ಚಾಟ್ ಜಿಪಿಟಿಯಿಂದ ಹೊರಗೆ: ಇಂಡಿಯಾಮಾರ್ಟ್‌ಗೆ ವಾಣಿಜ್ಯಿಕ ನಷ್ಟ ಉಂಟಾಗಬಹುದು ಎಂದ ಕಲ್ಕತ್ತಾ ಹೈಕೋರ್ಟ್

ಇಂಡಿಯಾ ಮಾರ್ಟ್ ಮೇಲ್ನೋಟಕ್ಕೆ ಬಲವಾದ ವಾದ ಮಂಡಿಸಿದೆ ಎಂಬುದಾಗಿ ಪೀಠ ತಿಳಿಸಿದೆ.
ಚಾಟ್ ಜಿಪಿಟಿಯಿಂದ ಹೊರಗೆ: ಇಂಡಿಯಾಮಾರ್ಟ್‌ಗೆ ವಾಣಿಜ್ಯಿಕ ನಷ್ಟ ಉಂಟಾಗಬಹುದು ಎಂದ ಕಲ್ಕತ್ತಾ ಹೈಕೋರ್ಟ್
Published on

ಓಪನ್‌ ಎಐ ಒಡೆತನದ ಚಾಟ್‌ ಜಿಪಿಟಿ ಶೋಧ ಫಲಿತಾಂಶಗಳಿಂದ ತನ್ನನ್ನು ಹೊರಗಿಡಲಾಗಿದೆ ಎಂದು ದೂರಿ ಇಂಡಿಯಾಮಾರ್ಟ್‌ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಇಂಡಿಯಾಮಾರ್ಟ್‌ ಇಂಟರ್‌ಮೆಶ್‌ ಲಿಮಿಟೆಡ್‌ ಮತ್ತು ಓಪನ್‌ಐ ಇಂಕ್‌ ಇನ್ನಿತರರ ನಡುವಣ ಪ್ರಕರಣ]

ವ್ಯವಹಾರದಿಂದ ವ್ಯವಹಾರ (ಬಿ2ಬಿ) ಆನ್‌ಲೈನ್‌ ಮಾರುಕಟ್ಟೆ ಸಂಸ್ಥೆಯಾಗಿರುವ ತನ್ನನ್ನೇ ಆಯ್ದು ತಾರತಮ್ಯ ಎಸಗಲಾಗಿದೆ. ಎಐ ಮೂಲಕ ಸೃಜಿಸಲಾದ ಉತ್ತರಗಳಲ್ಲಿ ಇಂಡಿಯಾಮಾರ್ಟ್‌ ಕಾಣಿಸಿಕೊಳ್ಳದಂತೆ ತಡೆಹಿಡಿಯಲಾಗಿದ್ದು ಉಳಿದ ಸ್ಪರ್ಧಾತ್ಮಕ ಇ ವಾಣಿಜ್ಯ ಮತ್ತು ಇತರೆ ಬಿಟುಬಿ ಜಾಲತಾಣಗಳ ಬಗ್ಗೆ ಮಾಹಿತಿ ದೊರೆಯುತ್ತಲೇ ಇದೆ ಎಂದು ಕಂಪೆನಿ ಹೇಳಿದೆ. 

Also Read
ಆದೇಶ ಪ್ರಕಟಿಸಲು ಸಂಶೋಧನೆಗಾಗಿ ಚಾಟ್‌ಜಿಪಿಟಿ ಬಳಿಸಿದ ಮಣಿಪುರ ಹೈಕೋರ್ಟ್‌

ಪ್ರಕರಣವನ್ನು ಡಿಸೆಂಬರ್ 24ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಕೃಷ್ಣ ಕಪೂರ್, ಇಂಡಿಯಾ ಮಾರ್ಟ್‌ ತನ್ನ ಪರವಾಗಿ ಮೇಲ್ನೋಟಕ್ಕೆ ಬಲವಾದ ವಾದ ಮಂಡಿಸಿದೆ. ಹೀಗೆ ಚಾಟ್‌ಜಿಪಿಟಿ ಇಂಡಿಯಾಮಾರ್ಟನ್ನು ನಿರಂತರವಾಗಿ ಹೊರಗಿಡುವುದು ವಾಣಿಜ್ಯಿಕ ನಷ್ಟಕ್ಕೆ ಎಡೆ ಮಾಡಿಕೊಡಬಹುದು ಎಂದು ಅಭಿಪ್ರಾಯಪಟ್ಟರು.

