ದೇವಾಲಯಗಳ ಪ್ರಸಾದದ ಗುಣಮಟ್ಟ ನಿಯಂತ್ರಣ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅರ್ಜಿದಾರರು ಆಹಾರ ಸುರಕ್ಷತಾ ಕಾಯಿದೆ ಅಡಿ ಒದಗಿಸಲಾದ ಪರಿಹಾರ ಪಡೆದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿತು.
Supreme Court
Supreme Court
Published on

ದೇವಸ್ಥಾನಗಳಲ್ಲಿ ಸುರಕ್ಷಿತ ಗುಣಮಟ್ಟದ ಪ್ರಸಾದ ಒದಗಿಸುವುದಕ್ಕಾಗಿ ದೇಶವ್ಯಾಪ್ತಿ ನಿಯಮ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ [ ಪ್ರೀತಿ ಹರಿಹರ ಮಹಾಪಾತ್ರ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

ಅರ್ಜಿದಾರರು ಆಹಾರ ಸುರಕ್ಷತಾ ಕಾಯಿದೆ ಅಡಿ ಒದಗಿಸಲಾದ ಪರಿಹಾರ ಪಡೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ. ಆಹಾರ ಸುರಕ್ಷತಾ ಕಾಯಿದೆಯಡಿ ನಿಯಮಗಳಿದ್ದು, ಕಾಯಿದೆ ಮೂಲಕ ಕ್ರಮ ಕೈಗೊಳ್ಳುವಂತೆ ಅದು ಸಲಹೆ ನೀಡಿತು.

Also Read
ತಿರುಪತಿ ಲಡ್ಡು ವಿವಾದ: ಸುಪ್ರೀಂ ಕೋರ್ಟ್‌ಗೆ ಸುಬ್ರಮಣಿಯನ್ ಸ್ವಾಮಿ ಹಾಗೂ ವೈಎಸ್‌ಆರ್‌ಸಿ ಸಂಸದ ಪ್ರತ್ಯೇಕ ಅರ್ಜಿ

ನ್ಯಾಯಾಂಗವೇ ಕಾರ್ಯೋನ್ಮುಖವಾಗುವ ಬದಲು ಸರ್ಕಾರದ ಕಾರ್ಯಾಂಗ ತನ್ನ ವ್ಯಾಪ್ತಿಯಲ್ಲಿ ಇಂತಹ ವಿಚಾರವಾಗಿ ಕೆಲಸ ಮಾಡಲು ಅವಕಾಶ ನೀಡಬೇಕಿದೆ ಎಂದು ನ್ಯಾಯಾಲಯ ಸಂಕ್ಷಿಪ್ತವಾಗಿ ಉಲ್ಲೇಖಿಸಿದೆ.

 ಈ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನದ ಮಿತಿಯಲ್ಲಿ ಕೆಲಸ ಮಾಡಲು ಪ್ರಯತ್ನಿಸಿರುವುದಾಗಿ ಹೇಳಿದ್ದನ್ನು ಪೀಠ ಉಲ್ಲೇಖಿಸಿತು. "ನವೆಂಬರ್ 26 ರಂದು, ನಮ್ಮ ಪ್ರಧಾನ ಮಂತ್ರಿಗಳು ಕಾರ್ಯಾಂಗದ ಮಿತಿಯೊಳಗೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು. ನಾವು ಹೇಳಬೇಕಾದದ್ದು ಇಷ್ಟೇ ಎಂದು ನಾನು ಭಾವಿಸುತ್ತೇನೆ " ಎಂದು ನ್ಯಾಯಮೂರ್ತಿ ಗವಾಯಿ ಮೌಖಿಕವಾಗಿ ತಿಳಿಸಿದರು.

ಇಂದು ಅರ್ಜಿದಾರರ ಪರ ಹಿರಿಯ ವಕೀಲ ದಾಮಾ ಎಸ್ ನಾಯ್ಡು ವಾದ ಮಂಡಿಸಿ , ದೇವಸ್ಥಾನಗಳಲ್ಲಿ ಪ್ರಸಾದವನ್ನು ತಪಾಸಣೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲು ಅರ್ಜಿದಾರರು ಮುಂದಾಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. "ಇದು ಪ್ರಚೋದಿತ ಪಿಐಎಲ್ ಅಲ್ಲ. ದೇವಾಲಯಗಳ ತಪ್ಪಿಲ್ಲ, ಆದರೆ ಇದನ್ನು ನಿಯಂತ್ರಿಸಲು ಕೆಲ ನಿಯಮಗಳು ಇರಬೇಕು" ಎಂದು ನಾಯ್ಡು ಹೇಳಿದರು.

Also Read
ತಿರುಪತಿ ಲಡ್ಡು ವಿವಾದ: ಇನ್ನೂ ಖಚಿತ ಪುರಾವೆ ದೊರೆತಿಲ್ಲ ಎಂದ ಸುಪ್ರೀಂ; ನಾಯ್ಡುಗೆ ಚಾಟಿ ಬೀಸಿದ ಪೀಠ

ಆಹಾರ ಸುರಕ್ಷತಾ ಕಾಯಿದೆಯಡಿಯಲ್ಲಿ ಇಂತಹ ಸೆಕ್ಷನ್‌ಗಳು ಈಗಾಗಲೇ ಜಾರಿಯಲ್ಲಿವೆ ಎಂದು ನ್ಯಾಯಾಲಯ ಈ ಹಂತದಲ್ಲಿ ವಿವರಿಸಿತು. ದೇಶವ್ಯಾಪಿ ನಿಯಮ ಜಾರಿಗೆ ತರುವ ಅಗತ್ಯವಿದೆ ಎಂದು ನಾಯ್ಡು ಅವರು ಹೇಳಿದಾಗ ಅದರಿಂದ ತೃಪ್ತಿಯಾಗದ ನ್ಯಾಯಾಲಯ ಪರ್ಯಾಯ ಪರಿಹಾರ ಪಡೆಯುವಂತೆ ಅರ್ಜಿದಾರರಿಗೆ ಸೂಚಿಸಿತು.

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ವಿವಾದಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಈಚೆಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಿರುಪತಿ ಲಡ್ಡು ವಿವಾದ ಕುರಿತಾದ ಪ್ರಕರಣದಲ್ಲಿ ಬಿಜೆಪಿ ಹಿರಿಯ ಮುಖಂಡ ಡಾ. ಸುಬ್ರಮಣಿಯನ್‌ ಸ್ವಾಮಿ, ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ಮತ್ತು ತಿರುಮಲ ತಿರುಪತಿ ದೇವಸ್ಥಾನಂನ ಮಾಜಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ, ಇತಿಹಾಸಕಾರ ವಿಕ್ರಮ್ ಸಂಪತ್, ವೈದಿಕ ವಾಗ್ಮಿ ದುಷ್ಯಂತ್ ಶ್ರೀಧರ್ ಮತ್ತು ಸುದರ್ಶನ ಸುದ್ದಿ ನಿರೂಪಕ ಸುರೇಶ್ ಚವ್ಹಾಂಕೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com