
ಬಹುಭಾಷಾ ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದಿರುವ ಸುಪ್ರೀಂ ಕೋರ್ಟ್ ಸಂಘಟನೆಗಳು ಗಲಭೆಗೆ ಅವಕಾಶ ನೀಡಬಾರದು ಎಂಬುದಾಗಿ ಮಂಗಳವಾರ ಆದೇಶಿಸಿದೆ.
'ತಮಿಳಿನಿಂದ ಕನ್ನಡ ಹುಟ್ಟಿದೆ' ಎಂಬ ಕಮಲ್ ಹಾಸನ್ ಅವರ ಹೇಳಿಕೆಗೆ ಈಚೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಅವರ ಚಿತ್ರ ಬಹಿಷ್ಕರಿಸುವಂತೆ ಕರೆ ನೀಡಲಾಗಿತ್ತು.
ಆದರೆ ಕಾನೂನಾತ್ಮಕ ಆಡಳಿತ ಮೇಲುಗೈ ಸಾಧಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಚಿತ್ರ ಬಿಡುಗಡೆ ಮಾಡಲು ಯಾವುದೇ ವ್ಯಕ್ತಿಗೆ ಅವಕಾಶ ನೀಡಬೇಕೆಂದು ಕಾನೂನಾತ್ಮಕ ಆಡಳಿತ ಹೇಳುತ್ತದೆ. ಚಿತ್ರ ಮಂದಿರಗಳನ್ನು ದಹಿಸಲಾಗುತ್ತದೆ ಎಂಬ ಭಯದಿಂದ ಚಿತ್ರ ಬಿಡುಗಡೆ ಮಾಡದೆ ಇರಲು ಸಾಧ್ಯವಿಲ್ಲ. ಜನ ಬಂದು ಚಿತ್ರ ನೋಡಲಿ ಎಂದು ತಾನು ಹೇಳುತ್ತಿಲ್ಲ. ಆದರೆ ಚಿತ್ರ ಬಿಡುಗಡೆ ಮಾಡಬೇಕು ಎಂಬುದಾಗಿ ನ್ಯಾಯಮೂರ್ತಿಗಳಾದ ಉಚ್ಚಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ಪೀಠ ವಿವರಿಸಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಸಂಬಂಧ ಬಾಕಿ ಉಳಿದಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಪೀಠ ಇದೇ ವೇಳೆ ಸೂಚಿಸಿತು.
ಸೆನ್ಸಾರ್ ಪ್ರಮಾಣಪತ್ರ ಹೊಂದಿದ್ದರೂ, ಕೆಲ ಸಂಘಟನೆಗಳ ಬೆದರಿಕೆ ಮತ್ತು ಸರ್ಕಾರಿ ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ದೂರಿ ಬೆಂಗಳೂರು ನಿವಾಸಿ ಎಂ. ಮಹೇಶ್ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಒಬ್ಬ ವ್ಯಕ್ತಿ ಭಿನ್ನ ನಿಲುವು ಹೊಂದಿದ್ದಾನೆ ಎಂಬ ಕಾರಣಕ್ಕೆ ಚಿತ್ರ ನಿಷೇಧಿಸುವಂತಿಲ್ಲ ಎಂದಿತು.
"ಯಾರಾದರೂ ಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂದ ಮಾತ್ರಕ್ಕೆ ಅವರ ಸಿನಿಮಾವನ್ನು ನಿಷೇಧಿಸಬೇಕು ಎಂದರ್ಥವಲ್ಲ. ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುತ್ತದೆ ಕಾನೂನಾತ್ಮಕ ಆಡಳಿತ" ಎಂದು ನ್ಯಾಯಾಲಯ ವಿವರಿಸಿತು.
ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಚಿತ್ರ ಬಿಡುಗಡೆ ತಡೆಯುವಂತೆ ಜನರ ಗುಂಪುಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿತು.
"ಈ ವ್ಯವಸ್ಥೆಯಲ್ಲಿ ಏನೋ ಲೋಪವಿದೆ. ಒಬ್ಬ ವ್ಯಕ್ತಿ ಹೇಳಿಕೆ ನೀಡಿದರೆ ಜನ ಅದನ್ನು ಪರಮ ಸತ್ಯ ಎಂದು ಭಾವಿಸುತ್ತಾರೆ. ಚರ್ಚೆ ನಡೆಯಲಿ! ಬೆಂಗಳೂರಿನ ಪ್ರಬುದ್ಧ ಜನ ಕಮಲ್ ಏಕೆ ತಪ್ಪು, ಅವರು ಹೇಳಿದ್ದು ಏಕೆ ಅಸಂಬದ್ಧ ಎಂಬುದನ್ನು ವಿವರಿಸಲಿ" ಎಂದಿತು.
ಕಳೆದ ವಾರ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಳಿತ್ತು. ಚಿತ್ರದ ನಿರ್ಮಾಪಕರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು ಸಮಸ್ಯೆ ಪರಿಹರಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಇಂದು ತಿಳಿಸಿತು.
ಇದರಿಂದ ತೃಪ್ತವಾಗದ ನ್ಯಾಯಾಲಯ ಸರ್ಕಾರ ಹೀಗಾಗಲು ಬಿಡುವಂತಿಲ್ಲ. ಕಾನೂನಾತ್ಮಕ ಆಡಳಿತದ ಪ್ರಕಾರ ಯಾವುದೇ ವ್ಯಕ್ತಿಗೆ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡಬೇಕು. ಸಿಬಿಎಫ್‌ಸಿ ಅನುಮತಿ ಪಡೆದಿರುವ ಯಾವುದೇ ಚಿತ್ರ ಬಿಡುಗಡೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಅದು ಹೇಳಿತು. ಪ್ರಬುದ್ಧ ಸರ್ಕಾರವೊಂದು ಅಂತಹ ಅವಕಾಶವನ್ನು ಒದಗಿಸಬೇಕು ಎಂದಿತು. ಬುಧವಾರದೊಳಗೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ ಗುರುವಾರ ಮತ್ತೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಚಿತ್ರದ ನಿರ್ಮಾಪಕರು ಪೊಲೀಸ್ ರಕ್ಷಣೆಗಾಗಿ ಕರ್ನಾಟಕ ಹೈಕೋರ್ಟ್ ಸಂಪರ್ಕಿಸಿದ್ದರೂ , ಕಮಲ್ ಹಾಸನ್ ತಮ್ಮ ಹಿಂದಿನ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕೇ ಎಂಬುದರ ಮೇಲೆ ವಿಚಾರಣೆಯ ಗಮನ ಹರಿಯಿತು ಎಂದು ಅರ್ಜಿದಾರರು ತಿಳಿಸಿದರು.
ಇದನ್ನು ತುಷ್ಟೀಕರಣ ಎಂದು ಖಂಡಿಸಿರುವ ಮನವಿದಾರರು ಈ ಮೂಲಕ ಮೂಲಭೂತ ಹಕ್ಕು ಪಡೆಯುವ ವಿಚಾರದಲ್ಲಿ ಹೈಕೋರ್ಟ್ ಹಾದಿ ತಪ್ಪಿಸಲಾಗಿದೆ ಎಂದು ಆರೋಪಿಸಿದರು. ಕಮಲ್ ಹಾಸನ್ ಹೈಕೋರ್ಟ್‌ನಲ್ಲಿ ಕ್ಷಮೆ ಯಾಚಿಸಿರಲಿಲ್ಲ. ಪ್ರಕರಣದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು.