ಹಿರಿಯ ವಕೀಲರ ನೇಮಕಾತಿಯಲ್ಲಿನ ಸಮಸ್ಯೆ ಕುರಿತು ಬೆರಳು ಮಾಡಿದ ಸುಪ್ರೀಂ ಕೋರ್ಟ್; ಸಿಜೆಐ ಮುಂದೆ ಪ್ರಕರಣ

ಪ್ರಾಮಾಣಿಕತೆ ಕೊರತೆಯಿರುವ ಅಥವಾ ನ್ಯಾಯಸಮ್ಮತತೆಯ ಗುಣಮಟ್ಟವನ್ನು ಹೊಂದಿರದ ವಕೀಲರು ಹುದ್ದೆಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
Supreme Court
Supreme Court
Published on

ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸುವ ಪ್ರಸ್ತುತ ಪ್ರಕ್ರಿಯೆಯಲ್ಲಿನ ವಿವಿಧ ಲೋಪದೋಷಗಳತ್ತ ಸುಪ್ರೀಂ ಕೋರ್ಟ್ ಗುರುವಾರ ಬೆರಳು ಮಾಡಿದೆ.

ತಾನು ಎತ್ತಿರುವ ವಿಚಾರಗಳನ್ನು ನಿರ್ಧರಿಸಲು ವಿಸ್ತೃತ ಪೀಠ ರಚಿಸುವ ಅಗತ್ಯವಿದೆಯೇ ಎಂಬುದನ್ನು ಪರಿಗಣಿಸುವುದಕ್ಕಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರ ಮುಂದಿರಿಸಲು ಸೂಚಿಸಿತು.

Also Read
ಹಿರಿಯ ವಕೀಲರ ಹುದ್ದೆ ನೇಮಕಾತಿ ವೇಳೆ ಸ್ವಜನಪಕ್ಷಪಾತ ಆರೋಪ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

"ಇಂದಿರಾ ಜೈಸಿಂಗ್ ಪ್ರಕರಣದಲ್ಲಿ ನೀಡಲಾದ ಎರಡು ತೀರ್ಪುಗಳಿಗೆ ನಾವು ಅಗೌರವ ತೋರುತ್ತಿಲ್ಲ ಮತ್ತು ನಾವು ವ್ಯಕ್ತಪಡಿಸಿದ ಸಂದೇಹವನ್ನು ವಿಸ್ತೃತ ಪೀಠವು ಪರಿಗಣಿಸಬೇಕೇ ಎಂದು ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸಲು ಸಾಧ್ಯವಾಗುವಂತೆ ನಾವು ನಮ್ಮ ಕಳಕಳಿ ದಾಖಲಿಸುತ್ತಿದ್ದೇವೆ " ಎಂದು ನ್ಯಾಯಾಲಯ ಹೇಳಿದೆ.

ಯಾವುದೇ ವಕೀಲರು ಹುದ್ದೆಯನ್ನು ಕೋರುವಂತಿಲ್ಲ ಏಕೆಂದರೆ ಅದು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗಳು ವಕೀಲರ ಒಪ್ಪಿಗೆಯೊಂದಿಗೆ ನೀಡಬೇಕಾದ ಸವಲತ್ತು ಎಂದು ಪೀಠ ಹೇಳಿತು.

ನೂರು ಅಂಕಗಳಲ್ಲಿ 25 ಅಂಕಗಳನ್ನು ಸಂದರ್ಶನಗಳಿಗೆ ನಿಗದಿಪಡಿಸಲಾಗಿದೆ ಎಂಬುದನ್ನು ಗಮನಿಸಿದ ಪೀಠವು ಆದರೆ ಅಭ್ಯರ್ಥಿಯ ವ್ಯಕ್ತಿತ್ವ ಅಥವಾ ಸೂಕ್ತತೆಯನ್ನು ಪರೀಕ್ಷಿಸಲು ಕೆಲವು ನಿಮಿಷಗಳ ಸಂದರ್ಶನ ಸಾಕಾಗುತ್ತದೆಯೇ ಎಂಬ ಸಂದೇಹ ವ್ಯಕ್ತಪಡಿಸಿತು.

"ಶಾಶ್ವತ ಸಮಿತಿಯ ಕರ್ತವ್ಯವೆಂದರೆ ಸಂಬಂಧಪಟ್ಟ ವಕೀಲರ ಒಟ್ಟಾರೆ ಮೌಲ್ಯಮಾಪನವನ್ನು ಅಂಕ ಆಧಾರಿತ ಸೂತ್ರದ ಆಧಾರದ ಮೇಲೆ ನಿರ್ಧರಿಸಬೇಕು. ಒಟ್ಟಾರೆ ಮೌಲ್ಯಮಾಪನವನ್ನು ಮಾಡುವ ಯಾವುದೇ ವಿಧಾನವನ್ನು ಒದಗಿಸಲಾಗಿಲ್ಲ " ಎಂದು ಅದು ಹೇಳಿತು.

ಪ್ರಾಮಾಣಿಕತೆ ಕೊರತೆಯಿರುವ ಅಥವಾ ನ್ಯಾಯಸಮ್ಮತತೆಯ ಗುಣಮಟ್ಟವನ್ನು ಹೊಂದಿರದ ವಕೀಲರು ಹುದ್ದೆಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.

