Supreme Court and Anti-Corruption Bureau ADGP Seemanth Kumar Singh
Supreme Court and Anti-Corruption Bureau ADGP Seemanth Kumar SinghTwitter

ಐಪಿಎಸ್‌ ಅಧಿಕಾರಿ ಸೀಮಂತ್‌ ಕುಮಾರ್‌ ಸಿಂಗ್‌ ವಿರುದ್ಧದ ಅಭಿಪ್ರಾಯ ಕೈಬಿಟ್ಟ ಸುಪ್ರೀಂ ಕೋರ್ಟ್‌

ನ್ಯಾಯಾಂಗ ವ್ಯವಸ್ಥೆಯಲ್ಲಿನ ಅಭೂತಪೂರ್ವ ಪಾರದರ್ಶಕತೆಯು ಅದರೊಂದಿಗೆ ಹೆಚ್ಚಿನ ಪ್ರಯೋಜನಗಳನ್ನು ತರುತ್ತದೆಯಾದರೂ ಇದು ನ್ಯಾಯಮೂರ್ತಿಗಳ ಮೇಲೆ ಜವಾಬ್ದಾರಿಯ ಕಟ್ಟುನಿಟ್ಟಾದ ಮಾನದಂಡಗಳನ್ನು ಸಹ ವಿಧಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅಂದಿನ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಮತ್ತು ಅಂದಿನ ಬೆಂಗಳೂರು ನಗರದ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರ ವಿರುದ್ಧ ಕರ್ನಾಟಕ ಹೈಕೋರ್ಟ್‌ ದಾಖಲಿಸಿದ್ದ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್‌ ಈಚೆಗೆ ತೆಗೆದು ಹಾಕಿದೆ [ಸೀಮಂತ್‌ ಕುಮಾರ್‌ ಸಿಂಗ್‌ ವರ್ಸಸ್‌ ಮಹೇಶ್‌ ಪಿ ಎಸ್‌].

ಹಿರಿಯ ಐಪಿಎಸ್‌ ಅಧಿಕಾರಿ ಸೀಮಂತ್‌ ಕುಮಾರ್‌ ಸಿಂಗ್‌ ಮತ್ತು ಐಎಎಸ್‌ ಅಧಿಕಾರಿ ಜೆ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ಆದೇಶ ಮಾಡಿದ್ದಾರೆ.