ಇಂಡಿಯಾಮಾರ್ಟನ್ನು ಯಾವುದೇ ತಾರ್ಕಿಕ ಕಾರಣವಿಲ್ಲದೆ ತಾರತಮ್ಯ ಉಂಟುಮಾಡಿ ಅನ್ಯಾಯದಿಂದ ಹೊರಗಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಿಂದ ಇಂಡಿಯಾ ಮಾರ್ಟ್‌ ಬಗೆಗಿನ ಸದ್ಭಾವನೆ, ಅದರ ವರ್ಚಸ್ಸಿಗೆ ಧಕ್ಕೆ ಒದಗಿದ್ದು ವಾಣಿಜ್ಯಿಕ ಹಾನಿ ತಪ್ಪದೆ ಉಂಟಾಗುತ್ತಿದೆ ಎಂದು ನ್ಯಾಯಾಲಯ ವಿವರಿಸಿದೆ. 

ಆದರೆ, ಈ ಹಂತದಲ್ಲಿ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ನ್ಯಾಯಮೂರ್ತಿ ಕಪೂರ್ ನಿರಾಕರಿಸಿದರು. ಪ್ರತಿವಾದಿಗಳಾದ ಓಪನ್‌ಎಐ ಪರ ವಕೀಲರು ಹಾಜರಾಗಿಲ್ಲವಾದ್ದರಿಂದ ಅವರ ವಾದ ಕೇಳದೇ ಅಂತಿಮ ಪರಿಹಾರ ನೀಡಲಾಗದು ಎಂದು ಅವರು ಹೇಳಿದರು.

ಹೀಗಾಗಿ ಓಪನ್‌ಎಐಗೆ ಮತ್ತೆ ನೋಟಿಸ್‌ ನೀಡುವಂತೆ ಇಂಡಿಯಾಮಾರ್ಟ್‌ ಪರ ವಕೀಲರಿಗೆ ಸೂಚಿಸಿದ ಪೀಠ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.

Also Read
ಚಾಟ್ ಜಿಪಿಟಿಯಿಂದ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ: ಎಎನ್ಐ ಅರ್ಜಿ ಕುರಿತಂತೆ ಓಪನ್ ಎಐಗೆ ದೆಹಲಿ ಹೈಕೋರ್ಟ್ ಸಮನ್ಸ್

ತಾನು 40ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುವ, ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ. ವಾಣಿಜ್ಯ ಚಿಹ್ನೆ ಕಾಯಿದೆ 1999ರ ಅಡಿಯಲ್ಲಿ ತಾನು ಪ್ರಸಿದ್ಧ ವಾಣಿಜ್ಯ ಚಿಹ್ನೆ ಹೊಂದಿದ್ದೇನೆ. ಓಪನ್‌ ಎಐ ತನ್ನನ್ನು ಹೊರಗಿಟ್ಟಿರುವುದು ವ್ಯಾಪಾರ ಉಲ್ಲಂಘನೆ ಹಾಗೂ ಅನ್ಯಾಯಯುತ ಸ್ಪರ್ಧೆಗೆ ಸಮ. ಅದು ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ ವರದಿ ಆಧರಿಸಿ ತನ್ನನ್ನು ಹೊರಗಿಟ್ಟಿರುವುದನ್ನು ಸಮರ್ಥಿಸಿಕೊಂಡಿದ್ದು ವರದಿಯ ಆರೋಪಗಳಿಗೆ ಪ್ರತಿಕ್ರಿಯಿಸಲು ತನಗೆ ಮುಂಚಿತವಾಗಿ ಅವಕಾಶ ನೀಡಿಲ್ಲ ಎಂದು ಇಂಡಿಯಾಮಾರ್ಟ್‌ ದೂರಿದೆ.

ಆದರೆ ಅದೇ ವರದಿಯಲ್ಲಿ ಪ್ರಸ್ತಾಪಿಸಲಾದ ಡಿಎಚ್‌ಗೇಟ್‌, ಪಿಂಡುಓಡುವೊ, ಶಾಪಿ ಹಾಗೂ ತಾವೊಬಾವೊ ಮತ್ತಿತರ ಸಂಸ್ಥೆಗಳು ಚಾಟ್‌ಜಿಪಿಟಿ ಪ್ರತಿಕ್ರಿಯೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರುವುದು ತಾರತಮ್ಯವನ್ನು ಹೇಳುತ್ತಿದೆ ಎಂದು ಅದು ಹೇಳಿದೆ. 

[ಆದೇಶದ ಪ್ರತಿ]

Attachment
PDF
IndiaMART_v_OpenAI_Inc_and_Ors
Preview
Kannada Bar & Bench
kannada.barandbench.com