲದಿರುವ ಬಗ್ಗೆ ಪೀಠವು ಬೇಸರ ವ್ಯಕ್ತಪಡಿಸಿತು.

ಅಲ್ಲದೆ, ಸರ್ಕಾರದ ಅಫಿಡವಿಟ್‌ ತಿರಸ್ಕರಿಸಿದ ಪೀಠವು ಏಪ್ರಿಲ್‌ 14ರೊಳಗೆ ಸಮರ್ಪಕ ಅಫಿಡವಿಟ್‌ ಸಲ್ಲಿಸಬೇಕು. ಇದೇ ಕೊನೆಯದಾಗಿ ಅವಕಾಶ ನೀಡಲಾಗುತ್ತಿದೆ ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

Related Stories

No stories found.