“ನ್ಯಾಯಾಲಯದ ಪ್ರಕ್ರಿಯೆಯು ನೇರ ಪ್ರಸಾರವಾಗುತ್ತಿರುವುದರಿಂದ ವ್ಯಕ್ತಪಡಿಸಲಾಗದ ಅಭಿಪ್ರಾಯಗಳು ದೂರಗಾಮಿ ಪರಿಣಾಮ ಉಂಟು ಮಾಡಲಿದ್ದು, ಹಾಲಿ ಪ್ರಕರಣದಲ್ಲಿ ಅದನ್ನು ಕಾಣಬಹುದಾಗಿದೆ. ಇದು ಪ್ರಕರಣದಲ್ಲಿನ ಪಕ್ಷಕಾರರ ಘನತೆಗೆ ಗಂಭೀರ ಪರಿಣಾಮ ಉಂಟು ಮಾಡಬಹುದು. ಇಂಥ ಸಂದರ್ಭದಲ್ಲಿ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸುವಾಗ ನ್ಯಾಯಾಲಯಗಳು ಸಂಪೂರ್ಣವಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅಲ್ಲದೇ, ಅಭಿಪ್ರಾಯ ವ್ಯಕ್ತ ಮಾಡುವಾಗ ಸೂಕ್ತ ವೇದಿಕೆಯಲ್ಲಿ, ಸರಿಯಾದ ಸಂದರ್ಭದಲ್ಲಿ ಸಮರ್ಥನೆ ನೀಡಬೇಕಾಗುತ್ತದೆ. ಇದು ನ್ಯಾಯದಾನದ ದೃಷ್ಟಿಯಿಂದ ಅತ್ಯಗತ್ಯ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಂದುವರೆದು “…ಇಂಥ ಹೇಳಿಕೆಗಳು ಅವರ ಘನತೆಗೆ ಸಮಸ್ಯೆ ಉಂಟು ಮಾಡುವುದಲ್ಲದೇ ಅವರ ವಾಸ್ತವಿಕ ವಿಚಾರಣೆಗೆ ಪೂರ್ವಾಗ್ರಹ ಉಂಟು ಮಾಡುತ್ತವೆ…” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಸಾಕ್ಷ್ಯವನ್ನು ಇನ್ನೂ ಸಂಪೂರ್ಣವಾಗಿ ವಿಶ್ಲೇಷಣೆಗೆ ಒಳಪಡಿಸದೆ ಇರುವಾಗ, ಆರೋಪಿಯ ಪರವಾಗಿ ಮುಗ್ಧತೆಯ ಊಹೆಯು ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಅವರ ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ನ್ಯಾಯಾಲಯಗಳು ಅಗತ್ಯಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾದ ವ್ಯಕ್ತಿಯ ಪಾತ್ರವಿಲ್ಲದಿರುವಾಗ ಇದು ಮತ್ತಷ್ಟು ಮುಖ್ಯವಾಗುತ್ತದೆ. ಸಾಂವಿಧಾನಿಕ ನ್ಯಾಯಾಲಯಗಳು ಅಂಥ ಅಭಿಪ್ರಾಯ ವ್ಯಕ್ತಪಡಿಸಿದರೆ ಇದು ಉದ್ದೇಶಿಸಲಾದ ಪಕ್ಷಕಾರರ ಘನತೆಗೆ ಸರಿಪಡಿಸಲಾಗದಷ್ಟು ಸಮಸ್ಯೆ ಉಂಟು ಮಾಡುತ್ತದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿನ ಅಭೂತಪೂರ್ವ ಪಾರದರ್ಶಕತೆಯು ಅದರೊಂದಿಗೆ ಹೆಚ್ಚಿನ ಪ್ರಯೋಜನಗಳನ್ನು ತರುತ್ತದೆಯಾದರೂ ಇದು ನ್ಯಾಯಮೂರ್ತಿಗಳ ಮೇಲೆ ಜವಾಬ್ದಾರಿಯ ಕಟ್ಟುನಿಟ್ಟಾದ ಮಾನದಂಡಗಳನ್ನು ಸಹ ವಿಧಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ನೆಲೆಯಲ್ಲಿ ಮೇಲ್ಮನವಿದಾರರ ವಿರುದ್ಧ ಹೈಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ತೊಡೆದು ಹಾಕಿದ್ದಲ್ಲದೇ, ಮಧ್ಯಂತರ ಆದೇಶವನ್ನೂ ವಜಾ ಮಾಡಿತು.

ಕರ್ನಾಟಕ ಹೈಕೋರ್ಟ್‌ ನ್ಯಾ. ಸಂದೇಶ್‌ ಅವರು 2022ರ ಜುಲೈ 7ರ ತಮ್ಮ ಆದೇಶದಲ್ಲಿ ಎಸಿಬಿ ಹಾಗೂ ಅದರ ಮುಖ್ಯಸ್ಥರಾದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ವಿರುದ್ಧ ತಾವು ಮೌಖಿಕವಾಗಿ ಮಾಡಿದ್ದ ಅವಲೋಕನಗಳಿಗೆ ಕಾರಣಗಳನ್ನು ನೀಡಿದ್ದು, ಸಂಸ್ಥೆಯ ಒಳಿತಿಗೆ ಇವು ಪೂರಕವಾಗಿಲ್ಲ ಎಂದು ದಾಖಲಿಸಿದ್ದರು. ಇದನ್ನು ಆಕ್ಷೇಪಿಸಿ ಎಸಿಬಿಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಇದೇ ಪ್ರಕರಣದಲ್ಲಿ ತಮ್ಮ ವಿರುದ್ಧ ನ್ಯಾ. ಸಂದೇಶ್ ಅವರು ಮಾಡಿರುವ ಟೀಕೆಗಳನ್ನು ಕೈಬಿಡುವಂತೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Also Read
ನ್ಯಾ. ಸಂದೇಶ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಸಿಬಿ

ಐಎಎಸ್‌ ಅಧಿಕಾರಿ ಜೆ ಮಂಜುನಾಥ್‌ ಅವರೂ ತಮ್ಮ ವಿರುದ್ಧ ನ್ಯಾ. ಸಂದೇಶ್‌ ಅವರು ದಾಖಲಿಸಿರುವ ಅಂಶಗಳನ್ನು ಕೈಬಿಡಲು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಇವುಗಳ ವಿಚಾರಣೆ ನಡೆಸಿ, ನ್ಯಾಯಾಲಯವು ಆದೇಶ ಮಾಡಿದೆ.

