ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ದಾಖಲಿಸಿಕೊಂಡ ಹೇಳಿಕೆ ಪೋಕ್ಸೊ ಸೆಕ್ಷನ್‌ 35ರ ಅಡಿ ಸಾಕ್ಷ್ಯವೆನಿಸದು: ಹೈಕೋರ್ಟ್‌

ಪೊಕ್ಸೊ ಕಾಯಿದೆಯ ಸೆಕ್ಷನ್‌ 35ರ ಉಪಸೆಕ್ಷನ್‌ (1)ರ ಪ್ರಕಾರ ವಿಚಾರಣೆ ಆರಂಭವಾಗುವುದಕ್ಕೂ ಮುನ್ನ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಹೇಳಿಕೆ ದಾಖಲು ಮಾಡಿಕೊಳ್ಳುವುದನ್ನು ಸಾಕ್ಷ್ಯ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
Karnataka HC and POCSO
Karnataka HC and POCSO

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 164ರ ಅಡಿ (ತಪ್ಪೊಪ್ಪಿಗೆ ಮತ್ತು ಹೇಳಿಕೆಗಳ ದಾಖಲು) ಅಪ್ರಾಪ್ತ ಸಂತ್ರಸ್ತ ಮಗುವಿನ ಹೇಳಿಕೆ ದಾಖಲು ಮಾಡಿಕೊಳ್ಳುವುದು ಲೈಂಗಿಕ ದೌರ್ಜನ್ಯ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಸೆಕ್ಷನ್‌ 35ರ ಅಡಿ (ಅಪ್ರಾಪ್ತ ಮಗುವಿನ ಸಾಕ್ಷ್ಯ ದಾಖಲು ಸಮಯ ಮತ್ತು ಪ್ರಕರಣದ ವಿಲೇವಾರಿ) ದಾಖಲಿಸುವ ಸಾಕ್ಷ್ಯ ಎಂದು ಪರಿಣಿಸಲಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ (ಎಚ್‌ ಮೊಗವೀರ ವರ್ಸಸ್‌ ಕರ್ನಾಟಕ ರಾಜ್ಯ).

ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ಪೋಕ್ಸೊ ಕಾಯಿದೆಯ ಸೆಕ್ಷನ್‌ 35ರ ಅಡಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ವ್ಯತ್ಯಾಸವನ್ನು ಹೇಳಿತು.

“ನಮ್ಮ ದೃಷ್ಟಿಯಲ್ಲಿ, ವಿಚಾರಣೆ ಆರಂಭವಾಗದಿರುವಾಗ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಹೇಳಿಕೆ ದಾಖಲು ಮಾಡಿಕೊಳ್ಳುವುದು ಪೋಕ್ಸೊ ಕಾಯಿದೆಯ ಸೆಕ್ಷನ್‌ 35ರ ಉಪ ಸೆಕ್ಷನ್‌ (1)ರ ಅಡಿ ಸಾಕ್ಷ್ಯ ಎಂದು ಪರಿಗಣಿಸಲಾಗದು… ಹೀಗಾಗಿ, ವಿಚಾರಣೆಯ ಸಂದರ್ಭದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಅಪ್ರಾಪ್ತ ಸಂತ್ರಸ್ತ ಮಗು ದಾಖಲಿಸುವ ಹೇಳಿಕೆಯನ್ನು ಪೋಕ್ಸೊ ಕಾಯಿದೆಯ ಸೆಕ್ಷನ್‌ 35ರ ಅಡಿ ಸಾಕ್ಷ್ಯ ಎಂದು ಪರಿಗಣಿಸಲಾಗದು,” ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎಂ ಜಿ ಉಮಾ ಅವರಿದ್ದ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ.

“ಈಗಾಗಲೇ ಹೇಳಿರುವಂತೆ ತನಿಖೆಯ ಸಂದರ್ಭದಲ್ಲಿ ಅಥವಾ ವಿಚಾರಣೆ ಆರಂಭವಾಗುವುದಕ್ಕೂ ಮುನ್ನ ಯಾವುದೇ ಸಂದರ್ಭದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಹೇಳಿಕೆ ದಾಖಲಿಸಬಹುದಾಗಿದೆ. ಆದರೆ, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಪೋಕ್ಸೊ ಕಾಯಿದೆಯ ಸೆಕ್ಷನ್‌ 35ರ ಅಡಿ ಸಾಕ್ಷ್ಯ ದಾಖಲಿಸಿಕೊಳ್ಳಲಾಗುತ್ತದೆ. ಎರಡನ್ನೂ ಒಂದೇ ಎಂದು ಸಮೀಕರಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

Also Read
[ಪೋಕ್ಸೊ ಖುಲಾಸೆಗಳು] ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಕಾಯಂಗೊಳಿಸುವ ಶಿಫಾರಸು ಹಿಂಪಡೆದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

ಆರೋಪಿ ಹನುಮಂತ ಮೊಗವೀರ ಪರವಾಗಿ ಪೋಕ್ಸೊ ಕಾಯಿದೆಯ ಸೆಕ್ಷನ್‌ 35ರಲ್ಲಿ ಹೇಳಿರುವಂತೆ ವರ್ಷವಾದರೂ ವಿಶೇಷ ನ್ಯಾಯಾಲಯದಲ್ಲಿ ಪ್ರಕ್ರಿಯೆ ಮುಗಿದಿಲ್ಲವಾದ್ದರಿಂದ ಜಾಮೀನು ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಇದಕ್ಕಾಗಿ ಆತ ವಿನಯ್‌ ವರ್ಸಸ್‌ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶವನ್ನು ಉಲ್ಲೇಖಿಸಿದ್ದ.

ಪ್ರಕರಣದ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿ, ಮನವಿಯನ್ನು ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com