ಮುಸ್ಲಿಂ ಸಹಪಾಠಿಯ ಕಪಾಳಮೋಕ್ಷಕ್ಕೆ ಶಿಕ್ಷಕಿ ಸೂಚನೆ: ಆರೋಪ ಕೈಬಿಟ್ಟಿದ್ದ ಉ. ಪ್ರದೇಶ ಪೊಲೀಸರಿಗೆ ಸುಪ್ರೀಂ ಚಾಟಿ

ಘಟನೆಗೆ ಅತಿಯಾದ ಕೋಮು ಆಯಾಮ ನೀಡಲಾಗಿದೆ ಎಂಬ ಎಎಸ್‌ಜಿ ವಾದಕ್ಕೆ ಕೆರಳಿದ ನ್ಯಾಯಾಲಯ “ಮಗುವಿನ ಧರ್ಮದ ಕಾರಣಕ್ಕೆ ಹೊಡೆಯುವಂತೆ ಸಹಪಾಠಿಗಳಿಗೆ ಶಿಕ್ಷಕಿ ಆದೇಶ ನೀಡಿದ್ದರು. ಇದೆಂಥ ಶಿಕ್ಷಣವನ್ನು ನೀಡಲಾಗುತ್ತಿದೆ?” ಎಂದು ಪ್ರತಿಕ್ರಿಯಿಸಿತು.
Supreme Court of India
Supreme Court of India

ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಹೋಮ್‌ವರ್ಕ್‌ ಮಾಡದಿದ್ದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡುವಂತೆ ಅನ್ಯಧರ್ಮದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಸೂಚಿಸಿದ್ದ ಪ್ರಕರಣವನ್ನು ರಾಜ್ಯ ಪೊಲೀಸರು ನಿಭಾಯಿಸಿದ ರೀತಿಗೆ ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ತುಷಾರ್‌ ಗಾಂಧಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ಕೆಲ ಪ್ರಮುಖ ಆರೋಪಗಳನ್ನು ಒಳಗೊಂಡಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ  ಗಮನಿಸಿತು.

Also Read
ಪಿಎಸ್‌ಐ ಹಗರಣ: ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ಗೆ ಜಾಮೀನು ನೀಡಿದ ಹೈಕೋರ್ಟ್

“ಎಫ್‌ಐಆರ್ ದಾಖಲಾದ ರೀತಿಗೆ ನಮ್ಮ ತೀವ್ರ ಆಕ್ಷೇಪ ಇದೆ. ಧರ್ಮದ ಕಾರಣಕ್ಕೆ ಆರೋಪ ಮಾಡಿ ಥಳಿಸಲಾಗಿದೆ ಎಂದು ತಂದೆ ಹೇಳಿಕೆ ನೀಡಿದ್ದರು. ಆದರೆ ಎಫ್‌ಐಆರ್‌ನಲ್ಲಿ ಇದನ್ನು ಉಲ್ಲೇಖಿಸಿಲ್ಲ. ವಿಡಿಯೋ ಲಿಪ್ಯಂತರ ಎಲ್ಲಿ? ಇದು ಶಿಕ್ಷಣದ ಗುಣಮಟ್ಟದ ಪ್ರಶ್ನೆ. ಗುಣಮಟ್ಟದ ಶಿಕ್ಷಣವು ಸಂವೇದನಾಶೀಲ ಶಿಕ್ಷಣವನ್ನು ಒಳಗೊಂಡಿರುತ್ತದೆ. ಘಟನೆ ಸಂಭವಿಸಿದ ರೀತಿಗೆ ಪ್ರಭುತ್ವದ ಆತ್ಮಸಾಕ್ಷಿ ಅಲುಗಾಡಬೇಕಿತ್ತು" ಎಂದು ನ್ಯಾಯಮೂರ್ತಿ ಓಕಾ ಬೇಸರ ವ್ಯಕ್ತಪಡಿಸಿದರು.

ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಕೆ ಎಂ ನಟರಾಜ್‌ ಘಟನೆಗೆ ಅತಿಯಾದ ಕೋಮು ಆಯಾಮ ನೀಡಲಾಗಿದೆ. ಇಲ್ಲೇನೋ ಇದೆ ಎಂದು ವಾದಿಸಿದರು.

Also Read
ಮುಸ್ಲಿಂ ಸಹಪಾಠಿಗಳ ಕಪಾಳಮೋಕ್ಷಕ್ಕೆ ಶಿಕ್ಷಕಿ ಸೂಚನೆ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಾತ್ಮ ಗಾಂಧಿ ಮರಿಮೊಮ್ಮಗ

"ಅಲ್ಲಿರುವುದು ಏನೋ ಅಲ್ಲ, ಇದು ತುಂಬಾ ಗಂಭೀರ ವಿಚಾರ. ತನ್ನ ಧರ್ಮದ ಕಾರಣಕ್ಕೆ ಮಗುವನ್ನು ಹೊಡೆಯಲು ಶಿಕ್ಷಕಿ ಆದೇಶ ನೀಡಿದ್ದರು. ಎಂಥಾ ಶಿಕ್ಷಣವನ್ನು ನೀಡಲಾಗುತ್ತಿದೆ?" ನ್ಯಾ. ಓಕಾ ಕಿಡಿಕಾರಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೂಚಿಸಿದ ಹಿರಿಯ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎಂದು ಪೀಠ ತಾಕೀತು ಮಾಡಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ದ್ವೇಷ ಭಾಷಣಕ್ಕೆ ಸಮನಾದ ಕೃತ್ಯ ನಡೆದಿದೆಯೇ ಎಂದು ಅಧಿಕಾರಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ವಿವಾದದ ಕೇಂದ್ರಬಿಂದುವಾಗಿರುವ ಖುಬ್ಬಾಪುರ ಗ್ರಾಮದ ಖಾಸಗಿ ಶಾಲೆಯ ಶಿಕ್ಷಕಿ ತೃಪ್ತಾ ತ್ಯಾಗಿ, ಬಾಲಕನ ಧರ್ಮ ಉಲ್ಲೇಖಿಸಿ  ಅವಹೇಳನಕಾರಿಯಾಗಿ ಮಾತನಾಡಿದ್ದು, ಆತನಿಗೆ ಬಲವಾಗಿ ಹೊಡೆಯುವಂತೆ ಸಹಪಾಠಿಗಳಿಗೆ ಸೂಚಿಸಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ನಂತರ ಶಾಲೆಗೆ ಬೀಗಮುದ್ರೆ ಹಾಕಲಾಗಿತ್ತು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತ್ಯಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಘಟನೆಯನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಲು ಮುಂದಾಗಿತ್ತು.

Related Stories

No stories found.
Kannada Bar & Bench
kannada.barandbench.com