
ಪಡಿತರ ವ್ಯವಸ್ಥೆಯ ಮೂಲಕ ಅಗತ್ಯವಿರುವವರಿಗೆ ಸಬ್ಸಿಡಿ ದರದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವುದಾಗಿ ಅನೇಕ ರಾಜ್ಯಗಳು ಬೆನ್ನುತಟ್ಟಿಕೊಳ್ಳುತ್ತವೆಯಾದರೂ, ಉದ್ದೇಶಿತ ಫಲಾನುಭವಿಗಳಾದ ಪಡಿತರ ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ಪಡಿತರ ತಲುಪುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಇಷ್ಟೊಂದು ಪ್ರಮಾಣದಲ್ಲಿ ಪಡಿತರ ಚೀಟಿಗಳನ್ನು ನೀಡಿರುವುದಾಗಿ ಹೇಳಿಕೊಳ್ಳುವ ರಾಜ್ಯ ಸರ್ಕಾರಗಳು ಪಡಿತರ ಚೀಟಿಗಳನ್ನು ತೋರಿಕೆಗಷ್ಟೇ ಬಳಸುತ್ತಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಹೇಳಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಎದುರಿಸಿದ ತೊಂದರೆಗಳ ಹಿನ್ನೆಲೆಯಲ್ಲಿ ದಾಖಲಾಗಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇಂದಿನ ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ಅವರು ಅನೇಕ ವಲಸೆ ಕಾರ್ಮಿಕರು ತಮಗೆ ಅರ್ಹವಾದ ಪಡಿತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು. ಹೀಗಾಗಿ ಅರ್ಹರಲ್ಲದವರು ಪಡಿತರ ಚೀಟಿ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಪೀಠ ಕಳವಳ ವ್ಯಕ್ಪಡಿಸಿತು.
ಪಡಿತರ ಚೀಟಿಗಳು ಈಗ ಜನಪ್ರಿಯತೆಯ ಕಾರ್ಡ್‌ಗಳಾಗಿ ಮಾರ್ಪಟ್ಟಿವೆ. ತಮ್ಮ ರಾಜ್ಯಗಳ ಅಭಿವೃದ್ಧಿಯತನ್ನು ತೋರಿಸುವುದಕ್ಕಾಗಿ ರಾಜ್ಯಗಳು ತಾವು ಇಷ್ಟೊಂದು ಪ್ರಮಾಣದಲ್ಲಿ ಪಡಿತರ ಚೀಟಿಗಳನ್ನು ವಿತರಿಸಿದ್ದೇವೆ ಎಂದು ಹೇಳಿಕೊಳ್ಳುತ್ತವೆ... ಕೆಲ ರಾಜ್ಯಗಳಿವೆ ಅವು ತಮ್ಮ ಅಭಿವೃದ್ಧಿಯನ್ನು ಹೇಳಿಕೊಳ್ಳುವಾಗ ತಲಾದಾಯ ಹೆಚ್ಚುತ್ತಿದೆ ಎನ್ನುತ್ತವೆ. ಇದೇ ವೇಳೆ ಬಿಪಿಎಲ್ ಕುರಿತು ಮಾತನಾಡುವಾಗ ಶೇ 75ರಷ್ಟು ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎನ್ನುತ್ತವೆ. ಇದು ಹೇಗೆ ಹೊಂದಿಕೆಯಾಗುತ್ತದೆ? ಈ ವೈರುಧ್ಯಗಳು ಒಳಗಿವೆ. ಪಡಿತರ ಚೀಟಿಗಳು ಅರ್ಹರನ್ನು ತಲುಪುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.
ನೈಜ ಬಿಪಿಎಲ್ ಕುಟುಂಬಗಳಿಗೆಂದು ರೂಪಿಸಲಾದ ಸವಲತ್ತುಗಳು ಅರ್ಹರಲ್ಲದವರಿಗೆ ತಲುಪುತ್ತಿವೆಯೇ?
ಸುಪ್ರೀಂ ಕೋರ್ಟ್
ಸಾಮಾಜಿಕ ಭದ್ರತಾ ಸೇವೆಗಳನ್ನು ಪಡೆಯಲು ಸಹಾಯ ಮಾಡುವ ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ಡೇಟಾಬೇಸ್ ಆಗಿರುವ ಕೇಂದ್ರ ಸರ್ಕಾರದ eSHRAM ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸುಮಾರು 30 ಕೋಟಿ ವಲಸೆ ಕಾರ್ಮಿಕರಲ್ಲಿ, 8 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರ ಬಳಿ ಪಡಿತರ ಚೀಟಿಗಳಿಲ್ಲ ಎಂದು ಕೂಡ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದರು. ಇದರಲ್ಲಿ ಶೇ. 80 ರಷ್ಟು ಜನಸಂಖ್ಯೆ ತುಂಬಾ ಬಡವರು. ಅವರೆಲ್ಲರಿಗೂ ಆಹಾರ ಭದ್ರತೆಯ ಅಗತ್ಯವಿದೆ ಎಂದು ವಾದಿಸಿದರು.
ಇದು ನಿಜವಾದ ಸಮಸ್ಯೆಯಾಗಿದ್ದು, ಬಡವರು ಪಡೆಯಬೇಕಾದ ಪಡಿತರವನ್ನು ಅವರಿಗೆ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ನ್ಯಾಯಾಲಯ ಹೇಳಿತು.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಸುಮಾರು 81.35 ಕೋಟಿ ಜನ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಒದಗಿಸಲಾದ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದು ಉಳಿದ 11 ಕೋಟಿ ಮಂದಿ ಇದೇ ರೀತಿಯ ಮತ್ತೊಂದು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ ಎಂದರು.