ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್: ಎಲ್ಲಾ ರಾಜ್ಯಗಳಲ್ಲಿ ಏಕರೂಪ ನೀತಿ ಜಾರಿಗೆ ಸುಪ್ರೀಂ ಕೋರ್ಟ್ ಸೂಚನೆ

ಬಾಲಕಿಯರಿಗೆ ಶೌಚಾಲಯಗಳ ಲಭ್ಯತೆ ಮತ್ತು ಶಾಲೆಗಳಲ್ಲಿ ಋತುಸ್ರಾವ ನೈರ್ಮಲ್ಯ ಉತ್ಪನ್ನ, ನೈರ್ಮಲ್ಯ ಪ್ಯಾಡ್‌ಗಳ ಪೂರೈಕೆ ಕುರಿತು ವಿವರ ನೀಡುವಂತೆಯೂ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ಕೇಳಿದೆ.
Supreme Court and Menstrual Hygiene
Supreme Court and Menstrual Hygiene
Published on

ವಿದ್ಯಾರ್ಥಿನಿಯರಿಗೆ ಉಚಿತ ಋತುಸ್ರಾವ ಪ್ಯಾಡ್‌ ವಿತರಿಸುವುದು ಸೇರಿದಂತೆ ಋತುಸ್ರಾವ ನೈರ್ಮಲ್ಯದ ಬಗ್ಗೆ ಏಕರೂಪ ರಾಷ್ಟ್ರೀಯ ನೀತಿ ಜಾರಿಗೆ ತರಲು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ  [ಡಾ. ಜಯಾ ಠಾಕೂರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯಗಳ ಲಭ್ಯತೆ ಮತ್ತು ಋತುಸ್ರಾವ ಉತ್ಪನ್ನ/ಸ್ಯಾನಿಟರಿ ಪ್ಯಾಡ್‌ಗಳ ಪೂರೈಕೆ ಕುರಿತು ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಸೂಚಿಸಿದೆ.

Also Read
ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ನ್ಯಾಯಾಲಯವು ತನ್ನ ಆದೇಶದಲ್ಲಿ, "ಏಕರೂಪದ ರಾಷ್ಟ್ರೀಯ ನೀತಿ ಜಾರಿಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ತೊಡಗಿಕೊಳ್ಳಬೇಕು. ಇದರಿಂದಾಗಿ ರಾಜ್ಯಗಳು ಹೊಂದಾಣಿಕೆ ಮೂಲಕ ನೀತಿ ಜಾರಿಗೆ ತರಲು ಸಾಧ್ಯವಾಗುತ್ತದೆ. ಸಮಸ್ಯೆಯ ಗಹನತೆ ಗಮನಿಸಿ ನಾಲ್ಕು ವಾರಗಳಲ್ಲಿ ತಮ್ಮದೇ ನಿಧಿ ಬಳಸಿ ಅಳವಡಿಸಿಕೊಂಡಿರುವ ನೈರ್ಮಲ್ಯ ನೀತಿಗಳ ಕುರಿತಾದ ಮಾಹಿತಿಯನ್ನು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕು ಎಂದು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುತ್ತಿದ್ದೇವೆ" ಎಂದು ನ್ಯಾಯಾಲಯ ಆದೇಶಿಸಿತು.

Also Read
ಋತುಸ್ರಾವ ನೈರ್ಮಲ್ಯದ ಯೋಜನೆಗಳನ್ನು ರಾಜ್ಯಗಳು ಜಾರಿಗೊಳಿಸಬೇಕೆ ವಿನಾ ತಾನಲ್ಲ ಎಂದ ಕೇಂದ್ರ

ರಾಜ್ಯ ಸರ್ಕಾರಗಳು ಅಸ್ತಿತ್ವದಲ್ಲಿರುವ ನೀತಿಗಳ ವಿವರ ನೀಡಿದರೆ ದೇಶದೆಲ್ಲೆಡೆ ಅನ್ವಯವಾಗುವಂತಹ ಸಾಮಾನ್ಯ ಮಾದರಿ ಜಾರಿಗೆ ತರಲು ಕೇಂದ್ರಕ್ಕೆ ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಪೀಠಕ್ಕೆ ತಿಳಿಸಿದರು.

6ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಪ್ರತಿ ಹೆಣ್ಣು ಮಗುವಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ಒದಗಿಸಲು ಮತ್ತು ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ಬಾಲಕಿಯರ ಶೌಚಾಲಯ ಸೌಲಭ್ಯ ಒದಗಿಸುವಂತೆ ಕೇಂದ್ರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com