
ಇತ್ತೀಚೆಗೆ 70 ನ್ಯಾಯವಾದಿಗಳನ್ನು ಹಿರಿಯ ವಕೀಲರನ್ನಾಗಿ ದೆಹಲಿ ಹೈಕೋರ್ಟ್ ನೇಮಕ ಮಾಡಿದ್ದನ್ನು ಪ್ರಶ್ನಿಸಿ ವಕೀಲ ಮ್ಯಾಥ್ಯೂಸ್ ನೆಡುಂಪರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಹಿರಿಯ ವಕೀಲರ ಹುದ್ದೆಗಳಿದ್ದರೂ ನ್ಯಾಯಾಲಯಗಳು ವಕೀಲರನ್ನು ಬೇರೆ ರೀತಿಯಾಗಿ ನಡೆಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಹೇಳಿದೆ.
ನ್ಯಾಯಮೂರ್ತಿಗಳ ಸಂಬಂಧಿಕರನ್ನು ನ್ಯಾಯಾಲಯಗಳು ಹಿರಿಯ ವಕೀಲರೆಂದು ನೇಮಿಸುತ್ತಿವೆ ಎಂದು ಆರೋಪಿಸಿದ್ದ ನೆಡುಂಪರ ಅವರನ್ನು ನ್ಯಾಯಾಲಯ ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು.
“ತಮ್ಮ ಮಕ್ಕಳನ್ನು ಹಿರಿಯ ವಕೀಲರನ್ನಾಗಿ ಮಾಡಿದ ಎಷ್ಟು ನ್ಯಾಯಮೂರ್ತಿಗಳ ಹೆಸರು ನಿಮ್ಮ ಬಳಿ ಇವೆ?” ಎಂದು ಪ್ರಶ್ನಿಸಿತ್ತು.
ನಂತರ ನೆಡುಂಪರ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಬಂಧಿಕರು ಹಿರಿಯ ವಕೀಲರ ಹುದ್ದೆಯಲ್ಲಿರುವ ಕುರಿತ ಪಟ್ಟಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆದರೆ ನ್ಯಾಯಾಲಯ ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿದೆ.
ದೆಹಲಿ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರ ಹುದ್ದೆ ನೇಮಕಾತಿ ವಿಚಾರ ಆರಂಭದಿಂದಲೂ ವಿವಾದದಲ್ಲಿ ಸಿಲುಕಿದ್ದು ಅಂತಿಮ ಪಟ್ಟಿಯನ್ನು ತಮ್ಮ ಒಪ್ಪಿಗೆಯಿಲ್ಲದೆ ಸಿದ್ಧಪಡಿಸಲಾಗಿದೆ ಎಂದು ದೂರಿ ಶಾಶ್ವತ ಸಮಿತಿಯ ಸದಸ್ಯರೊಬ್ಬರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು.
ದೆಹಲಿ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ, ಸಮಿತಿಯ ಸದಸ್ಯರಾಗಿದ್ದ ಸುಧೀರ್ ನಂದ್ರಜೋಗ್ ಅವರು ಎರಡು ದಿನಗಳ ಕಾಲ ಮಧ್ಯಸ್ಥಿಕೆಯಲ್ಲಿ ನಿರತರಾಗಿದ್ದರಿಂದ, ಅಂತಿಮ ಪಟ್ಟಿಗೆ ಸಹಿ ಹಾಕಿರಲಿಲ್ಲ. ಅದರ ನಡುವೆಯೇ ಪಟ್ಟಿಯನ್ನು ಪೂರ್ಣ ನ್ಯಾಯಾಲಯಕ್ಕೆ ಚರ್ಚೆಗಾಗಿ ಕಳುಹಿಸಲಾಗಿತ್ತು. ಮೂಲ ಪಟ್ಟಿ ತಿರುಚಲಾಗಿದೆ ಎಂದು ಸಹ ಹೇಳಲಾಗಿತ್ತು.