ಪಿಎಂಎಲ್ಎ ಎತ್ತಿ ಹಿಡಿದಿದ್ದ ತೀರ್ಪಿನ ಮರುಪರಿಶೀಲನೆ: ವಿಚಾರಣೆಗೆ ಪೀಠ ರಚಿಸಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 18ರಿಂದ ವಿಚಾರಣೆ ನಡೆಸಲಿದೆ.
Justices sanjay Kishan Kaul, Sanjiv Khanna, and Bela M Trivedi
Justices sanjay Kishan Kaul, Sanjiv Khanna, and Bela M Trivedi

ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ನಿಬಂಧನೆಗಳ ಸಿಂಧುತ್ವವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ಜುಲೈ 2022ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಲು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಹಾಗೂ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ಸರ್ವೋಚ್ಚ ನ್ಯಾಯಾಲಯ ರಚಿಸಿದೆ. ಪೀಠ  ಅಕ್ಟೋಬರ್ 18 ರಿಂದ ವಿಚಾರಣೆ ಆರಂಭಿಸಲಿದೆ.

ಭಾರತ್ ರಾಷ್ಟ್ರ ಸಮಿತಿ ನಾಯಕಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ.ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ಗೆ ಸಂಬಂಧಿಸಿದ ಪ್ರಕರಣವನ್ನು ಮುಂದೂಡುವ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಮಂಗಳವಾರ ಈ ವಿಚಾರ ತಿಳಿಸಿತು.

Also Read
ಧಾರ್ಮಿಕ ಗ್ರಂಥಗಳಿಗೆ ಹಕ್ಕುಸ್ವಾಮ್ಯ ಇಲ್ಲ, ಆದರೆ ಅವುಗಳನ್ನು ಆಧರಿಸಿದ ಕೃತಿಗಳಿಗೆ ಅದು ಅನ್ವಯ: ದೆಹಲಿ ಹೈಕೋರ್ಟ್

ಅಕ್ರಮ ಹಣ ವರ್ಗಾವಣೆ ಆರೋಪಿಗಳಿಗೆ ಜಾಮೀನು ನೀಡಲು ವಿಧಿಸಲಾಗಿದ್ದ ಎರಡು ಹೆಚ್ಚುವರಿ ಷರತ್ತುಗಳಿಗೆ ಸೀಮಿತವಾಗಿ ಪಿಎಂಎಲ್‌ಎ ಸೆಕ್ಷನ್ 45 (1) ಅನ್ನು ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠ ನವೆಂಬರ್ 2017ರಲ್ಲಿ ರದ್ದುಗೊಳಿಸಿತ್ತು. ಆ ಷರತ್ತುಗಳು ಹೇಗೆ ನಿಚ್ಚಳವಾಗಿ ಅನಿಯಂತ್ರಿತವೂ ಹಾಗೂ ತಾರತಮ್ಯದಿಂದ ಕೂಡಿರುವಂತಹವಾಗಿವೆ ಎಂಬುದನ್ನು ವಿವರಿಸಲು ಸುಪ್ರೀಂ ಕೋರ್ಟ್ ನಂತರ ವಿವಿಧ ವಿವರಣೆಗಳನ್ನು ನೀಡಿತ್ತು.

ಆದರೆ  ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಪೀಠ ಜುಲೈ 2022ರಲ್ಲಿ ಈ ತೀರ್ಪು ರದ್ದುಗೊಳಿಸಿತ್ತು.

ತೀರ್ಪಿನಲ್ಲಿ, ಸೆಕ್ಷನ್ 3 (ಹಣ ವರ್ಗಾವಣೆ ವ್ಯಾಖ್ಯಾನ), 5 (ಆಸ್ತಿ ಮುಟ್ಟುಗೋಲು), 8(4) (ಮುಟ್ಟುಗೋಲು ಮಾಡಿಕೊಂಡ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು), 17 (ಶೋಧ ಮತ್ತು ವಶ), 18 (ವ್ಯಕ್ತಿಗಳ ಹುಡುಕಾಟ), 19 (ಬಂಧನದ ಅಧಿಕಾರಗಳು), 24 (ಮುಗ್ಧತೆಯನ್ನು ನಿರೂಪಿಸುವ ಹೊಣೆಯನ್ನು ಆರೋಪಿಗೇ ಹೊರಿಸಿರುವುದು, 44 (ವಿಶೇಷ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಅಪರಾಧಗಳು), 45 (ಸಂಜ್ಞೇಯ ಮತ್ತು ಜಾಮೀನು ರಹಿತ ಹಾಗೂ ಜಾಮೀನು ನೀಡಲು ನ್ಯಾಯಾಲಯ ವಿಧಿಸುವ ಅವಳಿ ಷರತ್ತುಗಳಿಗೆ ಒಳಪಡುವ ಅಪರಾಧಗಳು) ಹಾಗೂ 50 (ಇ ಡಿ ಅಧಿಕಾರಿಗಳಿಗೆ ನೀಡಿದ ಹೇಳಿಕೆಗಳು) ಸೇರಿದಂತೆ ಕಾಯಿದೆಯ ವಿವಿಧ ನಿಬಂಧನೆಗಳ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿತ್ತು.

