ಆರ್‌ಟಿಇ ಕಾಯಿದೆ: ಪ್ರತಿಕ್ರಿಯೆ ಸಲ್ಲಿಸದ ತೆಲಂಗಾಣ, ಪಂಜಾಬ್, ಕಾಶ್ಮೀರ ಸರ್ಕಾರಗಳಿಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

ಕೇಂದ್ರಾಡಳಿತ ಪ್ರದೇಶ ಮತ್ತು ಎರಡು ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸದೆ ಇರುವುದು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುತ್ತಿದೆ ಎಂದು ಪೀಠ ಹೇಳಿದೆ.
School children
School children
Published on

ಶಿಕ್ಷಣ ಹಕ್ಕು ಕಾಯಿದೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸದ ತೆಲಂಗಾಣ, ಪಂಜಾಬ್ ರಾಜ್ಯ ಸರ್ಕಾರಗಳು ಹಾಗೂ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ನಡೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ [ಮುಹಮ್ಮದ್ ಇಮ್ರಾನ್ ಅಹ್ಮದ್ ಮತ್ತು ಭಾರತ ಒಕ್ಕೂಟ ಸರ್ಕಾರ ನಡುವಣ ಪ್ರಕರಣ].

ಕೇಂದ್ರಾಡಳಿತ ಪ್ರದೇಶ ಮತ್ತು ಎರಡು ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸದೆ ಇರುವುದು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.

Also Read
ಅಲ್ಪಸಂಖ್ಯಾತ ಸಂಸ್ಥೆಗಳು ಆರ್‌ಟಿಇ ಕೋಟಾದಡಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತಿಲ್ಲ: ಬಾಂಬೆ ಹೈಕೋರ್ಟ್

"ನೋಟಿಸ್ ಜಾರಿಯಾಗಿದ್ದರೂ, ಮೂರು ರಾಜ್ಯಗಳಾದ ತೆಲಂಗಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಪರವಾಗಿ ಯಾರೂ ಹಾಜರಾಗಿಲ್ಲ. ಅವರು ಯಾವುದೇ ಪ್ರತಿಕ್ರಿಯೆಯನ್ನಾಗಲೀ ಅಥವಾ ಪ್ರತಿ ಅಫಿಡವಿಟನ್ನಾಗಲೀ ಸಲ್ಲಿಸಿಲ್ಲ. ಉಳಿದ ರಾಜ್ಯಗಳು ಈಗಾಗಲೇ ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದರೂ ಇವು ಕನಿಷ್ಠ ಉತ್ತರವನ್ನೂ ನೀಡಿಲ್ಲ. ಈ ಮೂರು ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸದ ಕಾರಣ ಪ್ರಕರಣ ವಿಳಂಬವಾಗುತ್ತಿದೆ" ಎಂದು ನ್ಯಾಯಾಲಯ ಸಿಡಿಮಿಡಿಗೊಂಡಿತು.

ಮುಂದಿನ ವಿಚಾರಣೆಯ ವೇಳೆಗೆ ಯಾವುದೇ ಪ್ರತಿಕ್ರಿಯೆ ಸಲ್ಲಿಸದಿದ್ದರೆ, ಆಯಾ ರಾಜ್ಯಗಳು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಖುದ್ದು ಹಾಜರಿರಬೇಕಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿತು.

Also Read
ಆರ್‌ಟಿಇ ಅಂಶಗಳು ವಸತಿ ಶಾಲೆಗಳಿಗೂ ಅನ್ವಯ: ಕರ್ನಾಟಕ ಹೈಕೋರ್ಟ್‌

ವಕೀಲ ಆಯುಷ್ ನೇಗಿ ಅವರ ಮೂಲಕ ಮೊಹಮದ್‌ ಇಮ್ರಾನ್ ಅಹ್ಮದ್ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ, ಅಲ್ಪಸಂಖ್ಯಾತವಲ್ಲದ ಖಾಸಗಿ ಅನುದಾನರಹಿತ ಶಾಲೆಗಳು ತಮ್ಮ ಆರಂಭಿಕ ಹಂತದ ಸೀಟುಗಳಲ್ಲಿ ಕನಿಷ್ಠ ಶೇ.25ರಷ್ಟನ್ನು ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳಿಗೆ ಮೀಸಲಿಡಬೇಕೆಂದು ಆದೇಶಿಸುವ ಆರ್‌ಟಿಇ ಕಾಯಿದೆಯ ಸೆಕ್ಷನ್ 12(1) ಸಿಯನ್ನು ಜಾರಿಗೊಳಿಸುವಂತೆ ಕೋರಲಾಗಿತ್ತು.

ಫೆಬ್ರವರಿ 2023ರಲ್ಲಿ ನ್ಯಾಯಾಲಯ ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Md_Imran_Ahmad_v__Union_of_India
Preview
Kannada Bar & Bench
kannada.barandbench.com