ಪ್ಯಾಲೆಸ್ತೀನ್ ಜೊತೆ ಸಂಘರ್ಷ ನಿರತ ಇಸ್ರೇಲ್‌ಗೆ ಭಾರತೀಯ ಕಂಪನಿಗಳು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಮುಂದುವರಿಸುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ವಿದೇಶಾಂಗ ನೀತಿ ವಿಚಾರಗಳಲ್ಲಿ ಮಧ್ಯಪ್ರವೇಶಿಸುವ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅಂತಹ ನಿರ್ಧಾರಗಳು ರೂಢಿಯಂತೆ ಸರ್ಕಾರದ ವ್ಯಾಪ್ತಿಗೆ ಬರುತ್ತವೆ ಎಂದಿತು.
ಇಸ್ರೇಲ್ ಕ್ರಮಗಳನ್ನು ನರಮೇಧ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನಿರ್ದಿಷ್ಟವಾಗಿ ಹೇಳಿಲ್ಲ. ಹೀಗಿರುವಾಗ ತನ್ನ ಯಾವುದೇ ಅವಲೋಕನಗಳು ಭಾರತ ಸರ್ಕಾರದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಹುದು ಎಂದು ಪೀಠ ಹೇಳಿದೆ.
ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ಮಾಡುತ್ತಿರುವ ದೇಶದ ವಿವಿಧ ಕಂಪೆನಿಗಳ ಪರವಾನಗಿ ರದ್ದುಗೊಳಿಸದಂತೆ ಮತ್ತು ಹೊಸದಾಗಿ ಪರವಾನಗಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ಮಾಜಿ ಅಧಿಕಾರಿಗಳು, ಹಿರಿಯ ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು ಅರ್ಜಿ ಸಲ್ಲಿಸಿದ್ದರು.
ಶಸ್ತ್ರಾಸ್ತ್ರ ಪೂರೈಕೆ ಅಂತಾರಾಷ್ಟ್ರೀಯ ಕಾನೂನು ಮತ್ತು ಸಾಂವಿಧಾನಿಕ ಆದೇಶದ ಉಲ್ಲಂಘನೆ ಮತ್ತು ನೈತಿಕವಲ್ಲದ ಆತ್ಮಸಾಕ್ಷಿಗೆ ವಿರುದ್ಧವಾದದ್ದು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಇಸ್ರೇಲ್ ಕ್ರಮ ಖಂಡಿಸಿ ಐಸಿಜೆ ಮತ್ತು ವಿಶ್ವಸಂಸ್ಥೆ ತೀರ್ಪು ನೀಡಿದ್ದು ಇಸ್ರೇಲ್‌ಗೆ ಭಾರತದ ಶಸ್ತ್ರಾಸ್ತ್ರ ಪೂರೈಕೆ ಈ ತೀರ್ಪುಗಳ ಉಲ್ಲಂಘನೆಯಾಗುತ್ತದೆ ಎಂದರು.
ಆದರೆ, ಅಂತಾರಾಷ್ಟ್ರೀಯ ಕಾನೂನನ್ನು ರಾಷ್ಟ್ರೀಯ ಕಾನೂನಿನ ಭಾಗವೆಂದು ಭಾವಿಸಲಾಗಿದ್ದರೂ, ಈ ಸಂದರ್ಭದಲ್ಲಿ ಅದನ್ನು ಅನ್ವಯಿಸಲು ಶಾಸನಾತ್ಮಕ ಕ್ರಮದ ಅಗತ್ಯವಿರುತ್ತದೆ, ಅದನ್ನು ಭಾರತದ ಸಂಸತ್ತು ಕೈಗೊಂಡಿಲ್ಲ. ಅಲ್ಲದೆ ನರಮೇಧಕ್ಕೆ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದೆ ಎಂಬುದು ಅರ್ಜಿದಾರರ ಊಹೆಯಾಗಿದೆ ಎಂದು ನ್ಯಾಯಾಲಯ ಹೇಳಿತು.
ಅಂತಾರಾಷ್ಟ್ರೀಯ ಮಾನವ ಹಕ್ಕುಗಳಿಗೆ ಅನುಗುಣವಾಗಿ ಭಾರತೀಯ ಕಾನೂನುಗಳನ್ನು ವ್ಯಾಖ್ಯಾನಿಸುವುದು ನ್ಯಾಯಾಲಯದ ಸಾಂವಿಧಾನಿಕ ಕರ್ತವ್ಯ ಎಂಬ ಪ್ರಶಾಂತ್ ಭೂಷಣ್ ಅವರ ವಾದವನ್ನು ನ್ಯಾಯಾಲಯ ಮನ್ನಿಸಲಿಲ್ಲ. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.