Also Read
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಇಸಿಐಆರ್ ಆಂತರಿಕ ದಾಖಲೆಯಾಗಿದ್ದು ಅದನ್ನು ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್) ಸಮೀಕರಿಸಲಾಗದ ಕಾರಣ ಪಿಎಂಎಲ್‌ಎ ಪ್ರಕ್ರಿಯೆಗಳ ಅಡಿಯಲ್ಲಿ ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ಪೂರೈಕೆ ಕಡ್ಡಾಯವಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಇದಲ್ಲದೆ, ನಿಗದಿತ ಅಪರಾಧಗಳಿಗೆ ಸಂಬಂಧಿಸಿದಂತೆ ಪಿಎಂಎಲ್‌ಎ ಕಾಯಿದೆಯ ಅಡಿಯಲ್ಲಿ ಅಪರಾಧದ ಗುರುತ್ವಕ್ಕೆ ಅನುಸಾರ ಶಿಕ್ಷೆಯನ್ನು ನೀಡಬೇಕು ಎನ್ನುವ ವಾದವನ್ನು ಅದು ಸಂಪೂರ್ಣವಾಗಿ "ಆಧಾರರಹಿತ" ಎಂದು ತಿರಸ್ಕರಿಸಿತ್ತು.

Also Read
ಪಿಎಂಎಲ್‌ಎ ತೀರ್ಪು: ಎರಡು ವಿಷಯಗಳ ಕುರಿತಂತೆ ಮರುಪರಿಶೀಲನೆ ಅಗತ್ಯವೆಂದ ಸುಪ್ರೀಂಕೋರ್ಟ್‌; ಕೇಂದ್ರಕ್ಕೆ ನೋಟಿಸ್

2022 ರ ತೀರ್ಪಿಗೆ ಟೀಕೆಗಳು ವ್ಯಕ್ತವಾಗಿ ಹಲವು ಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು ಮಾರ್ಚ್‌ನಲ್ಲಿ ಈ ತೀರ್ಪು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದ್ದರು. ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತೀಯ ಅಪರಾಧಿಕ ನ್ಯಾಯಶಾಸ್ತ್ರದಲ್ಲಿ, ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಆರೋಪಿಗಳು ತಪ್ಪಿತಸ್ಥರಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ವಿಜಯ್ ಮದನ್‌ಲಾಲ್ ಪ್ರಕರಣದ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಈ ವರ್ಷದ ಮಾರ್ಚ್‌ನಲ್ಲಿ, ನ್ಯಾಯಮೂರ್ತಿ ಕೌಲ್ ನೇತೃತ್ವದ ಪೀಠವು ಪಿಎಂಎಲ್‌ಎಯ ಸೆಕ್ಷನ್ 50 ಮತ್ತು 63 ರ ಸಿಂಧುತ್ವವನ್ನು ಪ್ರಶ್ನಿಸುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆಯನ್ನು ಕೋರಿತ್ತು.

ಪಿಎಂಎಲ್‌ಎಯ ಸೆಕ್ಷನ್ 50 ಸಮನ್ಸ್, ದಾಖಲೆಗಳ ತಯಾರಿ, ಪುರಾವೆ ಒದಗಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ಅಧಿಕಾರಗಳೊಂದಿಗೆ ವ್ಯವಹರಿಸುತ್ತದೆ. ಸೆಕ್ಷನ್ 63 ಸುಳ್ಳು ಮಾಹಿತಿಯನ್ನು ಒದಗಿಸುವ ಅಥವಾ ಮಾಹಿತಿ ನೀಡಲು ವಿಫಲವಾದ ಶಿಕ್ಷೆಗೆ ಸಂಬಂಧಿಸಿದ್ದಾಗಿದೆ.

Kannada Bar & Bench
kannada.barandbench.com