 "ಕಾರಣ ಸರಳವಾಗಿದೆ ಏಕೆಂದರೆ ಅಂತಹ ವಕೀಲರು ನ್ಯಾಯವಾದಿಗಳ ಸಮುದಾಯದಲ್ಲಿ ಯಾವುದೇ ಸ್ಥಾನಮಾನ ಹೊಂದಲು ಸಾಧ್ಯವಿಲ್ಲ. ಇದಲ್ಲದೆ, ವಕೀಲರ ಪರಿಷತ್ತುಗಳ ಶಿಸ್ತು ಸಮಿತಿಗಳಲ್ಲಿ ವಕೀಲರ ವಿರುದ್ಧ ದೂರುಗಳಿದ್ದರೆ ಅಂತಹ ಪ್ರಕರಣಗಳನ್ನು ಶಾಶ್ವತ ಸಮಿತಿಯು ಹೇಗೆ ಪರಿಗಣಿಸಬೇಕು ಎಂಬ ಪ್ರಶ್ನೆ ಇದೆ" ಎಂದು ನ್ಯಾಯಾಲಯ ಕೇಳಿದೆ.

ಈ ನಿಟ್ಟಿನಲ್ಲಿ, ಹಿರಿಯ ಹುದ್ದೆಗೆ ಮೌಲ್ಯಮಾಪನ ಮಾಡುವಾಗ ಅಂತಹ ವಕೀಲರ ಅಂಕಗಳನ್ನು ಕಡಿಮೆ ಮಾಡಲು ಪ್ರಸಕ್ತ ವಿಧಾನದಲ್ಲಿ ಯಾವುದೇ ಅವಕಾಶವಿಲ್ಲ. ಕಾರಣವೇನೆಂದರೆ, 25 ಅಂಕಗಳನ್ನು ನ್ಯಾಯಾಲಯದ ಮುಂದೆ ವಕೀಲರ ಕಾರ್ಯಕ್ಷಮತೆ ಅಥವಾ ಸಾಮಾನ್ಯ ಖ್ಯಾತಿಯ ಆಧಾರದ ಮೇಲೆ ನಿಗದಿಪಡಿಸಲಾಗಿಲ್ಲ, ಬದಲಿಗೆ ಸಂದರ್ಶನದ ಸಮಯದಲ್ಲಿ ವಕೀಲರ ಕಾರ್ಯಕ್ಷಮತೆಯ ಆಧಾರದ ಮೇಲೆ ನಿಗದಿಪಡಿಸಲಾಗಿದೆ ಎನ್ನುವ ಅಂಶದೆಡೆಗೆ ಪೀಠವು ಬೆರಳು ಮಾಡಿತು.

Also Read
ಹಿರಿಯ ವಕೀಲರ ಪದನಾಮ: 97 ವಕೀಲರಿಂದ ಲಿಖಿತ ಪ್ರಸ್ತಾವ ಸಲ್ಲಿಕೆ, ಅಭಿಪ್ರಾಯ ಆಹ್ವಾನಿಸಿದ ಹೈಕೋರ್ಟ್‌

ಹಿರಿಯ ವಕೀಲರಾಗಿ ಪದೋನ್ನತಿ ನೀಡಲು ಮುಖ್ಯ ನ್ಯಾಯಮೂರ್ತಿ ಮತ್ತಿತರ ನ್ಯಾಯಮೂರ್ತಿಗಳ ಸಮಿತಿಯು ಪ್ರತಿಯೊಬ್ಬ ಆಕಾಂಕ್ಷಿಯು ಸಲ್ಲಿಸಿರುವ ತಾನು ಪಾಲ್ಗೊಂಡಿದ್ದ ಪ್ರಕರಣದ ತೀರ್ಪುಗಳನ್ನು, ಬರೆದಿರುವ ಲೇಖನಗಳನ್ನು, ಪುಸ್ತಕಗಳನ್ನು ಓದಲು ಗಂಟೆಗಟ್ಟಲೆ ಸಮಯ ವ್ಯಯಿಸಬೇಕೆ ಎಂಬುದನ್ನು ಪರಿಗಣಿಸಬೇಕಾಗಿದೆ ಎಂದು ಸಹ ನ್ಯಾಯಾಲಯ ಹೇಳಿದೆ.

ಅಂತಿಮವಾಗಿ, ವಕೀಲರ ಮೌಲ್ಯಮಾಪನ ಕುರಿತಾದ ಪ್ರಶ್ನೆಯನ್ನು ಪೂರ್ಣ ನ್ಯಾಯಾಲಯದ ಸದಸ್ಯರು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿತು.

ಹಿರಿಯ ವಕೀಲ ಎಸ್ ಮುರಳೀಧರ್ ಪ್ರಕರಣದ ಅಮಿಕಸ್ ಕ್ಯೂರಿ ಆಗಿದ್ದರು. ಹಿರಿಯ ವಕೀಲ ವಿಪಿನ್ ನಾಯರ್ ಮತ್ತು ವಕೀಲ ಅಮಿತ್ ಶರ್ಮಾ ಅವರು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ​​(ಎಸ್‌ಸಿಎಒಆರ್‌ಎ) ಪರವಾಗಿ ವಾದಮಂಡಿಸಿದರು.

Kannada Bar & Bench
kannada.barandbench.com