ವರದಕ್ಷಿಣೆ ಸಾವು: ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ್ದ ಕಮಾಂಡೋಗೆ ಶರಣಾಗಲು ಸುಪ್ರೀಂ ಸೂಚನೆ

ಅರ್ಜಿದಾರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಆತ ಮನೆಯಲ್ಲಿ ದೌರ್ಜನ್ಯ ಎಸಗಲು ರಕ್ಷಣೆಯನ್ನು ನೀಡದು ಎಂದು ಕಿಡಿಕಾರಿದ ನ್ಯಾಯಾಲಯ.
ವರದಕ್ಷಿಣೆ ಸಾವು: ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ್ದ ಕಮಾಂಡೋಗೆ ಶರಣಾಗಲು ಸುಪ್ರೀಂ ಸೂಚನೆ
Published on

ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಸೇನಾ ಕಮಾಂಡೋ ಒಬ್ಬರಿಗೆ ಇನ್ನೆರಡು ವಾರಗಳಲ್ಲಿ ಪೊಲೀಸರೆದುರು ಶರಣಾಗುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

ಪ್ರಕರಣದ ಮೇಲ್ಮನವಿಯ ವಿಚಾರಣೆ ನಡೆಯುತ್ತಿರುವುದರಿಂದ ಶರಣಾಗುವಿಕೆಯಿಂದ ವಿನಾಯಿತಿ ನೀಡಬೇಕೆಂದು ಬ್ಲಾಕ್‌ ಕ್ಯಾಟ್‌ ಕಮಾಂಡೋ ಒಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಪಹಲ್ಗಾಮ್‌ ದಾಳಿಗೆ ಉತ್ತರವಾಗಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಭಾಗವಾಗಿದ್ದೆ ಎಂಬ ಕಮಾಂಡೋ ವಾದವನ್ನು ಒಪ್ಪಲಿಲ್ಲ.

Also Read
ವರದಕ್ಷಿಣೆ ಕಿರುಕುಳ: ಅತ್ತೆ-ಮಾವನ ವಿರುದ್ಧದ ಪ್ರಕರಣ ರದ್ದು, ಪತಿಯ ವಿರುದ್ಧ ತನಿಖೆಗೆ ಅಸ್ತು ಎಂದ ಹೈಕೋರ್ಟ್‌

"ನಾನು ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ್ದೇನೆ. ಕಳೆದ 20 ವರ್ಷಗಳಿಂದ, ನಾನು ರಾಷ್ಟ್ರೀಯ ರೈಫಲ್ಸ್‌ನಲ್ಲಿ ನಿಯೋಜನೆಗೊಂಡಿರುವ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿದ್ದೇನೆ" ಎಂಬ ಕಮಾಂಡೋ ವಾದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠ "ಅದು ನಿಮಗೆ ಮನೆಯಲ್ಲಿ ದೌರ್ಜನ್ಯ ಎಸಗುವುದರಿಂದ ಯಾವುದೇ ರಕ್ಷಣೆ ನೀಡುವುದಿಲ್ಲ. ಇದು ನೀವು ಅದೆಷ್ಟು ದೈಹಿಕವಾಗಿ ಸದೃಢರಾಗಿದ್ದೀರಿ ಮತ್ತುನೀವೊಬ್ಬರೇ ನಿಮ್ಮ ಹೆಂಡತಿಯ ಕತ್ತು ಹಿಸುಕಿರಬಹುದಾದ ಸಾಧ್ಯತೆಯನ್ನು ತೋರಿಸುತ್ತದೆ"ಎಂದಿತು.

ಆರೋಪಿ ಕಮಾಂಡೋಗೆ ವಿಧಿಸಲಾಗಿದ್ದ ಹತ್ತು ವರ್ಷಗಳ ಕಠಿಣ ಶಿಕ್ಷೆಯನ್ನು ಈ ಹಿಂದೆ ಹೈಕೋರ್ಟ್‌ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್‌ಗೆ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದ್ದರು.

ಅರೋಪಿ ವಿರುದ್ಧ ದಾಖಲಾಗಿರುವ ಆರೋಪಗಳು ಮತ್ತು ಶರಣಾಗತಿಯಿಂದ ವಿನಾಯಿತಿ ಕೋರಿ ಸಲ್ಲಿಸಲಾದ ಮನವಿ ಬಗೆ ಕಳವಳ ವ್ಯಕ್ತಪಡಿಸುತ್ತಲೇ ವಿಚಾರಣೆ ಆರಂಭಿಸಿದ ನ್ಯಾಯಾಲಯ ಅಂತಹ ರಕ್ಷಣೆ ಲಘು ಶಿಕ್ಷೆಗೆ ಒಳಗಾದವರಿಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿತು.

 "ಇದು ಭಯಾನಕ ಕೃತ್ಯ. ನೀವು ನಿಮ್ಮ ಹೆಂಡತಿಯನ್ನು ಕತ್ತು ಹಿಸುಕಿದ ರೀತಿ ಗಮನಿಸಿ. ಶರಣಾಗತಿಯಿಂದ ವಿನಾಯಿತಿಯು ಆರು ತಿಂಗಳು, ಒಂದು ವರ್ಷದ ಶಿಕ್ಷೆ ವಿಧಿಸಲಾದಂತಹ ಪ್ರಕರಣಗಳಲ್ಲಿ ಮಾತ್ರ ಇರುತ್ತದೆ" ಎಂದು ಪೀಠ ಹೇಳಿತು.

Also Read
ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ: ಪ್ರೊ. ಅಲಿ ವಿರುದ್ಧದ ತನಿಖಾ ವ್ಯಾಪ್ತಿ ವಿಸ್ತರಿಸದಂತೆ ಎಸ್ಐಟಿಗೆ ಸುಪ್ರೀಂ ತಾಕೀತು

ವಾದವೊಂದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ತಾನು ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಬಹುದಾದರೂ ಶರಣಾಗುವುದರಿಂದ ವಿನಾಯಿತಿ ನೀಡುವಂತೆ ಮಾಡಿದ ಮನವಿಯನ್ನು ಪರಿಗಣಿಸುವುದಿಲ್ಲ ಎಂದಿತು.

ಅರ್ಜಿದಾರರು ಪ್ರಸ್ತುತ ಬೇರೆಡೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಶರಣಾಗತಿಗೆ ಸಮಯಾವಕಾಶ ನೀಡಬೇಕೆಂದು ಕೇಳಿದಾಗ ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿತು. ಅರ್ಜಿದಾರನ ಪರ ವಕೀಲರು ಹೆಚ್ಚುವರಿ ಸಮಯಾವಕಾಶ ಕೋರಿದರಾದರೂ, ಎರಡು ವಾರಗಳಷ್ಟೇ ಅವಕಾಶ ನೀಡಲಾಗುವುದು ಎಂದು ಪೀಠ ಸ್ಪಷ್ಟಪಡಿಸಿತು. ಈಗ ಆಪರೇಷನ್‌ ಸಿಂಧೂರ್‌ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿತು.

Kannada Bar & Bench
kannada.barandbench.com