'ಸರ್ಕಾರಗಳಿಗೆ ಉಚಿತ ಕೊಡುಗೆ ನೀಡಲು ಹಣವಿದೆ ಆದರೆ ನ್ಯಾಯಾಧೀಶರಿಗೆ ಪಾವತಿಸಲು ಇಲ್ಲವೇ?' ಸುಪ್ರೀಂ ಕೋರ್ಟ್ ಕಿಡಿ

ನ್ಯಾಯಾಂಗ ಅಧಿಕಾರಿಗಳ ವೇತನ ಮತ್ತು ನಿವೃತ್ತಿ ಸೌಲಭ್ಯ ನಿರ್ಧರಿಸುವಾಗ ಸರ್ಕಾರ ಹಣಕಾಸಿನ ನಿರ್ಬಂಧಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ತಿಳಿಸಿದಾಗ ಪೀಠ ಅಸಮಾಧಾನ ವ್ಯಕ್ತಪಡಿಸಿತು.
Supreme Court
Supreme Court
Published on

ಯಾವುದೇ ಕೆಲಸ ಮಾಡದ ಜನರಿಗೆ ಉಚಿತ ಕೊಡುಗೆ ನೀಡಲು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಹಣ ಇರುತ್ತದೆ. ಆದರೆ ಜಿಲ್ಲಾ ನ್ಯಾಯಾಧೀಶರುಗಳಿಗೆ ಸಂಬಳ ಮತ್ತು ಪಿಂಚಣಿ ನೀಡುವಾಗ ಅವುಗಳಿಗೆ ಹಣಕಾಸು ಮುಗ್ಗಟ್ಟು ಎದುರಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಟೀಕಿಸಿದೆ [ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ನ್ಯಾಯಾಂಗ ಅಧಿಕಾರಿಗಳ ವೇತನ ಮತ್ತು ನಿವೃತ್ತಿ ಸೌಲಭ್ಯ ನಿರ್ಧರಿಸುವಾಗ ಸರ್ಕಾರ ಹಣಕಾಸಿನ ನಿರ್ಬಂಧಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ತಿಳಿಸಿದಾಗ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಎ ಜಿ ಮಸೀಹ್‌ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

Also Read
ಪರಿಹಾರ ನೀಡದಿದ್ದರೆ ಉಚಿತ ಕೊಡುಗೆ, ಜನಪ್ರಿಯ ಯೋಜನೆ ಸ್ಥಗಿತ: ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಖಡಕ್‌ ಎಚ್ಚರಿಕೆ

ಮಹಾರಾಷ್ಟ್ರ ಸರ್ಕಾರದ ಲಾಡ್ಲಿ-ಬೆಹ್ನಾ ಯೋಜನೆ ಮತ್ತು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ  ವಿವಿಧ ರಾಜಕೀಯ ಪಕ್ಷಗಳು ನೀಡಿದ ಇತ್ತೀಚಿನ ಭರವಸೆಗಳನ್ನು ನ್ಯಾಯಾಲಯ ನಿರ್ದಿಷ್ಟವಾಗಿ ಉಲ್ಲೇಖಿಸಿತು. .

ಯಾವುದೇ ಕೆಲಸ ಮಾಡದ ಜನರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರಗಳ ಬಳಿ ಹಣ ಇರುತ್ತದೆ. ನಾವು ಹಣಕಾಸಿನ ಇತಿಮಿತಿಗಳ ಬಗ್ಗೆ ಮಾತನಾಡುವಾಗ ಈ ವಿಚಾರವನ್ನೂ ನೋಡಬೇಕು. ಚುನಾವಣೆ ಹೊಸ್ತಿಲಲ್ಲಿ ಲಾಡ್ಲಿ ಬೆಹ್ನಾ ಮತ್ತಿತರ ಯೋಜೆನಗಳನ್ನು ಘೋಷಿಸುತ್ತೀರಿ. ದೆಹಲಿಯಲ್ಲಿ ನಾವು ಅಧಿಕಾರಕ್ಕೆ ಬಂದರೆ ₹2500 ನೀಡುತ್ತೇವೆ ಎಂದು ಕೆಲವು ಪಕ್ಷಗಳು ಘೋಷಿಸುತ್ತಿವೆ ಎಂದು ನ್ಯಾ. ಗವಾಯಿ ಮೌಖಿಕವಾಗಿ ಟೀಕಿಸಿದರು.

ಉಚಿತ ಕೊಡುಗೆ ಸಂಸ್ಕೃತಿಯನ್ನು ತಪ್ಪು ನಡೆ ಎಂದು ಪರಿಗಣಿಸಬಹುದು. ಆರ್ಥಿಕ ಹೊರೆಗಳ ಪ್ರಾಯೋಗಿಕ ಆತಂಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಎಜಿ ಪ್ರತಿಕ್ರಿಯಿಸಿದರು.

ಭಾರತದಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಪಾವತಿಸಬೇಕಾದ ಪಿಂಚಣಿ ದರಗಳು ಅತ್ಯಲ್ಪವಾಗಿವೆ  ಎಂದು ದೂರಿ ಅಖಿಲ ಭಾರತ ನ್ಯಾಯಾಧೀಶರ ಸಂಘ 2015ರಲ್ಲಿ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ಗೆ ಪದೋನ್ನತಿ ನೀಡಿದರೂ ಇಂತಹ ತೊಂದರೆ ತಪ್ಪುವುದಿಲ್ಲ ಎಂದು ಸಂಘ ಅಳಲು ತೋಡಿಕೊಂಡಿತ್ತು.

ಇಂದಿನ ವಿಚಾರಣೆ ವೇಳೆ ಅಮಿಕಸ್ ಕ್ಯೂರಿ ಹಿರಿಯ ವಕೀಲ ಪರಮೇಶ್ವರ್ ಕೆ ವಾದ ಮಂಡಿಸಿ,  ಹೆಚ್ಚು ವೈವಿಧ್ಯಮಯ ನ್ಯಾಯಾಂಗ ಬಯಸುವುದಾದರೆ ನ್ಯಾಯಾಧೀಶರಿಗೆ ಉತ್ತಮ ವೇತನ ನೀಡಬೇಕು, ನಮ್ಮ ನ್ಯಾಯಾಧೀಶರನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಎಂದರು.

Also Read
[ಉಚಿತ ಕೊಡುಗೆ] ತ್ರಿಸದಸ್ಯ ಪೀಠದ ಮುಂದೆ ಪ್ರಕರಣ ಮಂಡಿಸಲು ಸುಪ್ರೀಂ ಕೋರ್ಟ್‌ ಆದೇಶ

ವಿಚಾರಣೆಯ ಅಂತ್ಯದ ವೇಳೆಗೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿರುವುದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಎಜಿ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಹಲವಾರು ವರ್ಷಗಳಿಂದ ಈ ಪ್ರಕರಣ ಬಾಕಿ ಉಳಿದಿದೆ ಎಂದು ತಿಳಿಸಿದ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತು. ಆದರೆ, ವಿಚಾರಣೆ ಬಳಿಕ ಸರ್ಕಾರ ಅಧಿಸೂಚನೆ ಹೊರಡಿಸಿದರೆ, ಎಜಿ ಅದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಅದು ಸೂಚಿಸಿತು. ವಿಚಾರಣೆ ನಾಳೆ ಮುಂದುವರೆಯಲಿದೆ.

Kannada Bar & Bench
kannada.barandbench.com