
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎನ್ನುವ ಜಿಜ್ಞಾಸೆಯ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಡಿರುವ ಶಿಫಾರಸ್ಸಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಮುಕ್ತಾಯಗೊಳಿಸಿದೆ .
ಆಗಸ್ಟ್ 19 ರಿಂದ 10 ದಿನಗಳ ಕಾಲ ಸುದೀರ್ಘವಾಗಿ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್ ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠ ವಿಚಾರಣೆ ಮುಕ್ತಾಯಗೊಳಿಸಿದ್ದು. ರಾಜ್ಯಪಾಲರ ನಿಷ್ಕ್ರಿಯತೆಗೆ ನ್ಯಾಯಾಂಗ ಸುಮ್ಮನಿರಬೇಕೆ ಎಂದು ಪ್ರಶ್ನಿಸಿತು.
ಸಿಜೆಐ ಗವಾಯಿ ಅವರು ನವೆಂಬರ್ 23ರಂದು ನಿವೃತ್ತರಾಗುವ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳೊಳಗೆ ನ್ಯಾಯಾಲಯ ರಾಷ್ಟ್ರಪತಿಯವರ ಶಿಫಾರಸ್ಸಿನ ಕುರಿತು ತನ್ನ ಅಭಿಪ್ರಾಯ ನೀಡುವ ಸಾಧ್ಯತೆಯಿದೆ.
ವಿಚಾರಣೆಯ ವೇಳೆ, ಸಿಜೆಐ ಗವಾಯಿ ಅವರು ಅಧಿಕಾರ ಪ್ರತ್ಯೇಕತೆಯ ಮಹತ್ವವನ್ನು ಒತ್ತಿಹೇಳಿದರು. ನಾಯಾಂಗ ಕ್ರಿಯಾಶೀಲತೆಯು ಮುಖ್ಯವಾದರೂ ಅದು ನ್ಯಾಯಾಂಗ ದುಸ್ಸಾಹಸವಾಗಿ ಬದಲಾಗಬಾರದು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಪ್ರಜಾಪ್ರಭುತ್ವದ ಒಂದು ಅಂಗ ಕರ್ತವ್ಯ ನಿರ್ವಹಿಸದೆ ಹೋದಾಗ ಸಂವಿಧಾನದ ರಕ್ಷಕನಾಗಿರುವ ನ್ಯಾಯಾಲಯ ಕೈಕಟ್ಟಿ ಕುಳಿತುಕೊಳ್ಳಬೇಕೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಇದಕ್ಕೆ ಪ್ರತಿಕ್ರಿಯಿಸಿ, ಕಾರ್ಯಾಂಗ ಮತ್ತು ಶಾಸಕಾಂಗ ಕೂಡ ಸಂವಿಧಾನದ ರಕ್ಷಕರೇ ಆಗಿವೆ.̤ ರಾಜ್ಯಪಾಲರಿಗೆ ಸಂಬಂಧಿಸಿದ ಮಸೂದೆಗೆ ಅಂಕಿತ ಹಾಕುವ ವಿಚಾರದಲ್ಲಿ ನ್ಯಾಯಾಲಯ ಆಜ್ಞೆ ನೀಡುವುದು ಅಧಿಕಾರ ಪ್ರತ್ಯೇಕತೆ ತತ್ವಕ್ಕೆ ವಿರುದ್ಧವಾದದು ಎಂದರು.
ನ್ಯಾಯಾಲಯ ಪ್ರಕರಣ ಹೇಗೆ ನಿರ್ಧರಿಸುತ್ತದೆ ಎಂಬುದರ ಆಧಾರದ ಮೇಲೆ ದೇಶ ಹೇಗೆ ಆಡಳಿತ ನಡೆಸುತ್ತದೆ ಎಂಬುದು ತಿಳಿಯುತ್ತದೆ ಎಂದು ಅವರು ಹೇಳಿದರು. ಮಸೂದೆಗಳಿಗೆ ಅದರಲ್ಲಿಯೂ ಅಸಾಂವಿಧಾನಿಕವಾದ ಮಸೂದೆಗಳಿಗೆ ಅಸಮ್ಮತಿ ಸೂಚಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಉದಾಹರಣೆಗೆ ರಾಜ್ಯವೊಂದು ತಾನು ಭಾರತದ ಒಕ್ಕೂಟದ ಭಾಗವಲ್ಲ ಎಂದು ಮಸೂದೆ ಅಂಗೀಕರಿಸಿದರೆ ಅದಕ್ಕೆ ರಾಜ್ಯಪಾಲರು ಅಸಮ್ಮತಿ ಸೂಚಿಸುವುದು ಅವರಿಗಿರುವ ಏಕೈಕ ಆಯ್ಕೆ ಎಂದರು.
ಈ ವೇಳೆ ವಾದ ಮಂಡಿಸಿದ ಅಟಾರ್ನಿ ಜನರಲ್ ವೆಂಕಟರಮಣಿ ಅವರು ಸಂವಿಧಾನದ 200ನೇ ವಿಧಿಯಡಿ (ರಾಜ್ಯಪಾಲರು ಹೊಂದಿರುವ ಅಂಕಿತ ಹಾಕುವ, ಹಾಕದೆ ಇರುವ ಹಾಗೂ ರಾಷ್ಟ್ರಪತಿಯವರ ಪರಾಮರ್ಶನೆಗೆ ಕಳಿಸುವ ಅಧಿಕಾರ) ರಾಜ್ಯಪಾಲರಿಗೆ ಸ್ವತಂತ್ರ ಪರಾಮರ್ಶನಾ ಅಧಿಕಾರ ಇದೆ ಎಂದರು. ಇದು ಹಕ್ಕಿಗೆ ಸಂಬಂಧಿಸಿದ ಪ್ರಶ್ನೆಯಲ್ಲ ಬದಲಿಗೆ ಸಂವಿಧಾನದ ರಾಚನಿಕ ವಿನ್ಯಾಸಕ್ಕೆ ಸಂಬಂಧಿಸಿದ ವಿಷಯವಾಗಿದೆ. 200ನೇ ವಿಧಿ ಮೇಲೆ ನಿಯಂತ್ರಣ ವಿಧಿಸುವುದು ಸಮಂಜಸವಲ್ಲ ಎಂದರು.