Also Read
ಸಹೋದ್ಯೋಗಿ ನ್ಯಾಯಮೂರ್ತಿ ಬಳಿ ದೆಹಲಿ ವ್ಯಕ್ತಿಯಿಂದ ನನ್ನ ಮಾಹಿತಿ ಸಂಗ್ರಹ: ಆದೇಶದಲ್ಲಿ ದಾಖಲಿಸಿದ ನ್ಯಾ. ಸಂದೇಶ್‌

ನ್ಯಾ. ಸಂದೇಶ್‌ ಅವರು ತಮ್ಮ ಆದೇಶದಲ್ಲಿ, “ನನ್ನನ್ನೇ ವರ್ಗಾವಣೆ ಮಾಡುವ ಕುರಿತು ಬೆದರಿಕೆ ಹಾಕಲಾಗಿದೆ. ಎಸಿಬಿ ಎಡಿಜಿಪಿ ತುಂಬ ಪವರ್‌ಫುಲ್‌ ಆಗಿದ್ದಾರಂತೆ, ಓರ್ವ ವ್ಯಕ್ತಿ ಈ ವಿಚಾರವನ್ನು ನನ್ನ ಸಹೋದ್ಯೋಗಿ ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದಾರಂತೆ. ಅದನ್ನು ಆಧರಿಸಿ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಬೆದರಿಕೆಯ ಬಗ್ಗೆಯೂ ಆದೇಶದಲ್ಲಿ ಬರೆಯುತ್ತೇನೆ. ಯಾವುದೇ ರೀತಿಯ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲೂ ಸಿದ್ಧನಿದ್ದೇನೆ. ಯಾರ ಬಗ್ಗೆಯೂ ನನಗೆ ಭಯವಿಲ್ಲ” ಎಂದು ದಾಖಲಿಸಿದ್ದರು.

Also Read
ಹೈಕೋರ್ಟ್‌ ಆದೇಶದ ಯಾವ ಅಂಶಗಳನ್ನು ತೆಗೆದು ಹಾಕಲು ಬಂಧಿತ ಐಎಎಸ್‌ ಅಧಿಕಾರಿ ಮಂಜುನಾಥ್‌ ಸುಪ್ರೀಂ ಮುಂದೆ ಕೋರಿದ್ದಾರೆ?

ಅಲ್ಲದೇ, “ನ್ಯಾಯಮೂರ್ತಿ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ನನ್ನ ತಂದೆ ನನಗಾಗಿ ಮಾಡಿರುವ ಭೂಮಿ ಇದೆ. ಅದನ್ನು ಉಳುಮೆ ಮಾಡಿಕೊಂಡು ಬದುಕಲೂ ಸಿದ್ಧನಿದ್ದೇನೆ. ನನಗೆ 500 ರೂಪಾಯಿಯಲ್ಲಿ ಜೀವನ ನಡೆಸುವುದೂ ಗೊತ್ತು, 5 ಸಾವಿರ ರೂಪಾಯಿಯಲ್ಲಿ ಬದುಕುವುದಕ್ಕೂ ಗೊತ್ತು. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ, ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ದನಾಗಿಲ್ಲ. ಸಂವಿಧಾನಕ್ಕೆ ಮಾತ್ರ ನಾನು ಬದ್ಧನಾಗಿದ್ದೇನೆ” ಎಂದು ಕಟುವಾಗಿ ನುಡಿದಿದ್ದನ್ನು ಇಲ್ಲಿ ನೆನೆಯಬಹುದು.

Related Stories

No stories found.
Kannada Bar & Bench
kannada.barandbench.com