
ಗ್ರಾಮೀಣಾಭಿವೃದ್ಧಿ ಇಲಾಖೆಯ ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮದ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದರೆ ಮೂವರು ಐಪಿಎಸ್ ಅಧಿಕಾರಿಗಳನ್ನು ಪರಿಗಣಿಸಬಹುದು ಎಂದು ಅವರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಕಾಯ್ದಿರಿಸಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ, "ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ತರಬೇತಿಯಲ್ಲಿರುವ ನೇಮಕಗೊಂಡಿರುವ ಅಧಿಕಾರಿಗಳಿಗೆ ತಡೆಹಿಡಿದಿರುವ ವೇತನವನ್ನು ನಾಲ್ಕು ವಾರಗಳಲ್ಲಿ ಅರ್ಜಿಯ ಆದೇಶಕ್ಕೆ ಒಳಪಟ್ಟು ಪಾವತಿಸಲಾಗುವುದು. ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರ ನಾಮನಿರ್ದೇಶನಕ್ಕೆ ಹೋಟಾ ಸಮಿತಿಯ ಶಿಫಾರಸ್ಸಿನಂತೆ ಶೋಧನಾ ಸಮಿತಿ ರಚಿಸುವ ಸಂಬಂಧ ರಾಜ್ಯ ಸರ್ಕಾರವು 23.04.2025ರಂದು ಆದೇಶ ಹೊರಡಿಸಿದ್ದು, ತಲಾ ಒಬ್ಬರು ಮಹಿಳೆ ಮತ್ತು ತುಳಿತಕ್ಕೊಳಗಾದ ಸಮುದಾಯ ವ್ಯಕ್ತಿಯನ್ನು ಸದಸ್ಯರನ್ನಾಗಿಸುವ ನ್ಯಾಯಾಲಯದ ಪ್ರಸ್ತಾಪವನ್ನು ಸಂಪುಟ ಸಭೆಯು ಮುಂದೆ ಇಡಲಾಗುವುದು. ಇದನ್ನು ಸಂಪುಟ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ. ಇದು ಶ್ಲಾಘನೀಯ” ಎಂದು ದಾಖಲಿಸಿದೆ.
ಮುಂದುವರೆದು, ಏಪ್ರಿಲ್ 24ರ ವಿಚಾರಣೆಯಲ್ಲಿ ನ್ಯಾಯಾಲಯವು 20.08.2013ರ ಹೋಟಾ ಸಮಿತಿ ಶಿಫಾರಸ್ಸಿನಂತೆ ಕೆಪಿಎಸ್‌ಸಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನಾಮನಿರ್ದೇಶನ ಮಾಡುವುದಕ್ಕೆ ಶೋಧನಾ ಸಮಿತಿ ರಚಿಸಲಾಗುವುದು ಎಂದು ನ್ಯಾಯಾಲಯಕ್ಕೆ ನೀಡಿದ್ದ ವಾಗ್ದಾನದಂತೆ 23.04.2025ರಂದು ಶೋಧನಾ ಸಮಿತಿ ರಚಿಸುವ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಸಲ್ಲಿಸಿರುವುದು ಶ್ಲಾಘನಾರ್ಹ. ಆಯ್ಕೆ ಪ್ರಕ್ರಿಯೆಯಲ್ಲಿ ಸಾಚಾತನ ಮತ್ತು ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೈಗೊಂಡಿರುವ ನಿರ್ಧಾರವು ಶ್ಲಾಘನೀಯ ಎಂದು ಮತ್ತೊಮ್ಮೆ ಹೇಳುತ್ತಿದ್ದೇವೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಕೆಪಿಎಸ್‌ಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಎಸ್ ರಾಜಗೋಪಾಲ್ ಹೇಳಿರುವಂತೆ ಪ್ರಕರಣದ ತನಿಖೆಯನ್ನು ಯಾವುದೇ ತನಿಖಾ ಸಂಸ್ಥೆಗೆ ನೀಡಲು ಕೆಪಿಎಸ್‌ಸಿಯ ಯಾವುದೇ ಆಕ್ಷೇಪವಿಲ್ಲ ಎಂದು ಕೆಪಿಎಸ್‌ಸಿ ಪ್ಯಾನಲ್ ವಕೀಲರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ ಎಂದು ನ್ಯಾಯಾಲಯ ದಾಖಲಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲರಾದ ಲಕ್ಷ್ಮಿನಾರಾಯಣ ಮತ್ತು ಎಂ ಎಸ್ ಭಾಗವತ್ ಅವರು “ಆಯ್ಕೆ ಮತ್ತು ನೇಮಕಾತಿ ಕಾನೂನಾತ್ಮಕ ವಿಚಾರ ಹೊರತುಪಡಿಸಿ, ಅರ್ಜಿದಾರರನ್ನು ನೇಮಕ ಮಾಡಿದ ಮೇಲೆ ಅವರು ಉದ್ಯೋಗದಲ್ಲಿದ್ದಾರೆ. ಅದು ತರಬೇತಿ ಹಂತ ಯಾವುದೇ ಆಗಿರಬಹುದು. ಆ ನಿರ್ದಿಷ್ಟ ಹುದ್ದೆಗೆ ನಿಗದಿಪಡಿಸಿರುವ ವೇತನವನ್ನು ನಿರಂತರವಾಗಿ ಸಂವಿಧಾನದ 23ನೇ ವಿಧಿಯ ಪ್ರಕಾರ ಪಾವತಿಸಬೇಕು. ಗುಜರಾತ್ ಸರ್ಕಾರ ವರ್ಸಸ್ ಗುಜರಾತ್ ಹೈಕೋರ್ಟ್ ಪ್ರಕರಣದಲ್ಲಿ ಈ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿದೆ” ಎಂದು ವಾದಿಸಿದ್ದರು. ಅಲ್ಲದೇ, ತನಿಖೆಯ ಹೊಣೆಯನ್ನು ಸಿಬಿಐಗೆ ನೀಡಬೇಕೆ ವಿನಾ ರಾಜ್ಯ ಸರ್ಕಾರದ ಯಾವುದೇ ಸಂಸ್ಥೆಗೆ ನೀಡಬಾರದು. ಇಂಥ ವಿಚಾರಗಳಲ್ಲಿ ತಜ್ಞತೆ ಇರುವವರನ್ನು ತನಿಖಾ ಸಂಸ್ಥೆ ಒಳಗೊಳ್ಳಬೇಕು ಎಂದು ವಾದಿಸಿದ್ದರು.
ಕೆಪಿಎಸ್‌ಸಿ ಪ್ಯಾನಲ್ ವಕೀಲರು 260 ಪುಟಗಳ 41 ದಾಖಲೆಗಳನ್ನು ಒಳಗೊಂಡ ಮೆಮೊ ಸಲ್ಲಿಸಿದ್ದು, ಇದರಲ್ಲಿ ಒಂದು ಸೆಟ್ ಫೋಟೊಕಾಪಿ ಮತ್ತು ಇನ್ನೊಂದು ಸೆಟ್ ಮೂಲ ಎಂದು ಹೇಳಿದ್ದಾರೆ. ಇದನ್ನು ನ್ಯಾಯಾಲಯ ಪರಿಶೀಲಿಸಿಲ್ಲ. ಮೆಮೊ ಜೊತೆ ಸಲ್ಲಿಸಿರುವ ಎರಡು ಸೆಟ್ ದಾಖಲೆಗಳನ್ನು ಸುರಕ್ಷಿತವಾಗಿ ಇಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.