ಮೈಸೂರು ವಿವಿ ಕುಲಪತಿ ನೇಮಕ ಆದೇಶಕ್ಕೆ ತಡೆ: ಬುಧವಾರ ಮೇಲ್ಮನವಿ ಆಲಿಸಲು ಹೈಕೋರ್ಟ್‌ ಸಮ್ಮತಿ

"ಮೈಸೂರು ವಿಶ್ವವಿದ್ಯಾಲಯದ ಆಡಳಿತ ಸ್ತಬ್ಧವಾಗಿದ್ದು, ಅತ್ತ ಏಕಸದಸ್ಯ ಪೀಠದಲ್ಲಿ ವಿಚಾರಣೆಯೂ ನಡೆಯುತ್ತಿಲ್ಲ. ಹೈಕೋರ್ಟ್‌ನಲ್ಲಿ ಸಿಜೆ ಇಲ್ಲದಿದ್ದರೆ ಹೇಗೆ ಇಡೀ ಆಡಳಿತ ನಡೆಯುವುದಿಲ್ಲವೋ ಹಾಗಾಗಿದೆ" ಎಂದು ಪೀಠಕ್ಕೆ ಮನವರಿಕೆ ಮಾಡಿದ ವಕೀಲರು.
University of Mysore
University of Mysore

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಪ್ರೊ. ಎನ್ ಕೆ ಲೋಕನಾಥ್ ಅವರನ್ನು ನೇಮಕ ಮಾಡಿ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ನೀಡಿರುವ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿರುವ ಮೇಲ್ಮನವಿಯನ್ನು ನಾಳೆ (ಬುಧವಾರ) ವಿಚಾರಣೆ ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠ ಸಮ್ಮತಿಸಿದೆ.

ವಿಶ್ವವಿದ್ಯಾಲಯದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಕರಣ ಉಲ್ಲೇಖಿಸಿದರು.

ಹೊಳ್ಳ ಅವರು, “2023ರ ಮಾರ್ಚ್‌ನಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ (ಪ್ರೊ. ಲೋಕನಾಥ್‌) ಕುಲಪತಿ ನೇಮಕ ಮಾಡಲಾಗಿದ್ದು, ಅವರು ಕಾರ್ಯನಿರ್ವಹಿಸುತ್ತಿದ್ದರು. ಈ ನಡುವೆ (ಪ್ರೊ. ಶರತ್‌ ಅನಂತಮೂರ್ತಿ) ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸದಿದ್ದರೂ ಜೂನ್‌ 21ರಂದು ಏಕಸದಸ್ಯ ಪೀಠವು (ನ್ಯಾಯಮೂರ್ತಿ ಇ ಎಸ್‌ ಇಂದಿರೇಶ್‌) ಮಧ್ಯಂತರ ಆದೇಶ ಮಾಡಿದೆ. ಇದರಿಂದಾಗಿ ಮೈಸೂರು ವಿಶ್ವವಿದ್ಯಾಲಯದ ಇಡೀ ಆಡಳಿತ ಸ್ತಬ್ಧವಾಗಿದ್ದು, ಅತ್ತ ಏಕಸದಸ್ಯ ಪೀಠದಲ್ಲಿ ವಿಚಾರಣೆಯೂ ನಡೆಯುತ್ತಿಲ್ಲ. ಇದೊಂದು ರೀತಿಯಲ್ಲಿ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳು ಇಲ್ಲದಿದ್ದರೆ ಹೇಗೆ ಇಡೀ ಆಡಳಿತ ನಡೆಯುವುದಿಲ್ಲವೋ ಹಾಗಾಗಿದೆ” ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಪೀಠವು “ನಾವು ಪ್ರಕರಣವನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸುವವರೆಗೆ ಪಕ್ಷಕಾರರು ಕೆಲ ವ್ಯವಸ್ಥೆ ಮಾಡಿಕೊಳ್ಳಬಹುದು. ವಿಶ್ವವಿದ್ಯಾಲಯದ ಆಡಳಿತಕ್ಕೆ ಹಾನಿಯಾಬಾರದು. ಬೋಧಕರು, ಸಿಬ್ಬಂದಿ ನೇಮಕಾತಿ, ಹಣಕಾಸಿನ ವಿಚಾರ ಹೊರತುಪಡಿಸಿ ದೈನಂದಿನ ಚಟುವಟಿಕೆಗಳನ್ನು ರಿಜಿಸ್ಟ್ರಾರ್‌ ನೋಡಿಕೊಳ್ಳಬಹುದಲ್ಲವೇ...” ಎಂದಿತು.

ಆಗ ಹೊಳ್ಳ ಅವರು “ಆಕ್ಷೇಪಣೆ ದಾಖಲಿಸದಿದ್ದರೂ ಮಧ್ಯಂತರ ಆದೇಶ ಮಾಡಲಾಗಿದೆ. ಆನಂತರ ಆಕ್ಷೇಪಣೆ ಸಲ್ಲಿಸಿ, ಮಧ್ಯಂತರ ಆದೇಶ ತೆರವು ಮಾಡಲು ಮಧ್ಯಂತರ ಅರ್ಜಿ ಸಲ್ಲಿಸಿದರೂ ಏಕಸದಸ್ಯ ಪೀಠವು ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ” ಎಂದು ಒತ್ತಿ ಹೇಳಿದರು. ಇದನ್ನು ಆಲಿಸಿದ ಪೀಠವು ನಾಳೆಗೆ ಮೇಲ್ಮನವಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಾಲಯದ ಅಧಿಕಾರಿಗೆ ಸೂಚಿಸಿತು.

Also Read
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ನೇಮಕ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

ಜೂನ್‌ 21ರಂದು ನ್ಯಾ. ಇಂದಿರೇಶ್‌ ಅವರ ನೇತೃತ್ವದ ಪೀಠವು “2023ರ ಮಾರ್ಚ್‌ 23ರಂದು ಕುಲಪತಿ ನೇಮಕಾತಿ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಮೇಲ್ನೋಟಕ್ಕೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆ 2000ರ ಸೆಕ್ಷನ್‌ 14 ಮತ್ತು ಯುಜಿಸಿ ನಿಯಮಗಳ ಅಡಿಯಲ್ಲಿ ಪ್ರತಿವಾದಿ ಪ್ರಾಧಿಕಾರಗಳು ನಿಬಂಧನೆ ಪಾಲಿಸಿಲ್ಲ. ಹೀಗಾಗಿ, ಒಂದನೇ ಪ್ರತಿವಾದಿ ಮಾಡಿರುವ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ” ಎಂದು ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com